ಸಂಸದರೇ ನಿಮಗೆ ಬಾಯಿಯಿಲ್ಲವೇ, ಮಾತನಾಡಿ, ನಮ್ಮ ಪಾಲಿನ ಹಣ ಕೇಳಿ : ಸಿಎಂ ಸಿದ್ದರಾಮಯ್ಯ

Update: 2024-02-07 14:12 GMT

Photo: X/@ANI

ಹೊಸದಿಲ್ಲಿ: ಬರಗಾಲವನ್ನು ಕರ್ನಾಟಕ ಸಮರ್ಥವಾಗಿ ನಿಭಾಯಿಸಿದೆ. 31 ಲಕ್ಷ ರೈತರಿಗೆ ತಲಾ 2 ಸಾವಿರ ರೂ ನೀಡಿದ್ದೇವೆ. ಕೇಂದ್ರದಿಂದ ಪರಿಹಾರ ಹಣ ಬಂದ ನಂತರವೂ ನಾವು ಮತ್ತೆ ಪರಿಹಾರ ನೀಡುತ್ತೇವೆ. ಕೇಂದ್ರದ ಪಾಲಿನ ನಮ್ಮ ಪರಿಹಾರ ಕೊಡಿ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರೇ ನಮ್ಮ ಪಾಲಿನ ಹಣ ಕೇಳಿ. ಸಂಸದರೇ ಮಾತನಾಡಿ, ನಿಮಗೆ ಬಾಯಿಯಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ದಿಲ್ಲಿಯ ಜಂತರ್‌ ಮಂತರ್‌ ನಲ್ಲಿ ಕರ್ನಾಟಕ ಸರಕಾರದಿಂದ ಬುಧವಾರ ಆಯೋಜಿಸಿರುವ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಇದು ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ವಿರುದ್ಧದ ಚಳವಳಿ ಅಲ್ಲ. ಅದೇ ಕಾರಣಕ್ಕೆ ನಾನು ಬಿಜೆಪಿ ಜೆಡಿಎಸ್ ಸಂಸದರಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದೆ. ಇದು ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೇಂದ್ರದ ಗಮನಕ್ಕೆ ತರುವ ಪ್ರತಿಭಟನೆ ಎಂದು ಹೇಳಿದರು.

 ‘ರಾಜ್ಯದ ತೆರಿಗೆ ಪಾಲು 14ನೆ ಹಣಕಾಸು ಆಯೋಗದಲ್ಲಿ ಶೇ.4.71 ಇತ್ತು. ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ರಚಿಸಲಾದ 15ನೆ ಹಣಕಾಸು ಆಯೋಗದಲ್ಲಿ ಇದನ್ನು ಶೇ.3.64ಕ್ಕೆ ಇಳಿಸಲಾಯಿತು. ಇದರಿಂದಾಗಿ, ನಮ್ಮ ರಾಜ್ಯಕ್ಕೆ ಇದುವರೆಗೂ 1.87ಲಕ್ಷ ಕೋಟಿ ರೂ.ಅನ್ಯಾಯ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಕೆಚ್ಚಲು ಕತ್ತರಿಸಬೇಡಿ: ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೆ ಕೊಂದು ಹಾಕಬೇಡಿ, ಹಾಲು ಕೊಡುವ ಕೆಚ್ಚಲು ಕತ್ತರಿಸಬೇಡಿ ಎಂದು ಒತ್ತಾಯಿಸಲು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿಗೆ ಅನುದಾನ ಕೊಡುವ ಬಗ್ಗೆ ನಮಗೆ ತಕರಾರುಗಳಿಲ್ಲ. ಆದರೆ, ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಕೇಂದ್ರ ಸರಕಾರದ ಅಂಕಿ ಅಂಶಗಳೇ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಹೇಳುತ್ತಿವೆ. ಕನ್ನಡಿಗರು 4.30 ಲಕ್ಷ ಕೋಟಿ ರೂ.ತೆರಿಗೆ ಕಟ್ಟುತ್ತೇವೆ. ನಮಗೆ ವಾಪಾಸ್ ಬರುವುದು ಕೇವಲ 50 ಸಾವಿರ ಕೋಟಿ ರೂ.ಮಾತ್ರ. ನಾವು ಕೊಡುವ ಪ್ರತಿ 100 ರೂ. ನಲ್ಲಿ 13 ರೂ. ಮಾತ್ರ ನಮಗೆ ವಾಪಾಸ್ ಬರುತ್ತಿದೆ ಎಂದು ಅವರು ಕಿಡಿಗಾರಿದರು.

15ನೆ ಹಣಕಾಸು ಆಯೋಗದಿಂದಾಗಿ ನಮಗೆ 62,098 ಕೋಟಿ ರೂ.ತೆರಿಗೆಯೊಂದರಲ್ಲೆ ಅನ್ಯಾಯ ಆಗಿದೆ. ಆದರೆ ಬಿಜೆಪಿ ನಿರಂತರ ಸುಳ್ಳುಗಳ ಮೂಲಕ ತಮ್ಮ ದ್ರೋಹವನ್ನು ಮರೆ ಮಾಚಲು ನೋಡುತ್ತಿದೆ. ಕೇಂದ್ರದ ಬಜೆಟ್ ಗಾತ್ರ ಹೆಚ್ಚಾದ ಹಾಗೆ ರಾಜ್ಯದ ತೆರಿಗೆ ಪಾಲು ಹೆಚ್ಚಾಗಬೇಕಿತ್ತು. ಆದರೆ ಈ ಪ್ರಮಾಣದಲ್ಲೂ ನಮಗೆ ಹಂಚಿಕೆ ಆಗಿಲ್ಲ. ಇದನ್ನು ಕೇಂದ್ರದ ಅಂಕಿ ಅಂಶಗಳೇ ಹೇಳುತ್ತಿವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕಳೆದ 10 ವರ್ಷಗಳಿಂದ ಹಂತ ಹಂತವಾಗಿ ರಾಜ್ಯದ ಪಾಲಿನ ತೆರಿಗೆ ಪಾಲು, ಕೇಂದ್ರದ ಅನುದಾನದ ಪಾಲು ನಿರಂತರವಾಗಿ ಕಡಿಮೆ ಆಗುತ್ತಿದೆ. ಕೇಂದ್ರದ ಬಜೆಟ್ ಗಾತ್ರ ದುಪ್ಪಟ್ಟಾಗಿದೆ. ಆದರೆ ರಾಜ್ಯದ ಪಾಲಿನ ತೆರಿಗೆ ಪಾಲು ಅರ್ಧಕ್ಕಿಂತ ಕಡಿಮೆ ಆಗಿದೆ. ಜಿಎಸ್‍ಟಿಯಲ್ಲಿ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಇನ್ನೂ ಬೃಹತ್ತಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಸಂಸದರು ಮೋದಿ ಎದುರಿಗೆ ಕೋಲೆ ಬಸವನ ರೀತಿ ತಲೆ ಅಲ್ಲಾಡಿಸುವುದು ಬಿಟ್ಟರೆ ಬೇರೆ ಏನು ಮಾಡಲಿಲ್ಲ

ಜಿಎಸ್‍ಟಿಯಲ್ಲಿ ಆಗುವ ಅನ್ಯಾಯವನ್ನು ವಿಶೇಷ ಪರಿಹಾರ ಕೊಟ್ಟು ಸರಿದೂಗಿಸುವುದಾಗಿ ಹೇಳಿದ್ದರು. ಈಗ ಪರಿಹಾರ ಕೊಡುತ್ತಿಲ್ಲ. ಇದರಿಂದ 59 ಸಾವಿರ ಕೋಟಿ ರೂ.ಗಳಿಗೂ ಅಧಿಕ ಅನ್ಯಾಯ, ವಂಚನೆ ಆಗಿದೆ. ಕೇಂದ್ರದ ನಿರಂತರ ದ್ರೋಹ, ವಂಚನೆಯಿಂದ ರಾಜ್ಯದ ತೆರಿಗೆ ಸಂಗ್ರಹ ಪ್ರಮಾಣ ಶೇ.15 ರಿಂದ ಶೇ.9ಕ್ಕೆ ಕುಸಿದಿದೆ. ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರು ಕೋಲೆ ಬಸವನ ರೀತಿಯಲ್ಲಿ ಮೋದಿ ಎದುರಿಗೆ ತಲೆ ಅಲ್ಲಾಡಿಸುವುದು ಬಿಟ್ಟರೆ ರಾಜ್ಯದ ಪಾಲನ್ನು ಬಾಯಿ ಬಿಟ್ಟು ಕೇಳಲೇ ಇಲ್ಲ ಎಂದು ಅವರು ಟೀಕಿಸಿದರು.

ನಮಗೆ ಅನ್ಯಾಯ ಸರಿಪಡಿಸಲು ವಿಶೇಷ ಅನುದಾನ 11,495 ಕೋಟಿ ರೂ.ಕೊಡುತ್ತೇವೆ ಎಂದು ಘೋಷಿಸಿದರು. ಆದರೆ ಈ ಹಣ ಕೊಡಬೇಡಿ ಎಂದು ತಡೆ ಹಿಡಿದವರೇ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಆದರೆ ಈಗೇಕೆ ಸುಳ್ಳು ಹೇಳುತ್ತಿದ್ದೀರಿ ಮೇಡಂ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಸತ್ಯ ಮುಚ್ಚಿ ಹಾಕಲು ಸಾಧ್ಯವಿಲ್ಲ

15ನೆ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತ ರಾಜ್ಯಗಳಿಂದ ಒಬ್ಬೆ ಒಬ್ಬ ಸದಸ್ಯನೂ ಇರಲಿಲ್ಲ. ಇದರಿಂದ ನಮ್ಮ ರಾಜ್ಯಗಳಿಗೆ ಅನ್ಯಾಯ ಆಗಿದೆ. ಯಡಿಯೂರಪ್ಪ, ಬೊಮ್ಮಾಯಿ, ಮೋದಿ ಎಷ್ಡೇ ಸುಳ್ಳುಗಳನ್ನು ಹೇಳಿದರೂ ಸತ್ಯ ಮುಚ್ಚಿ ಹಾಕಲು ಸಾಧ್ಯವಿಲ್ಲ. ರಾಜ್ಯಕ್ಕೆ ಭೀಕರ ಬರಗಾಲ ಬಂತು. ಸೆಪ್ಟೆಂಬರ್ ನಿಂದ ನಿರಂತರವಾಗಿ ರಾಜ್ಯದ ಪಾಲಿನ ಬರ ಪರಿಹಾರ ಕೊಡಿ ಎಂದು ಒತ್ತಾಯಿಸುತ್ತಲೇ ಇದ್ದೇವೆ. ಆದರೆ ಇದುವರೆಗೂ ಒಂದೇ ಒಂದು ರೂಪಾಯಿ ಬರಪರಿಹಾರ ಕೊಟ್ಟಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಮಹಾದಾಯಿ,ಕೃಷ್ಣಾ ಮೇಲ್ದಂಡೆ ಹಾಗೂ ಮಹಾದಾಯಿ ಯೋಜನೆಗೆ ಒಂದು ರೂಪಾಯಿಯೂ ಬಂದಿಲ್ಲ

ಬರದಿಂದ ರಾಜ್ಯದ ಜನತೆ ಕಂಗಾಲಾಗದಂತೆ ರಾಜ್ಯ ಸರಕಾರವೇ ಪರಿಹಾರ ನೀಡಿದೆ. 31 ಲಕ್ಷ ರೈತರಿಗೆ 650 ಕೋಟಿ ರೂ.ಬರ ಪರಿಹಾರವನ್ನು ರಾಜ್ಯದ ಬೊಕ್ಕಸದಿಂದಲೇ ಕೊಟ್ಟಿದ್ದೇವೆ. ಇನ್ನೂ ರೈತರಿಗೆ ಪರಿಹಾರ ಕೊಡುವವರಿದ್ದೇವೆ. ಎನ್‍ಡಿಆರ್ ಎಫ್ ನಿಧಿಗಾಗಿ ಕಾಯುತ್ತಲೆ ಇದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ಕೇಂದ್ರ ಬಜೆಟ್‍ನಲ್ಲಿ ಘೋಷಿಸಿದ್ದರು. ಇದರಲ್ಲೂ ಒಂದು ರೂಪಾಯಿ ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮಹಾದಾಯಿ ಯೋಜನೆಗೆ ಇವತ್ತಿನವರೆಗೂ ಕೇಂದ್ರ ಸರಕಾರ ಅನುಮತಿ ಕೊಟ್ಟಿಲ್ಲ. ಕೃಷ್ಣಾ ಮೇಲ್ದಂಡೆ ಬಗ್ಗೆ ಇವತ್ತಿನವರೆಗೂ ಗೆಜೆಟ್ ನೋಟಿಫಿಕೇಷನ್ ಆಗಲಿಲ್ಲ. ಈಗ ಮಾಜಿ ಪ್ರಧಾನಿ ದೇವೇಗೌಡರು ಮೋದಿಯನ್ನು ಹೊಗಳುತ್ತಾ ಕುಳಿತಿದ್ದಾರೆ. ಹಾಗಿದ್ದರೆ ಮೇಕೆದಾಟು, ಕೃಷ್ಣ ಮೇಲ್ದಂಡೆಗೆ ಅನುಮತಿ ಕೊಡಿಸಲಿ. ರಾಜ್ಯಕ್ಕೆ ಬರಬೇಕಾದ ಹಣ ವಾಪಾಸ್ ಕೊಡಿಸಲಿ ಎಂದು ಮುಖ್ಯಮಂತ್ರಿ ಕರೆ ನೀಡಿದರು.

ರಾಯಚೂರು ಏಮ್ಸ್ ಕೊಡ್ತೀವಿ ಎಂದರು. ನಾನು ಮುಖ್ಯಮಂತ್ರಿಯಾಗೀ ಮೂರು ಪತ್ರ ಬರೆದೆ. ಆದರೆ, ಇವತ್ತಿನವರೆಗೂ ಏಮ್ಸ್ ಬರಲಿಲ್ಲ. ಪತ್ರಗಳಿಗೆ ಉತ್ತರವೂ ಬರಲಿಲ್ಲ. ಎಲ್ಲ ಜಾತಿ, ಧರ್ಮದ ಬಡವರಿಗೆ ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆವು. ದುಡ್ಡು ಕೊಡುತ್ತೇವೆ ಅಕ್ಕಿ ಕೊಡಿ ಎಂದರೂ ಅಕ್ಕಿ ಕೊಡಲಿಲ್ಲ. ಇಷ್ಟಲ್ಲಾ ರಾಜ್ಯದ ಜನರಿಗೆ ದ್ರೋಹ ಮಾಡಿ ಈಗ ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿಭಾಗ್ಯ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಸ್ವಾತಂತ್ರ ಬಂದಾಗಿನಿಂದ ದೇಶದ ಸಾಲ 2014ರ ವರೆಗೂ 54 ಲಕ್ಷ ಕೋಟಿ ರೂ.ಮಾತ್ರ ಇತ್ತು. ಈಗ 180 ಲಕ್ಷ ಕೋಟಿ ರೂ.ಗಳಿಗೆ ಸಾಲ ಏರಿಕೆ ಆಗಿದೆ. ಮೋದಿ ಅವಧಿ ಒಂದರಲ್ಲೇ 130 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಸೆಸ್, ಸರ್ಚಾರ್ಜ್ ಮೂಲಕವೂ ರಾಜ್ಯಕ್ಕೆ ನಿರಂತರ ದ್ರೋಹ, ಅನ್ಯಾಯ ಆಗುತ್ತಿದೆ. ಬರಗಾಲ ಬಂದಿದೆ. ನರೇಗಾ ಕೂಲಿಯ ದಿನಗಳನ್ನು ನಿಯಮದ ಪ್ರಕಾರ 150 ದಿನಗಳಿಗೆ ಏರಿಸಿ ಎಂದು ಮನವಿ ಮಾಡಿದರೂ ಏರಿಕೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರತಿಭಟನೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಝಮೀರ್ ಅಹ್ಮದ್ ಖಾನ್, ವೆಂಕಟೇಶ್, ಬೋಸರಾಜು, ಡಾ.ಶರಣಪ್ರಕಾಶ ಪಾಟೀಲ್, ಎಚ್.ಕೆ.ಪಾಟೀಲ್, ಶಾಸಕರಾದ ಲಕ್ಷ್ಮಣ ಸವದಿ, ತನ್ವೀರ್ ಸೇಠ್, ನಸೀರ್ ಅಹ್ಮದ್ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾಂಗ್ರೆಸ್ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News