ಪತ್ರಕರ್ತನ ವೀಡಿಯೊವನ್ನು ಇಮೋಜಿಯೊಂದಿಗೆ ಟ್ವೀಟ್ ಮಾಡಿದ ಪ್ರಧಾನಿ ಮೋದಿ
ಹೊಸದಿಲ್ಲಿ: ವಿರೋಧ ಪಕ್ಷಗಳು ವಿಧಾನಸಭಾ ಚುನಾವಣೆಗಳಲ್ಲಿ ಅನುಭವಿಸಿದ ಸೋಲಿನ ಹತಾಶೆಯನ್ನು ಸಂಸತ್ತಿನಲ್ಲಿ ಹೊರ ಹಾಕಕೂಡದು ಎಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. “ದೇಶವು ನಕಾರಾತ್ಮಕತೆಯನ್ನು ನಿರಾಕರಿಸಿದೆ. ನಾವು ಲೋಕಸಭಾ ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ವಿರೋಧ ಪಕ್ಷಗಳ ಸ್ನೇಹಿತರೊಂದಿಗೆ ಮಾತುಕತೆ ನಡೆಸಿದ್ದೇವೆ. ಎಲ್ಲರಿಂದಲೂ ಸಹಕಾರ ಕೋರಿದ್ದೇವೆ. ಈ ಬಾರಿ ಕೂಡಾ ನಾವು ಅಂತಹ ಎಲ್ಲ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿದ್ದೇವೆ” ಎಂದು ಅವರು ಹೇಳಿದ್ದರು.
“ವಿಧಾನಸಭಾ ಚುನಾವಣೆಯ ಫಲಿತಾಂಶದ ಆಧಾರದಲ್ಲಿ ಮಾತನಾಡುವುದಾದರೆ, ವಿರೋಧ ಪಕ್ಷಗಳಿಗೆ ಕಲಿಯಲು ಇದು ಸುವರ್ಣಾವಕಾಶವಾಗಿದೆ. ಸೋಲಿನಿಂದ ಹತಾಶರಾಗುವವ ಬದಲು, ಅವರು ಈ ಸೋಲಿನಿಂದ ಪಾಠ ಕಲಿಯಬೇಕು. ಕಳೆದ ಒಂಬತ್ತು ವರ್ಷಗಳಿಂದ ಪ್ರದರ್ಶಿಸಿರುವ ನಕಾರಾತ್ಮಕ ಅಭ್ಯಾಸವನ್ನು ಬಿಡಬೇಕು. ಅವರು ಈ ಬಾರಿಯ ಅಧಿವೇಶನದಲ್ಲಿ ಸಕಾರಾತ್ಮಕತೆಯೊಂದಿಗೆ ಮುಂದುವರಿದರೆ, ದೇಶವು ಅವರೆಡೆಗಿನ ದೃಷ್ಟಿಕೋನವನ್ನು ಬದಲಿಸಿಕೊಳ್ಳಲಿದೆ. ಆಗ ಅವರಿಗೆ ಹೊಸ ಬಾಗಿಲು ತೆರೆದುಕೊಳ್ಳಲೂ ಬಹುದು” ಎಂದೂ ಅವರು ಅಭಿಪ್ರಾಯ ಪಟ್ಟಿದ್ದರು.
ಈ ನಡುವೆ ತಮ್ಮ ಟಿವಿ ಕಾರ್ಯಕ್ರಮ ಹಾಗೂ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ನಲ್ಲಿ ಬಿಜೆಪಿಯ ಗೆಲುವಿನ ನಂತರ ಆಗುತ್ತಿರುವ ತಲೆಕೆಳಗಾದ ಲೆಕ್ಕಾಚಾರಕ್ಕೆ ಪತ್ರಕರ್ತ ಶಿವ್ ಅರೂರ್ ಬೊಟ್ಟು ಮಾಡಿದ್ದರು. “ವೀಕ್ಷಕರೆ, ಇವೆಲ್ಲ ರಾಜಸ್ಥಾನ, ಛತ್ತೀಸ್ ಗಢ ಹಾಗೂ ಮಧ್ಯಪ್ರದೇಶದಲ್ಲಿನ ಚುನಾವಣಾ ಫಲಿತಾಂಶಕ್ಕಾಗಿ ನೀಡಲಾಗುತ್ತಿರುವ ಕೆಲವು ಸಮಜಾಯಿಷಿಗಳು. ಬಿಜೆಪಿ ವಿರೋಧಿ ಶಕ್ತಿಗಳನ್ನು ನಿರಾಕರಿಸುವ ಹೊರತು ಮತ್ತೇನೂ ಮಾಡಲು ಸಾಧ್ಯವಿಲ್ಲದೇ ಸುಮ್ಮನೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಗೆ ಪಕ್ಷಕ್ಕೆ ಮತ ಹಾಕಿದವರನ್ನು ಅನಕ್ಷರಸ್ಥರು, ಶ್ರಮಿಕರು, ಬುದ್ಧಿಹೀನ ವಂಚಕರು ಎಂದು ಹಣೆಪಟ್ಟಿಯನ್ನು ಹಚ್ಚುತ್ತಿದೆ. ಇವಿಷ್ಟು ಇಂದಿನ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಅಚ್ಚರಿಗೊಳಿಸುವಷ್ಟು ತಿಪ್ಪೆ ಸಾರಿಸುವ ನೆಪಗಳ ಪಟ್ಟಿ” ಎಂದು ಶಿವ ಅರೂರ್ ವ್ಯಂಗ್ಯವಾಡಿದ್ದರು.
ಮುಂದುವರಿದು, ಬಿಜೆಪಿಯ ಚುನಾವಣಾ ಗೆಲುವಿನ ಹಿಂದೆ ಇರುವ ಹಿಂದುತ್ವದ ಪಾತ್ರದತ್ತ ಬೊಟ್ಟು ಮಾಡಿದ ವಿಶ್ಲೇಷಕರನ್ನೂ ವಿಡಂಬಿಸಿದ್ದ ಅವರು, “ಹಿಂದಿ ಭಾಷಿಕ ಪ್ರದೇಶಗಳಲ್ಲಿನ ಜನರ ಸಾಕ್ಷರತೆ ಪ್ರಮಾಣ ತೀರಾ ಕಡಿಮೆ ಇದ್ದರೆ, ಅವರ ಸಂತಾನೋತ್ಪತ್ತಿ ಅಧಿಕವಿದೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿನ ಜನರು ಹಿಂದುತ್ವಕ್ಕೆ ಆದ್ಯತೆ ನೀಡುತ್ತಾರೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿನ ಮತದಾರರು ದೊಡ್ಡ ಉದ್ಯಮಕ್ಕೆ ಕೊಡುಗೆ ನೀಡಿದ್ದಾರೆ. ಮತದಾರರು ಫ್ಯಾಸಿಸಂ ಅನ್ನು ಸಂತುಷ್ಟಗೊಳಿಸಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಮೋದಿಯನ್ನು ಪರಾಭವಗೊಳಿಸಿದ್ದಾರೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಬಿಜೆಪಿ ಅಕ್ರಮವೆಸಗಿದೆ. ಕಮಲ್ ನಾಥ್ ರಾಹುಲ್ ಗಾಂಧಿಯನ್ನು ಸೋಲಿಸಿದ್ದಾರೆ. ಭೂಪೇಶ್ ಬಘೇಲ್ ಗಾಂಧಿಗಳಿಗೆ ವಿಶ್ವಾಸ ದ್ರೋಹವೆಸಗಿದ್ದಾರೆ. ಗೋಮಾತೆಯ ಪ್ರದೇಶವು ಯಾವಾಗಲೂ ಭಾರತವನ್ನು ಹಿಂದಕ್ಕೆ ನೂಕಿದೆ. ಹಿಂದಿ ಭಾಷಿಕ ಪ್ರದೇಶವು ಸಂಪೂರ್ಣವಾಗಿ ಕೋಮುವಾದಿ ಪಕ್ಷಪಾತವನ್ನು ಹೊಂದಿದೆ. ಬಹುತೇಕ ಭಾರತೀಯರಿಗೆ ಧರ್ಮವೇ ಪ್ರಮುಖ ವಿಷಯವಾಗಿದೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗವು ವಿಫಲಗೊಂಡಿದೆ. ಮುಸ್ಲಿಂ ವಿರೋಧಿ ಪಕ್ಷಪಾತವು ದೇಶಾದ್ಯಂತ ಗೆಲುವು ಸಾಧಿಸಿದೆ. ಹಿಂದುತ್ವವು ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳನ್ನು ಹಿನ್ನೆಲೆಗೆ ದೂಡಿದೆ. ಹಿಂದಿ ಭಾಷಿಕ ಪ್ರದೇಶಗಳು ಯಾವಾಗಲೂ ಗೋಮಾತೆ ಹಾಗೂ ಸಗಣಿಗಾಗಿಯೇ ಮತ ನೀಡುತ್ತಿವೆ. ಗೌತಮ್ ಅದಾನಿ ಛತ್ತೀಸ್ ಗಢವನ್ನು ಜಯಿಸಿದ್ದಾರೆ”ಎಂದು ಹೇಳುತ್ತಿರುವ ಕುರಿತು ಅಣಕವಾಡಿದ್ದರು.
ಈ ವ್ಯಂಗ್ಯವು ಇಷ್ಟಕ್ಕೇ ನಿಲ್ಲದೆ, “ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವು ಹೆಚ್ಚು ಜಾಗೃತವಾಗಿದೆ. ಜನರು ಉದ್ಯೋಗಗಳಿಗಾಗಿ ದಕ್ಷಿಣ ಭಾರತಕ್ಕೆ ಹೋಗುತ್ತಾರೆ ಹಾಗೂ ಉತ್ತರದಲ್ಲಿ ಬಿಜೆಪಿಗೆ ಮತ ಚಲಾಯಿಸುತ್ತಾರೆ. ಕೊನೆಗೆ ಪರಾಭವಗೊಳ್ಳುವುದು ದೊಡ್ಡ ವಿಷಯವೇ ಅಲ್ಲ. ಯಾಕೆಂದರೆ, ಮತ ಹಂಚಿಕೆ ಪ್ರಮಾಣವು ದೊಡ್ಡ ಮಟ್ಟದಲ್ಲಿ ದೃಢವಾಗಿದೆ” ಎಂದು ಬರುತ್ತಿರುವ ಪ್ರತಿಕ್ರಿಯೆಗಳನ್ನು ಉಲ್ಲೇಖಿಸಿದ್ದರು.
ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, “ಅವರು ತಮ್ಮ ದುರಹಂಕಾರ, ಸುಳ್ಳುಗಳು, ನಿರಾಶಾವಾದ ಹಾಗೂ ನಿರ್ಲಕ್ಷ್ಯದ ಬಗ್ಗೆ ಸಂತೋಷವಾಗಿರಬಹುದು. ಆದರೆ, ಅವರ ವಿಭಜನಾಕಾರಿ ಕಾರ್ಯಸೂಚಿಯ ಬಗ್ಗೆ ಎಚ್ಚರದಿಂದಿರಿ. 70 ವರ್ಷದಷ್ಟು ಹಳೆಯದಾದ ಅಭ್ಯಾಸವು ಅಷ್ಟು ಸುಲಭವಾಗಿ ಹೋಗಲು ಸಾಧ್ಯವಿಲ್ಲ. ಅಲ್ಲದೆ, ಜನರ ಇಂತಹ ವಿವೇಕದೆದುರು ಮುಂದೆ ಇನ್ನೂ ತಲೆಕೆಲಗಾದ ಲೆಕ್ಕಾಚಾರ ಎದುರಿಸಲು ಅವರು ಸಿದ್ಧರಾಗಿರಬೇಕು” ಎಂದು ಕೆಲವು ಇಮೋಜಿ ಬಳಸಿ ಕಿಡಿ ಕಾರಿದ್ದರು.
ಆದರೆ, ಪ್ರಧಾನಿ ಮೋದಿ ಬಳಸಿದ್ದ ಎಮೋಜಿಗಳು, ಇದು ಅವರದ್ದೇ ಖಾತೆಯದ್ದೇ ಅಥವಾ ನಕಲಿ ಖಾತೆಯದ್ದೆ ಎಂದು ಬಳಕೆದಾರರು ವಿಸ್ಮಯಗೊಳ್ಳುವಂತೆ ಮಾಡಿದವು. ಕೆಲವರು ಪ್ರಧಾನಿ ಮೋದಿಯವರ ಖಾತೆಯೇನಾದರೂ ಹ್ಯಾಕ್ ಆಗಿದೆಯೆ ಎಂಬ ಪ್ರಶ್ನೆಯನ್ನೂ ಎತ್ತಿದರು. ಮತ್ತೆ ಕೆಲವರು ತಮ್ಮದೇ ವೈಯಕ್ತಿಕ ಖಾತೆಯನ್ನು ಬಳಸಬೇಕು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರ ಕಾಳೆಲೆದರು.
ಶಿವ್ ಅರೂರ್ ಅವರ ಪೋಸ್ಟ್ ಗೆ ಪ್ರಧಾನಿ ಮೋದಿ ನೀಡಿದ ಪ್ರತಿಕ್ರಿಯೆಯು, ಅವರು ಸೋಮವಾರ ಸಂಸತ್ತಿನಲ್ಲಿ ನೀಡಿದ್ದ “ಬಿಜೆಪಿ ಗೆಲುವಿನ ನಂತರದ ಹತಾಶೆ” ಕುರಿತ ಹೇಳಿಕೆಯತ್ತಲೇ ಚರ್ಚೆಗಳು ಗಿರಕಿ ಹೊಡೆಯುವಂತೆ ಮಾಡಿದವು.