ಇಸ್ರೇಲ್-ಹಮಾಸ್ ಯುದ್ಧದ ಕುರಿತು ಚರ್ಚಿಸಿದ ಪ್ರಧಾನಿ ಮೋದಿ ಮತ್ತು ಒಮಾನ್ ಸುಲ್ತಾನ್

Update: 2023-12-16 17:34 GMT

ನರೇಂದ್ರ ಮೋದಿ , ಓಮನ್ ಸುಲ್ತಾನ್ ಹೈತಮ್ ಬಿನ್ ತಾರಿಕ್  | Photo: PTI 

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಓಮನ್ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಇಸ್ರೇಲ್-ಹಮಾಸ್ ಸಂಘರ್ಷದಿಂದಾಗಿ ಉದ್ಭವಿಸಿರುವ ಪರಿಸ್ಥಿತಿ, ಭಯೋತ್ಪಾದನೆಯ ಸವಾಲು ಮತ್ತು ಮುಂದಿನ ಮಾರ್ಗವಾಗಿ ಫೆಲೆಸ್ತೀನ್ ಸಮಸ್ಯೆಗೆ ದ್ವಿರಾಷ್ಟ್ರ ಪರಿಹಾರವೊಂದನ್ನು ಪ್ರಯತ್ನಿಸುವ ಮತ್ತು ಸಾಧಿಸುವ ವ್ಯಾಪಕ ಅಗತ್ಯದ ಕುರಿತು ಶನಿವಾರ ಇಲ್ಲಿ ಚರ್ಚಿಸಿದರು.

ಸುಮಾರು 10 ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಗಮನಾರ್ಹವಾಗಿ ವಿಸ್ತರಿಸುವುದಕ್ಕೆ ಮತ್ತು ಸಾಧ್ಯವಾದಷ್ಟು ಶೀಘ್ರ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವುದಕ್ಕೆ ಉಭಯ ನಾಯಕರು ಒತ್ತು ನೀಡಿದರು.

ಉಭಯ ನಾಯಕರ ನಡುವಿನ ಚರ್ಚೆಗಳನ್ನು ‘ಸಮಗ್ರ ಮತ್ತು ರಚನಾತ್ಮಕ ’ ಎಂದು ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದ ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾತ್ರಾ ಅವರು, ಸಮುದ್ರ ವಲಯ, ಸಂಪರ್ಕ, ಹಸಿರು ಇಂಧನ, ಬಾಹ್ಯಾಕಾಶ, ಡಿಜಿಟಲ್ ಹಣಪಾವತಿ, ಆರೋಗ್ಯ, ಪ್ರವಾಸೋದ್ಯಮ ಹಾಗೂ ಕೃಷಿ ಮತ್ತು ಆಹಾರ ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿ ಮಾರ್ಗವನ್ನು ರೂಪಿಸಲು ಮೋದಿ ಮತ್ತು ಓಮನ್ ಸುಲ್ತಾನರು ಸಹಮತವನ್ನು ವ್ಯಕ್ತಪಡಿಸಿದರು. ಭಾರತ-ಓಮನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ಸಾಧ್ಯವಾದಷ್ಟು ಶೀಘ್ರ ಅಂತಿಮಗೊಳಿಸಲು ಉಭಯ ನಾಯಕರು ಒತ್ತು ನೀಡಿದರು ಎಂದು ತಿಳಿಸಿದರು.

ಓಮನ್ ಸುಲ್ತಾನರು ಶುಕ್ರವಾರ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದು, ಪ್ರಭಾವಿ ಕೊಲ್ಲಿ ದೇಶದ ಅತ್ಯುನ್ನತ ನಾಯಕನಾಗಿ ಇದು ಅವರ ಮೊದಲ ಭಾರತ ಭೇಟಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News