ದಿಲ್ಲಿ ವಿಮಾನ ನಿಲ್ದಾಣದಲ್ಲಿ ʼಕೋಮು ಬಣ್ಣದʼ ಕಳ್ಳತನದ ಕಥೆ ಹೆಣೆದ ವೈದ್ಯ ತುಷಾರ್ ಮೆಹ್ತಾ!

Update: 2025-01-28 15:01 IST
Dr Tushar Mehta

ಡಾ.ತುಷಾರ್ ಮೆಹ್ತಾ (Photo:Facebook)

  • whatsapp icon

ಹೊಸದಿಲ್ಲಿ: ದಿಲ್ಲಿ ವಿಮಾನ ನಿಲ್ಧಾಣದಲ್ಲಿ ಪ್ರಯಾಣಿಕನೋರ್ವ ಇಬ್ಬರು ಮುಸ್ಲಿಂ ವ್ಯಕ್ತಿಗಳ ವಿರುದ್ಧ ಆ್ಯಪಲ್ ವಾಚ್ ಕಳ್ಳತನದ ಆರೋಪ ಮಾಡಿದ್ದು, ಈ ಬಗ್ಗೆ ಪರಿಶೀಲಿಸಿದ CISF ಪ್ರಯಾಣಿಕನ ಆರೋಪ ʼಸುಳ್ಳುʼ ಎಂದು ಸಾಬೀತು ಪಡಿಸಿದೆ.

ದಿಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ನನ್ನ ವಾಚ್ ಕಳ್ಳತನವಾಗಿದೆ ಎಂದು ಡಾ.ತುಷಾರ್ ಮೆಹ್ತಾ ಎಂಬವರು ಎಕ್ಸ್ ನಲ್ಲಿ ಆರೋಪವನ್ನು ಮಾಡಿದ್ದರು. ಸುಹೈಬ್ ಮತ್ತು ಎಂಡಿ ಸಾಕಿಬ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಆಪಾದಿತ ಕಳ್ಳತನದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದರು. ಈ ಆರೋಪದ ಬಗ್ಗೆ ವಾಸ್ತವಾಂಶವನ್ನು ಪರಿಶೀಲನೆ ನಡೆಸದೆ ಮಾಧ್ಯಮಗಳು ಸುದ್ದಿಯನ್ನು ಕೂಡ ಬಿತ್ತರಿಸಿದ್ದವು.

ಡಾ.ತುಷಾರ್ ಮೆಹ್ತಾ ಪೋಸ್ಟ್‌ ನಲ್ಲಿ ಏನಿತ್ತು?

ʼಇಂದು ವಿಚಿತ್ರ ಮತ್ತು ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗಾಗಿ ನನ್ನ ಆಪಲ್ ವಾಚ್ ನ್ನು ಟ್ರೇನಲ್ಲಿ ಇರಿಸಿದ್ದೆ, ಆದರೆ ಸ್ಕ್ಯಾನರ್ ಅನ್ನು ದಾಟಿ ಮುಂದೆ ಬಂದಾಗ ನಾನು ವಸ್ತುಗಳನ್ನು ಮತ್ತೆ ನನ್ನ ಲ್ಯಾಪ್ ಟಾಪ್ ಬ್ಯಾಗ್ ಗೆ ಹಾಕಲು ಪ್ರಾರಂಭಿಸಿದೆ. ಏನೋ ಕಾಣೆಯಾಗಿದೆ ಎಂದು ನನಗೆ ಅನಿಸಿತು ಮತ್ತು ನನ್ನ ವಾಚ್ ನನ್ನ ಬಳಿ ಇಲ್ಲ ಎಂದು ನನಗೆ ಅರಿವಾಯಿತು. ನಾನು ಅಲ್ಲಿ ನಿಂತಿದ್ದ CISF ಸಿಬ್ಬಂದಿಗೆ ಈ ಬಗ್ಗೆ ಕೇಳಿದೆ. ಅವರು ನನ್ನ ಬ್ಯಾಗ್, ಪಾಕೆಟ್ ಇತ್ಯಾದಿಗಳನ್ನು ಮತ್ತೆ ನೋಡುವಂತೆ ಹೇಳಿದರು. ಅದನ್ನು ನಾನು ಮೊದಲೇ ಪರಿಶೀಲಿಸಿದ್ದೆ, ನಾನು ಕುತೂಹಲದಿಂದ ತಿರುಗಿ ನಡೆದುಕೊಂಡು ಹೋಗುವಾಗ ಯಾರೋ ನನ್ನತ್ತ ಹಿಂತಿರುಗಿ ನೋಡುತ್ತಿರುವುದನ್ನು ನೋಡಿದೆ. ನಾನು ಆ ವ್ಯಕ್ತಿಯನ್ನು ಹಿಂಬಾಲಿಸಿದೆ. ಕೆಲವು ಹೆಜ್ಜೆ ಮುಂದೆ ನಡೆದಾಗ ನಾನು ಆ ವ್ಯಕ್ತಿ ವಾಚ್ ಅಂಗಡಿಯೊಂದರಲ್ಲಿ ನಿಂತಿರುವುದನ್ನು ನೋಡಿದೆ. ನಾನು ತಕ್ಷಣ ಅವನ ಬಳಿಗೆ ಹೋಗಿ ಅವನ ಪ್ಯಾಂಟ್ ಜೇಬಿನಲ್ಲಿದ್ದ ವಾಚ್ ತೆಗೆದುಕೊಂಡಿದ್ದೇನೆ. ಆ ಬಳಿಕ ಸಂಬಂಧವಿಲ್ಲದಿದ್ದರೂ ವಾಚ್ ಅಂಗಡಿಯವ ನನ್ನ ಜೊತೆ ಕೆಟ್ಟದಾಗಿ ವರ್ತಿಸಿದ. ಇದರಿಂದಾಗಿ ಅವರಿಬ್ಬರು ಮೊದಲೇ ಪರಿಚಯಸ್ಥರು ಎಂದು ನನಗೆ ಮನವರಿಕೆಯಾಗಿದೆ. ಬಳಿಕ ನಮ್ಮ ನಡುವೆ ವಾಗ್ವಾದ ನಡೆದಿದೆ. ಅಷ್ಟರಲ್ಲಿ ಇನ್ನೋರ್ವ ಅಲ್ಲಿಂದ ಪರಾರಿಯಾಗಿದ್ದಾನೆ. ವಿಮಾನಕ್ಕೆ ತಡವಾಗಿದ್ದರಿಂದ ನಾನು ಅಲ್ಲಿಂದ ಹೊರಟು ಬಂದೆ. ಈ ವೇಳೆ CISF ಸಿಬ್ಬಂದಿ ಅಂಗಡಿಯವನ ಜೊತೆ ಬಂದು ನಾನು ಕೆಟ್ಟ ವರ್ತನೆ ಮಾಡಿದ್ದೇನೆ ಎಂದು ಕ್ಷಮೆ ಕೇಳುವಂತೆ ಸೂಚಿಸಿದ್ದಾನೆ. ನಾನು ನನ್ನನ್ನು ಚಿಕಿತ್ಸೆಗೆ ಭೇಟಿ ಮಾಡುತ್ತಿದ್ದ CISF ನ ಹಿರಿಯ ಅಧಿಕಾರಿಗೆ ಈ ಬಗ್ಗೆ ಕರೆ ಮಾಡಿ ಮಾತನಾಡಿದೆ, ಆ ಬಳಿಕ CISF ಸಿಬ್ಬಂದಿ ನನಗೆ ತೆರಳಲು ಅನುವು ಮಾಡಿಕೊಟ್ಟಿದ್ದಾನೆ. ವಾಚ್ ಅಂಗಡಿಯವನ ಹೆಸರು ಸುಹೈಬ್ ಮತ್ತು ಕಳ್ಳತನ ಮಾಡಿದ ವ್ಯಕ್ತಿಯನ್ನು ಎಂಡಿ ಸಾಕಿಬ್ʼ ಎಂದು ಡಾ.ತುಷಾರ್ ಮೆಹ್ತಾ ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು.

ಡಾ. ಮೆಹ್ತಾ ಅವರ ಪೋಸ್ಟ್ ಕೆಲವೇ ಗಂಟೆಗಳಲ್ಲಿ ಎಕ್ಸ್ ನಲ್ಲಿ ಭಾರೀ ವೈರಲ್ ಆಗಿದೆ. ಹಲವಾರು ಮಾಧ್ಯಮಗಳು ಕೂಡ ಈ ಕುರಿತು ವಾಸ್ತವವನ್ನು ಪರಿಶೀಲಿಸದೆ ಬಣ್ಣ ಬಣ್ಣದ ಶೀರ್ಷಿಕೆಯೊಂದಿಗೆ ಸುದ್ದಿ ಮಾಡಿದೆ. ಇದು ತಪ್ಪು ಮಾಹಿತಿಯನ್ನು ಮತ್ತಷ್ಟು ಬಲಪಡಿಸಿದೆ.

ವಾಸ್ತವವೇನು?

ಡಾ.ತುಷಾರ್ ಮೆಹ್ತಾ ಅವರ ಆರೋಪದ ಬೆನ್ನಲ್ಲೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ CISF ಸಿಬ್ಬಂದಿಗಳು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುವ ಮೂಲಕ ವಿವರವಾದ ತನಿಖೆ ನಡೆಸಿದ್ದಾರೆ. ಡಾ. ಮೆಹ್ತಾ ಅವರೇ ಟ್ರೇಯಿಂದ ತಮ್ಮ ವಾಚ್ ನ್ನು ತೆಗೆದುಕೊಂಡು ಬೋರ್ಡಿಂಗ್ ಗೇಟ್‌ ಗೆ ಹೋಗುವ ಮೊದಲು ಅದನ್ನು ಧರಿಸಿದ್ದರು ಎನ್ನುವುದು ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಮೆಹ್ತಾ ಹೇಳಿರುವಂತೆ ಯಾವುದೇ CISF ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿರುವ ಬಗ್ಗೆ ಅಥವಾ ಇತರ ವ್ಯಕ್ತಿಗಳ ಅನುಮಾನಾಸ್ಪದ ನಡವಳಿಕೆಯ ಬಗ್ಗೆ ಪುರಾವೆಗಳಿಲ್ಲ ಎಂದು ಅಧಿಕೃತ ಹೇಳಿಕೆಯಲ್ಲಿ CISF ಸ್ಪಷ್ಟಪಡಿಸಿದೆ. ದಿಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಕೂಡ CISF ಪರಿಶೀಲನೆ ನಡೆಸಿ ವಾಸ್ತವಾಂಶವನ್ನು ಪತ್ತೆ ಹಚ್ಚಿರುವುದನ್ನು ಒಪ್ಪಿಕೊಂಡಿದೆ.

CISF ವಾಸ್ತವಾಂಶ ಪತ್ತೆ ಹಚ್ಚಿದ ಬಳಿಕ ಡಾ. ಮೆಹ್ತಾ ತಮ್ಮ ಪೋಸ್ಟ್ ಅನ್ನು ಡಿಲಿಟ್ ಮಾಡಿದ್ದಾರೆ.

ಸುಳ್ಳು ಹೇಳಿಕೆ ಬಗ್ಗೆ ಕಳವಳ

ಡಾ. ಮೆಹ್ತಾ ಅವರ ಆರೋಪಗಳು ನಿರ್ದಿಷ್ಟವಾಗಿ ಮುಸ್ಲಿಂ ಹೆಸರುಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿತ್ತು. ಅವರ ಹೇಳಿಕೆಗಳ ಹಿಂದಿನ ಉದ್ದೇಶದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಮರ್ಶಕರು ಕಳವಳ ವ್ಯಕ್ತಪಡಿಸಿದ್ದು, ಕಳ್ಳತನದ ಆರೋಪದ ಸೋಗಿನಲ್ಲಿ ಕೋಮು ನಿರೂಪಣೆಗಳನ್ನು ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಹೋರಾಟಗಾರ ದರ್ಶನ್ ಮಾಂಡ್ಕರ್ ಪೋಸ್ಟ್ ಮಾಡಿದ್ದು, ತುಷಾರ್ ಮೆಹ್ತಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್ನಲ್ಲಿ ವೈದ್ಯ ಎಂದು ಹೇಳಿಕೊಂಡಿದ್ದಾರೆ. ತುಷಾರ್ ಮೆಹ್ತಾ ಅವರು ತಮ್ಮ ಆ್ಯಪಲ್ ವಾಚ್ ಅನ್ನು ಸಿಐಎಸ್ಎಫ್ ಸಿಬ್ಬಂದಿ ಮತ್ತು ಅವರ ಸಹಚರರು ಹೇಗೆ ಕದ್ದಿದ್ದಾರೆ, ಹೇಗೆ ವಾಚ್ ಅನ್ನು ಮರಳಿ ಪಡೆದಿದ್ದೇನೆ ಎಂಬ ಬಗ್ಗೆ ಬರೆದಿದ್ದಾರೆ. ತುಷಾರ್ ಮೆಹ್ತಾ ಕಳ್ಳರ ಹೆಸರುಗಳನ್ನು ಹೈಲೈಟ್ ಮಾಡಿ ಅವರಿಗೆ ಮುಸ್ಲಿಂ ಗುರುತನ್ನು ನೀಡಿದರು. ಮುಖ್ಯವಾಹಿನಿ ಮಾಧ್ಯಮಗಳು ತಕ್ಷಣ ಈ ಸುದ್ದಿಯನ್ನು ಪ್ರಸಾರ ಮಾಡಿದೆ. ಎಕ್ಸ್ ನಲ್ಲೂ ಪೋಸ್ಟ್ ಗಳು ಶೀಘ್ರವಾಗಿ ವೈರಲ್ ಆಗಿದೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಬಳಿಕ CISF ಅವರ ಆರೋಪವನ್ನು ಸುಳ್ಳು ಎಂದು ಪತ್ತೆ ಹಚ್ಚಿದೆ. ಆ ಬಳಿಕ ತುಷಾರ್ ಮೆಹ್ತಾ ಟ್ವೀಟ್ ಮಾತ್ರವಲ್ಲದೆ ಸಂಪೂರ್ಣ ಟ್ವಿಟರ್ ಪ್ರೊಫೈಲ್ ಡಿಲಿಟ್ ಮಾಡಿದರು.

ತುಷಾರ್ ಮೆಹ್ತಾ ತನಿಖಾ ಸಂಸ್ಥೆಗಳಿಂದ ಇಷ್ಟು ತ್ವರಿತ ಪ್ರತಿಕ್ರಿಯೆಯನ್ನು ಬಹುಶಃ ನಿರೀಕ್ಷಿಸಿರಲಿಲ್ಲ. ತುಷಾರ್ ಮೆಹ್ತಾ ಇಸ್ಲಾಮೋಫೋಬಿಯಾದಿಂದಾಗಿ ಮುಸ್ಲಿಮರನ್ನು ದೂಷಿಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಬಹುದೆಂದು ಭಾವಿಸಿದ್ದರು. ಯಾರೂ ಅವರಂತಾಗಬೇಡಿ, ತುಷಾರ್ ಮೆಹ್ತಾ ಹೆಸರು ಗಳಿಸಲು ಸುಳ್ಳು ಕಥೆಗಳನ್ನು ಕಟ್ಟಿದ್ದಾರೆ. ಅವರು ವೈದ್ಯರೆಂದು ಹೇಳಿಕೊಂಡಿದ್ದಾರೆ, ಅದಾದರೂ ಸತ್ಯ ಇದೆಯಾ ಎಂದು ಪತ್ತೆಹಚ್ಚಲು ಯಾರಾದರು ಪರಿಶೀಲಿಸಬೇಕು ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಪತ್ರಕರ್ತ ಮಹಮ್ಮದ್ ಜುಬೈರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಎಕ್ಸ್ ಪೋಸ್ಟ್ ಆಧರಿಸಿದ ಕೆಲವು ಮಾಧ್ಯಮಗಳು ಮಾಡಿರುವ ಸುದ್ದಿ ವರದಿಗಳು ಇಲ್ಲಿವೆ. ಮತ್ತೆ ಬಲಪಂಥೀಯ ಪ್ರಚಾರ ಮಾಧ್ಯಮ OpIndia ಅದರ ಬಗ್ಗೆ ವರದಿ ಮಾಡದಿರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ರಾಜೀವಿ ತ್ಯಾಗಿ ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಸಿಐಎಸ್ ಎಫ್ ಪ್ರತಿಕ್ರಿಯೆಯ ನಂತರ, ಅವರು ತನ್ನ ಪೋಸ್ಟ್ ನ್ನು ಅಳಿಸಿಹಾಕಿ ತನ್ನ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಿದರು. ಮುಸ್ಲಿಂ ಹೆಸರನ್ನು ಸೂಚಿಸಲು ಒಂದು ಕಥೆಯನ್ನು ಹೇಗೆ ಹೆಣೆದಿದ್ದಾರೆ ನೋಡಿ. ನಮ್ಮ ಸಮಾಜ ಎಷ್ಟು ರೋಗಗ್ರಸ್ತ ಸಮಾಜವಾಗಿದೆ ಎಂದು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News