ಜಾಗತಿಕ ಶಾಂತಿಗಾಗಿ ಒಟ್ಟಾಗಿ ದುಡಿಯೋಣ: ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಗೆ ಪ್ರಧಾನಿ ಮೋದಿ ಅಭಿನಂದನೆ
ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಡೊನಾಲ್ಡ್ ಟ್ರಂಪ್ ಅವರ ಈ ಐತಿಹಾಸಿಕ ವಿಜಯಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದಿಸಿದ್ದು, ಜಾಗತಿಕ ಶಾಂತಿಗೆ ಒಟ್ಟಾಗಿ ದುಡಿಯೋಣ ಎಂದು ಕರೆ ನೀಡಿದ್ದಾರೆ.
“ಐತಿಹಾಸಿಕ ಚುನಾವಣಾ ವಿಜಯಕ್ಕಾಗಿ ನನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್ ಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ನೀವು ನಿಮ್ಮ ಹಿಂದಿನ ಅವಧಿಯ ಯಶಸ್ಸಿನ ಮೇಲೆ ಗೆಲುವಿನ ಸಾಧನೆ ನಿರ್ಮಿಸಿದ್ದು, ಭಾರತ-ಅಮೆರಿಕದ ಸಮಗ್ರ ಜಾಗತಿಕ ಹಾಗೂ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಮ್ಮ ಬಾಂಧವ್ಯವನ್ನು ಮರು ನವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಜನಕ್ಕಾಗಿ ನಾವು ಒಟ್ಟಾಗಿ ದುಡಿಯೋಣ ಹಾಗೂ ಜಾಗತಿಕ ಶಾಂತಿ, ಸ್ಥಿರತೆ ಹಾಗೂ ಸಮೃದ್ಧಿಯನ್ನು ಉತ್ತೇಜಿಸೋಣವೆಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ಹಾಗೂ ನರೇಂದ್ರ ಮೋದಿ ನಡುವೆ ಬಲವಾದ ರಾಜತಾಂತ್ರಿಕ ಸಂಬಂಧಗಳು, ವ್ಯೂಹಾತ್ಮಕ ಸಹಕಾರ ಮತ್ತು ಉತ್ತಮವಾದ ಗೆಳೆತನವಿದೆ. ಅವರಿಬ್ಬರ ನಡುವಿನ ಗೆಳೆತನಕ್ಕೆ 2019ರಲ್ಲಿ ಹೂಸ್ಟನ್ ನಲ್ಲಿ ನಡೆದಿದ್ದ ‘ಹೌದಿ ಮೋದಿ’ ಹಾಗೂ 2020ರಲ್ಲಿ ಅಹ್ಮದಾಬಾದ್ ನಲ್ಲಿ ನಡೆದಿದ್ದ ‘ನಮಸ್ತೆ ಟ್ರಂಪ್’ ನಂತಹ ಬೃಹತ್ ಕಾರ್ಯಕ್ರಮಗಳು ಸಾಕ್ಷಿಯಾಗಿದ್ದವು. ಈ ಎರಡು ಬೃಹತ್ ಕಾರ್ಯಕ್ರಮಗಳನ್ನುದ್ದೇಶಿಸಿ ಮಾತನಾಡಿದ್ದ ಟ್ರಂಪ್ ಮತ್ತು ಮೋದಿ, ಪರಸ್ಪರ ಶ್ಲಾಘಿಸಿಕೊಂಡಿದ್ದರು.