ತನ್ನ ಭಾಷಣಗಳಲ್ಲಿ ‘ಒಬಿಸಿ’ಯನ್ನು ಉಲ್ಲೇಖಿಸುವ ಪ್ರಧಾನಿ ಮೋದಿ ಜಾತಿ ಗಣತಿಗೆ ಏಕೆ ಹೆದರುತ್ತಿದ್ದಾರೆ?: ರಾಹುಲ್ ಗಾಂಧಿ

Update: 2023-10-28 15:46 GMT

ರಾಯಪುರ: ಛತ್ತೀಸ್‌ಗಡದಲ್ಲಿ ತನ್ನ ಪಕ್ಷವು ಅಧಿಕಾರಕ್ಕೆ ಮರಳಿದರೆ ರಾಜ್ಯದ ಸರಕಾರಿ ಶಾಲಾಕಾಲೇಜುಗಳಲ್ಲಿ ಉಚಿತ ಶಿಕ್ಷಣ ಮತ್ತು ತೆಂಡು ಎಲೆಗಳನ್ನು ಸಂಗ್ರಹಿಸುವವರಿಗೆ ವಾರ್ಷಿಕ 4,000 ರೂ.ಗಳ ಆರ್ಥಿಕ ನೆರವನ್ನು ಒದಗಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶನಿವಾರ ಭರವಸೆಯನ್ನು ನೀಡಿದರು.

ಕಂಕೇರ್ ಜಿಲ್ಲೆಯ ಭಾನುಪ್ರತಾಪಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್,ತನ್ನ ಭಾಷಣಗಳಲ್ಲಿ ‘ಒಬಿಸಿ(ಇತರ ಹಿಂದುಳಿದ ವರ್ಗಗಳು)’ ಯನ್ನು ಉಲ್ಲೇಖಿಸುವ ಪ್ರಧಾನಿ ನರೇಂದ್ರ ಮೋದಿಯವರು ಜಾತಿ ಗಣತಿಗೆ ಏಕೆ ಹೆದರುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಜಾತಿ ಗಣತಿಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ನ.7ರಂದು ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯಲಿರುವ 20 ವಿಧಾನಸಭಾ ಕ್ಷೇತ್ರಗಳಲ್ಲಿ ಭಾನುಪ್ರತಾಪಪುರ ಸೇರಿದೆ. ಎರಡನೇ ಹಂತದ ಚುನಾವಣೆ ನ.17ರಂದು ನಡೆಯಲಿದೆ.

ನಿಮಗಾಗಿ ನಾವು ಮಹತ್ವದ ಹೆಜ್ಜೆಯನ್ನು ಇರಿಸಲಿದ್ದೇವೆ ಮತ್ತು ಅದನ್ನು ‘ಕೆಜಿಯಿಂದ ಪಿಜಿವರೆಗೆ ’ ಎಂದು ಹೆಸರಿಸಲಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಮರಳಿದರೆ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಿಂಡರ್‌ಗಾರ್ಟನ್ (ಕೆಜಿ)ಯಿಂದ ಹಿಡಿದು ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳವರೆಗೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸಲಾಗುವುದು. ಅವರು ಒಂದೇ ಒಂದು ಪೈಸೆಯನ್ನು ಪಾವತಿಸಬೇಕಿಲ್ಲ’ ಎಂದು ಹೇಳಿದ ರಾಹುಲ್, ತೆಂಡು ಎಲೆಗಳನ್ನು ಸಂಗ್ರಹಿಸುವವರಿಗೆ ರಾಜೀವ್ ಗಾಂಧಿ ಪ್ರೋತ್ಸಾಹನ ಯೋಜನೆಯಡಿ ವಾರ್ಷಿಕ 4,000 ರೂ.ಗಳ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ದಾಳಿ ನಡೆಸಿದ ಅವರು,ಅದು ಮೂವರು ಕೈಗಾರಿಕೋದ್ಯಮಿಗಳ ಲಾಭಕ್ಕಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ರೈತರು,ದಲಿತರು,ಕಾರ್ಮಿಕರು ಮತ್ತು ಆದಿವಾಸಿಗಳ ಹಿತರಕ್ಷಣೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News