ಉತ್ತರಾಖಂಡ: ಪ್ರಧಾನಿಯಿಂದ 4,200 ಕೋ.ರೂ.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ,ಶಿಲಾನ್ಯಾಸ
ಪಿಥೋಡಗಡ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಉತ್ತರಾಖಂಡದಲ್ಲಿ ಸುಮಾರು 4,200 ಕೋ.ರೂ.ಗಳ ವೆಚ್ಚದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಿಲಾನ್ಯಾಸಗಳನ್ನು ನೆರವೇರಿಸಿದರು.
ಈ 23 ಯೋಜನೆಗಳು ಉತ್ತರಾಖಂಡದಲ್ಲಿ ಮೂಲಸೌಕರ್ಯ,ಶಿಕ್ಷಣ, ಆರೋಗ್ಯ,ವಿದ್ಯುತ್,ಕುಡಿಯುವ ನೀರು,ಕ್ರೀಡೆ,ಪ್ರವಾಸೋದ್ಯಮ,ವಿಪತ್ತು ಶಮನ ಮತ್ತು ತೋಟಗಾರಿಗೆ ಕ್ಷೇತ್ರಗಳಿಗೆ ಉತ್ತೇಜನ ನೀಡಲಿವೆ.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಯವರು ಶಿಲಾನ್ಯಾಸ ನೆರವೇರಿಸಿದ ಯೋಜನೆಗಳಲ್ಲಿ 21,398 ಪಾಲಿ-ಹೌಸ್‌ಗಳು,ಹೆಚ್ಚು ಸಾಂದ್ರತೆಯ ಸೇಬು ತೋಟಗಳ ಕೃಷಿ,ಐದು ದ್ವಿಪಥ ರಸ್ತೆಗಳು ಮತ್ತು 32 ಸೇತುವೆಗಳ ನಿರ್ಮಾಣ ಇತ್ಯಾದಿಗಳು ಒಳಗೊಂಡಿವೆ.
ಅವರು ಉದ್ಘಾಟಿಸಿದ ಯೋಜನೆಗಳಲ್ಲಿ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಗಳ ಲಭ್ಯತೆಯನ್ನು ಹೆಚ್ಚಿಸುವ ಯೋಜನೆಗಳು ಸೇರಿವೆ.
ಮೋದಿ ಗುರುವಾರ ಬೆಳಿಗ್ಗೆ ಶಿವನ ವಾಸಸ್ಥಾನವಾದ ಆದಿ ಕೈಲಾಸ ಶಿಖರದ ದರ್ಶನ ಮತ್ತು ಜೋಲಿಂಗ್‌ಕಾಂಗ್‌ನ ಪಾರ್ವತಿ ಕುಂಡದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಉತ್ತರಾಖಂಡಕ್ಕೆ ತನ್ನ ಒಂದು ದಿನದ ಭೇಟಿಯನ್ನು ಆರಂಭಿಸಿದರು.
ಬಳಿಕ ಗಡಿ ಗ್ರಾಮ ಗುಂಜಿಗೆ ತೆರಳಿದ ಮೋದಿ ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿಗಳೊಂದಿಗೆ ಸಂವಾದವನ್ನು ನಡೆಸಿದರು ಮತ್ತು ಸ್ಥಳೀಯ ಉತ್ಪನ್ನಗಳ ಪ್ರದರ್ಶನದಲ್ಲಿ ಪಾಲ್ಗೊಂಡರು.