ಬಟ್ಟೆ ಅಂಗಡಿಯಲ್ಲಿ ಕೆಲಸ ಕೊಡಿಸಿ ಎನ್ನುತ್ತಿದ್ದ ಅಮಾನ್ ಈಗ ಭಾರತ ಕಿರಿಯರ ಕ್ರಿಕೆಟ್ ತಂಡದ ನಾಯಕ!
ಹೊಸದಿಲ್ಲಿ : ಆ ಯುವ ಕ್ರೀಡಾಪಟುವಿನ ತಾಯಿ ಸಾಯಾ 2020ರ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ನಿಧನರಾದರು. ಟ್ರಕ್ ಡ್ರೈವರ್ ಆದ ಆ ಯುವಕನ ತಂದೆ ಮೆಹ್ತಾಬ್ ತಮ್ಮ ಉದ್ಯೋಗ ಕಳೆದುಕೊಂಡು ದೀರ್ಘಾವಧಿ ಅಸ್ವಸ್ಥತೆಯಿಂದ ಬಳಲಿ, ಎರಡು ವರ್ಷಗಳ ನಂತರ ಮೃತಪಟ್ಟರು. ಹೀಗಾಗಿ, ಆ ಯುವಕ ಹದಿನಾರನೇ ವಯಸ್ಸಿಗೇ ಅನಾಥನಾದ. ಅದರ ಬೆನ್ನಿಗೇ ಆತನ ಮೇಲೆ ಮೂವರು ಕಿರಿಯ ಒಡ ಹುಟ್ಟಿದವರ ಹೊರೆ ಬಿದ್ದಿತು.
ಆ ಯುವಕನ ಮುಂದೆ ಎರಡು ಆಯ್ಕೆಗಳಿದ್ದವು. ಒಂದು ತನ್ನ ನೆಚ್ಚಿನ ಕ್ರಿಕೆಟ್ ಆಟವನ್ನು ಮುಂದುವರಿಸುವುದು ಅಥವಾ ತನ್ನ ಕನಸನ್ನು ತ್ಯಜಿಸಿ, ಯಾವುದಾದರೂ ಸಣ್ಣ ಪುಟ್ಟ ಉದ್ಯೋಗಕ್ಕಾಗಿ ಅರಸುವುದು. ಆದರೀಗ ಆತನ ತಾಳ್ಮೆ ಫಲ ನೀಡಿದೆ.
ಶನಿವಾರ ಪ್ರಕಟಿಸಲಾಗಿರುವ 19 ವರ್ಷ ವಯಸ್ಸಿನೊಳಗಿನ ಭಾರತೀಯ ಏಕದಿನ ತಂಡದ ನಾಯಕನಾಗಿ ಆತ ಆಯ್ಕೆಯಾಗಿದ್ದಾನೆ. ಮುಂದಿನ ತಿಂಗಳು ಪುದುಚೆರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ತಂಡದ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾನೆ!
ಆತ ಬೇರೆ ಯಾರೂ ಅಲ್ಲ; ಉತ್ತರ ಪ್ರದೇಶದ ಕ್ರಿಕೆಟ್ ಪ್ರತಿಭೆ ಮುಹಮ್ಮದ್ ಅಮಾನ್. ಈ ತಂಡದಲ್ಲಿ ಭಾರತ ತಂಡದ ಮಾಜಿ ನಾಯಕ ಹಾಗೂ ಟಿ20 ವಿಶ್ವ ಕಪ್ ವಿಜೇತ ಭಾರತ ತಂಡದ ಮುಖ್ಯ ತರಬೇತುದಾರರಾಗಿದ್ದ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕೂಡಾ ಆಡುತ್ತಿದ್ದಾರೆ.
(Mohammad Amaan with his coach Rajeev Goya) | PC : The Indian Express
ಉತ್ತರ ಪ್ರದೇಶದ ಸಹರಣ್ ಪುರ್ ನಿವಾಸಿಯಾದ ಅಮಾನ್, ಕಳೆದ ಹೋದ ಕೆಲವು ವರ್ಷಗಳನ್ನು ಮೆಲುಕು ಹಾಕುತ್ತಾ, ಆ ಕರಾಳ ದಿನಗಳನ್ನು ಹೇಗೆ ಕಳೆದೆ ಎಂಬುದು ತಿಳಿಯುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಕುರಿತು The Indian Express ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅಮಾನ್, “ನಾನು ನನ್ನ ತಂದೆಯನ್ನು ಕಳೆದುಕೊಂಡ ಒಂದೇ ದಿನದಲ್ಲಿ ವಯಸ್ಕನಾದೆ ಎಂದು ಅನಿಸಿತ್ತು” ಎಂದು ಹೇಳಿದ್ದಾರೆ. “ನಾನು ನನ್ನ ಕುಟುಂಬದ ಮುಖ್ಯಸ್ಥನಾಗಿದ್ದೆ ಹಾಗೂ ನನ್ನ ಓರ್ವ ಕಿರಿಯ ಸಹೋದರಿ ಹಾಗೂ ಇಬ್ಬರು ಸಹೋದರರ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಿತ್ತು. ಆಗ ನನಗೆ ನಾನೇ ಕ್ರಿಕೆಟ್ ತೊರೆಯಬೇಕು ಅಂದುಕೊಂಡಿದ್ದೆ ಹಾಗೂ ಸಹರಣ್ ಪುರ್ ನಲ್ಲಿ ಉದ್ಯೋಗಕ್ಕಾಗಿಯೂ ಹುಡುಕಾಟ ನಡೆಸಿದ್ದೆ. ಆದರೆ, ಯಾವುದೂ ಪ್ರಯೋಜನವಾಗಲಿಲ್ಲ. ಆದರೆ, ಕೆಲವರಿಗೆ ನಾನು ಕ್ರಿಕೆಟ್ ನಲ್ಲಿ ಮುಂದುವರಿಯುವುದನ್ನು ಬಯಸಿದ್ದರು ಹಾಗೂ ನನಗೆ ನೆರವು ನೀಡುವ ಆಸಕ್ತಿ ಹೊಂದಿದ್ದರು” ಎಂದು ಹೇಳಿದ್ದಾರೆ.
ಅಮಾನ್ ಬಹುತೇಕ ಮಂದಗತಿಯ ವೃತ್ತಿಜೀವನದಲ್ಲಿ ಮುಂದುವರಿಯುತ್ತಿದ್ದ ಹೊತ್ತದು. ಆದರೆ, ತಮ್ಮ ಕಹಿ ನೆನಪುಗಳಿಂದ ಹೊರ ಬಂದ ಅಮಾನ್ ತಮ್ಮನ್ನು ತಾವು ಓರ್ವ ವ್ಯಕ್ತಿ ಮತ್ತು ಕ್ರೀಡಾಪಟುವನ್ನಾಗಿ ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
“ನೀವೆಂದಾದರೂ ಹಸಿವಿನಿಂದ ಮಲಗಿದ್ದೀರಾ?” ಎಂದು ಪ್ರಶ್ನಿಸುವ ಅಮಾನ್, “ಹಸಿವಿಗಿಂತ ದೊಡ್ಡದು ಮತ್ಯಾವುದೂ ಇಲ್ಲ. ಆಹಾರವನ್ನು ಸಂಪಾದಿಸುವುದು ಎಷ್ಟು ಕಠಿಣ ಎಂಬುದು ತಿಳಿದಿರುವುದರಿಂದ ನಾನೀಗ ನನ್ನ ಆಹಾರವನ್ನು ಪೋಲು ಮಾಡಲು ಹೋಗುವುದಿಲ್ಲ. ನಮಗೆ ಕಾನ್ಪುರದಲ್ಲಿ ಉತ್ತರ ಪ್ರದೇಶ ಕ್ರಿಕೆಟ್ ಒಕ್ಕೂಟದಿಂದ ವಯೋಮಾನ ಗುಂಪಿನ ತರಬೇತಿ ನಡೆಯುತ್ತಿತ್ತು. ನಾನು ಕಿಕ್ಕಿರಿದು ತುಂಬಿರುತ್ತಿದ್ದ ಸಾಮಾನ್ಯ ಬೋಗಿಯಲ್ಲಿ ಶೌಚಾಲಯದ ಪಕ್ಕ ಕುಳಿತು ಆಗ ಪ್ರಯಾಣಿಸುತ್ತಿದ್ದೆ. ಆದರೆ, ಈಗ ವಿಮಾನದಲ್ಲಿ ಪ್ರಯಾಣ ಬೆಳೆಸುವುದು ಹಾಗೂ ಉತ್ತಮ ಹೋಟೆಲ್ ನಲ್ಲಿ ತಂಗುವುದನ್ನು ನೆನದಾಗ, ಅದಕ್ಕೆಲ್ಲ ದೇವರೇ ಕಾರಣ ಎಂದು ನನಗನ್ನಿಸುತ್ತದೆ” ಎನ್ನುತ್ತಾರೆ.
ತಾನು ಖಾಲಿ ಹೊಟ್ಟೆಯಲ್ಲಿ ಮಲಗಿದ್ದು, ಕ್ರಿಕೆಟ್ ಪ್ರವಾಸದ ಸಂದರ್ಭದಲ್ಲಿ ತಾನು ಗಳಿಸಿದ ದಿನಭತ್ಯೆಯನ್ನು ತನ್ನ ಕುಟುಂಬವನ್ನು ಸಲಹಲು ಬಳಸಿದ್ದು ಹಾಗೂ ಕಳೆದ ಅಂಡರ್ 19 ಋತುವಿನಲ್ಲಿ ಗಳಿಸಿದ ಪ್ರತಿ ಪೈಸೆಯನ್ನೂ ತನ್ನ ಮನೆಯನ್ನು ರಿಪೇರಿ ಮಾಡಲು ಬಳಸಿದ್ದನ್ನು ಅಮಾನ್ ಸ್ಮರಿಸುತ್ತಾರೆ.
ಆದರೆ, ತಾನು ತನ್ನ ಕನಸನ್ನು ಮುಂದುವರಿಸಲು ಸಾಧ್ಯವಾಗಿದ್ದಕ್ಕೆ ಅಮಾನ್ ಕೃತಜ್ಞತೆ ಅರ್ಪಿಸುತ್ತಾರೆ. “ನಾನು ಆ ಎಲ್ಲ ಕ್ಷಣಗಳನ್ನೂ ನೆನಪಿಟ್ಟುಕೊಂಡಿದ್ದೇನೆ. ಆ ಸಮಯಗಳು ಎಷ್ಟು ಕಠಿಣವಾಗಿತ್ತು ಎಂದು ನಾನು ವಿವರಿಸಲು ಸಾಧ್ಯವಿಲ್ಲ” ಎನ್ನುವ ಅಮಾನ್, ತರಬೇತುದಾರ ರಾಜೀವ್ ಗೋಯಲ್ ರಂತಹ ಕೆಲವು ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುತ್ತಾರೆ.
ಖಿನ್ನತೆಗೆ ತುತ್ತಾಗಿದ್ದ ಅಮಾನ್ ರನ್ನು ನೆನಪಿಸಿಕೊಳ್ಳುವ ಗೋಯಲ್, “ಆತ ತನ್ನ ಕುಟುಂಬಕ್ಕೆ ನೆರವು ನೀಡಲು ಉದ್ಯೋಗಕ್ಕಾಗಿ ಅರಸುತ್ತಿದ್ದ. ನನಗೆ ಬಟ್ಟೆ ಅಂಗಡಿಯಲ್ಲೇನಾದರೂ ನೌಕರಿ ಕೊಡಿಸಿ. ಮನೆಯಲ್ಲಿ ದುಡ್ಡಿಲ್ಲ ಎಂದು ಹೇಳಿದ್ದ” ಎನ್ನುತ್ತಾರೆ. ಆಗ ನಾನು, “ನನ್ನ ಅಕಾಡೆಮಿಗೆ ಬಂದು ಯುವ ಆಟಗಾರರಿಗೆ ತರಬೇತಿ ನೀಡು ಎಂದು ಸಲಹೆ ನೀಡಿದ್ದೆ ಎಂದು ಹೇಳುತ್ತಾರೆ. ನನ್ನ ಕೈಲಾದ ಎಲ್ಲವನ್ನೂ ನಾನು ಮಾಡಿದ್ದೆ. ಹೀಗಾಗಿ, ಆತ ಪ್ರತಿದಿನ ಎಂಟು ಗಂಟೆಗಳ ಕಾಲ ಮೈದಾನದಲ್ಲಿ ಇರುತ್ತಿದ್ದ. ಈ ಕಠಿಣ ಪರಿಶ್ರಮವಿಂದು ಆತನಿಗೆ ಲಾಭ ತಂದಿದೆ” ಎನ್ನುತ್ತಾರೆ ಗೋಯಲ್.