ತ್ರಿಶೂರ್ ಪ್ರಚಾರ ಸಭೆಗೆ ಜನರ ನೀರಸ ಪ್ರತಿಕ್ರಿಯೆ: ಬಿಜೆಪಿ ಕಾರ್ಯಕರ್ತರೊಡನೆ ತಾಳ್ಮೆ ಕಳೆದುಕೊಂಡ ನಟ ಸುರೇಶ್ ಗೋಪಿ

Update: 2024-03-10 08:07 GMT

ಸುರೇಶ್ ಗೋಪಿ | Photo: onmanorama.com

ತ್ರಿಶೂರ್: ಮುಂಬರುವ ಲೋಕಸಭಾ ಚುನಾವಣೆಗೆ NDA ಅಭ್ಯರ್ಥಿಯಾಗಿರುವ ನಟ, ರಾಜಕಾರಣಿ ಸುರೇಶ್ ಗೋಪಿ, ಶಾಸ್ತ್ರಂಪೂವಂ ಬುಡಕಟ್ಟು ಕಾಲನಿಗೆ ಭೇಟಿ ನೀಡಿದ್ದಾಗ ಪಕ್ಷದ ಕಾರ್ಯಕರ್ತರೊಂದಿಗೆ ಅಸಮಾಧಾನಗೊಂಡ ಘಟನೆ ನಡೆದಿದೆ. ಅವರ ಪ್ರಚಾರ ಕಾರ್ಯಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದನ್ನು ಕಂಡು ತಾಳ್ಮೆ ಕಳೆದುಕೊಂಡ ಸುರೇಶ್ ಗೋಪಿ, ಮುಂದಿನ ಬಾರಿ ಸಾಕಷ್ಟು ಪಕ್ಷದ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಇರದೆ ಹೋದರೆ, ನಾನು ಮತ್ತೆ ತಿರುವನಂತಪುರಂಗೆ ಮರಳುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ವರದಿಯಾಗಿದೆ.

ವೈರಲ್ ಆಗಿರುವ ಘಟನೆಯ ವಿಡಿಯೊದಲ್ಲಿ ಸುರೇಶ್ ಗೋಪಿ ಪ್ರಚಾರ ವಾಹನದಲ್ಲಿ ಕುಳಿತುಕೊಂಡು, ಕಾರಿನ ಬಳಿ ನಿಂತಿರುವ ಮಹಿಳಾ ಕಾರ್ಯಕರ್ತರನ್ನು ಬೂತ್ ಏಜೆಂಟ್ ಗಳು ಹಾಗೂ ಪಕ್ಷದ ಕಾರ್ಯಕರ್ತರ ನಿಜವಾದ ಕೆಲಸವೇನು ಎಂದು ಪ್ರಶ್ನಿಸುತ್ತಿರುವುದು ಸೆರೆಯಾಗಿದೆ.

“ನೀವು ನನಗಾಗಿ ಕೆಲಸ ಮಾಡುತ್ತಿದ್ದರೆ, ಮತದಾರರು ಇಲ್ಲಿರುವುದನ್ನು ಖಾತರಿ ಪಡಿಸಿ. ನೀವು ಪ್ರತಿ ಬೂತಿನ ನಾಡಿಯನ್ನು ಅರಿಯಬೇಕು. ನಾವಿಲ್ಲಿ ಯುದ್ಧಕ್ಕಾಗಿ ಬಂದಿಲ್ಲ; ನಾವಿಲ್ಲಿ ಅವರಿಗೆ ನೆರವು ನೀಡಲು ಬಂದಿದ್ದೇವೆ. ಈ ಪ್ರಯತ್ನದಲ್ಲಿ ನೀವು ನನಗೆ ಸಹಾಯ ಮಾಡದಿದ್ದರೆ, ನಾನು ಮತ್ತೆ ತಿರುವನಂತಪುರಕ್ಕೆ ಮರಳಿ, ರಾಜೀವ್ ಚಂದ್ರಶೇಖರ್ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲೂ ಹಿಂಜರಿಯುವುದಿಲ್ಲ. ನಾನು ನನ್ನ ನಾಮಪತ್ರವನ್ನು ಸಲ್ಲಿಸಿಲ್ಲ ಎಂಬುದು ನೆನಪಿರಲಿ” ಎಂದು ಕೈಮುಗಿದು ಪಕ್ಷದ ಕಾರ್ಯಕರ್ತರಿಗೆ ಸುರೇಶ್ ಗೋಪಿ ಹೇಳಿದ್ದಾರೆ.

ನಂತರ ಸುರೇಶ್ ಗೋಪಿಯವರ ಕ್ಷಮೆ ಯಾಚಿಸಿದ ಪಕ್ಷದ ಕಾರ್ಯಕರ್ತರು, ಮುಂದಿನ ದಿನಗಳಲ್ಲಿ ಪ್ರಚಾರ ಕಾರ್ಯವನ್ನು ಬಿರುಸುಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News