ಅದಾನಿಯ ಬಗ್ಗೆ ಉತ್ತರಿಸಲು ಸಾಧ್ಯವಾಗದ ಕಾರಣ ಪ್ರಧಾನಿ ಮೋದಿ ನನ್ನೊಂದಿಗೆ ಚರ್ಚೆಗೆ ಬರುತ್ತಿಲ್ಲ: ರಾಹುಲ್ ಗಾಂಧಿ

Update: 2024-05-18 17:39 GMT

 ರಾಹುಲ್ ಗಾಂಧಿ , ನರೇಂದ್ರ ಮೋದಿ | PC : PTI

ಹೊಸದಿಲ್ಲಿ: ತಮ್ಮ ಆಪ್ತ ಉದ್ಯಮಿಗಳ ಬಗ್ಗೆ ಮತ್ತು ಚುನಾವಣಾ ಬಾಂಡ್‌ಗಳನ್ನು ಹೇಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದ ಕಾರಣ ಪ್ರಧಾನಿ ನರೇಂದ್ರ ಮೋದಿ ತಮ್ಮೊಂದಿಗೆ ಚರ್ಚೆ ನಡೆಸಲು ನಿರಾಕರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

ದಿಲ್ಲಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಪಕ್ಷ ಮತ್ತು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಮತ್ತು ರಾಷ್ಟ್ರ ರಾಜಧಾನಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳಲ್ಲಿ ತಮ್ಮ ಮೈತ್ರಿಕೂಟಕ್ಕೆ ಜಯ ಸಾಧಿಸಲು ಶ್ರಮಿಸಬೇಕು ಎಂದರು.

'ದಿಲ್ಲಿಯ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ್ತು ನಾಲ್ಕು ಸ್ಥಾನಗಳಲ್ಲಿ ಎಎಪಿ ಅಭ್ಯರ್ಥಿಗಳಿಗೆ ಮತ ಹಾಕುವಂತೆ ನಾನು ಕಾಂಗ್ರೆಸ್ ಕಾರ್ಯಕರ್ತರನ್ನು ಕೋರುತ್ತೇನೆ. ಅದೇ ರೀತಿ, ನಾಲ್ಕು ಸ್ಥಾನಗಳಲ್ಲಿ ತಮ್ಮ ಪಕ್ಷದ ನಾಯಕರಿಗೆ ಮತ್ತು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಎಎಪಿ ಕಾರ್ಯಕರ್ತರನ್ನು ಕೋರುತ್ತೇನೆ. ಈ ಚುನಾವಣೆಯಲ್ಲಿ ನಾನು ಎಎಪಿಗೆ ಮತ ಹಾಕುತ್ತೇನೆ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆಎಂಬುದು ಕುತೂಹಲಕಾರಿಯಾಗಿದೆ' ಎಂದು ಅವರು ಹೇಳಿದರು.

ಸಂವಿಧಾನವನ್ನು ಬದಲಾಯಿಸುವ ನರಕಯಾತನೆಯಿಂದ ರಕ್ಷಿಸುವುದು ಪ್ರತಿಯೊಬ್ಬರ ಮೊದಲ ಗುರಿಯಾಗಬೇಕು ಎಂದ ರಾಹುಲ್ ಗಾಂಧಿ, 'ಪ್ರಧಾನಿ ಮೋದಿ ಅವರು ತಮ್ಮ ನೆಚ್ಚಿನ ಪತ್ರಕರ್ತರಿಗೆ ತಡೆರಹಿತ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಆದರೆ ಅವರು ನನ್ನೊಂದಿಗೆ ಚರ್ಚೆ ನಡೆಸುವುದಿಲ್ಲ. ಏಕೆಂದರೆ ಅವರು ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ' ಎಂದು ಹೇಳಿದರು.

'ಕಾಂಗ್ರೆಸ್ ಪಕ್ಷವು ಅದಾನಿ-ಅಂಬಾನಿಯಿಂದ ಟೆಂಪೋ-ಲೋಡ್ ಹಣ ಪಡೆಯುತ್ತಿರುವ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಾರೆ. ಆದರೆ ಅದನ್ನು ತನಿಖೆ ಮಾಡಲು ಅವರು ಧೈರ್ಯ ಮಾಡುತ್ತಿಲ್ಲ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 'ಪ್ರಧಾನಿ ಮೋದಿ ಅವರೊಂದಿಗೆ ಯಾವಾಗ ಮತ್ತು ಎಲ್ಲಿ ಬೇಕಾದರೂ ಚರ್ಚೆಗೆ ನಾನು ಸಿದ್ಧ, ಆದರೆ ಅವರು ಬರುವುದಿಲ್ಲ ಎಂದು ನನಗೆ ಖಾತ್ರಿಯಿದೆ. ನಾನು ಪ್ರಧಾನಿ ಮೋದಿಯವರನ್ನು ಕೇಳುವ ಮೊದಲ ಪ್ರಶ್ನೆಯೆಂದರೆ ಅದಾನಿಯೊಂದಿಗೆ ಅವರ ಸಂಬಂಧ ಏನು?. ಆ ಬಳಿಕ ಅವರನ್ನು ಚುನಾವಣಾ ಬಾಂಡ್‌ಗಳ ಬಗ್ಗೆ ಕೇಳಲು ಬಯಸುತ್ತೇನೆʼ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಹೇಳಿದರು.

ಈ ಎರಡು ಪ್ರಶ್ನೆಗಳ ನಂತರವೇ ಚರ್ಚೆ ಕೊನೆಗೊಳ್ಳುತ್ತದೆ ಎಂದ ರಾಹುಲ್ ಗಾಂಧಿ, ಜನರು ಕೋವಿಡ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವಾಗ ತಟ್ಟೆಗಳನ್ನು ಬಾರಿಸಲು ಮತ್ತು ಮೊಬೈಲ್ ಫೋನ್‌ಗಳ ಫ್ಲ್ಯಾಷ್ ಗಳನ್ನು ಆನ್ ಮಾಡಲು ಏಕೆ ಹೇಳಿದರು? ಎಂದು ಪ್ರಧಾನಿ ಮೋದಿಯವರನ್ನು ಕೇಳಲು ಬಯಸುತ್ತೇನೆ ಎಂದರು.

'ಪ್ರಧಾನಿ ಮೋದಿ ನನ್ನೊಂದಿಗೆ ಚರ್ಚೆಗೆ ಬರುವುದಿಲ್ಲ. ಆದರೆ ಅವರು ತಮ್ಮ ರ‍್ಯಾಲಿಗಳಲ್ಲಿ ನಾನು ಎತ್ತುವ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅದಾನಿ-ಅಂಬಾನಿ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ನಾನು ಹೇಳಿದಾಗ ತಕ್ಷಣ ಆ ಬಗ್ಗೆ ಮಾತನಾಡಿದ್ದಾರೆ' ಎಂದು ರಾಹುಲ್ ಹೇಳಿದರು.

ತಮ್ಮ ಭಾಷಣದಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಅವರು ಜಾರಿ ನಿರ್ದೇಶನಾಲಯ(ಈಡಿ)ದ ವಿಚಾರಣೆಯ ಬಗ್ಗೆಯೂ ಉಲ್ಲೇಖಿಸಿದ್ದಾರೆ.' ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳಿಗೆ ಸುಸ್ತಾಗುವವರೆಗೂ ನನ್ನನ್ನು 55 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು. ಅವರು ನನ್ನ ಮನೆಯನ್ನು ಕಿತ್ತುಕೊಂಡರು, ಇಡೀ ದೇಶವೇ ನನ್ನ ಮನೆ, ನನಗೆ ನಿಮ್ಮ ಮನೆ ಬೇಡ ಎಂದು ನಾನು ಅವರಿಗೆ ಹೇಳಿದೆ' ಎಂದು ಅವರು ಹೇಳಿದ್ದಾರೆ.

“ನಮಗೆ 'ಡರ್ಪೋಕ್' (ಹೇಡಿ) ನಾಯಕರು ಬೇಡ, ನಮಗೆ 'ಬಬ್ಬರ್ ಶೇರ್' ಬೇಕು. ಸಿಬಿಐ-ಜಾರಿ ನಿರ್ದೇಶನಾಲಯ(ಈಡಿ)ದ ಕ್ರಮಕ್ಕೆ ಹೆದರಿ ಕುಣಿಯುವವರು ನಮಗೆ ಬೇಡ” ಎಂದು ರಾಹುಲ್ ಗಾಂಧಿ ಬಿಜೆಪಿ ಸೇರುವವರ ಬಗ್ಗೆ ಹೇಳಿದ್ದಾರೆ.

ಸಣ್ಣ ಉದ್ಯಮಿಗಳಿಗೆ ಪ್ರಧಾನಿ ಮೋದಿ ಏನೂ ಮಾಡಿಲ್ಲ, ಆದರೆ ಅದಾನಿ, ಅಂಬಾನಿಯಂತಹ ಕೈಗಾರಿಕೋದ್ಯಮಿಗಳಿಗೆ 16 ಲಕ್ಷ ಕೋಟಿ ರೂ. ನೀಡಿದ್ದಾರೆ ಎಂದು ಆರೋಪಿಸಿದ ರಾಹುಲ್, ' ನಾವು ಜಿಎಸ್‌ಟಿಯನ್ನು ಸರಳೀಕರಿಸುತ್ತೇವೆ ಮತ್ತು ದೊಡ್ಡ ಕೈಗಾರಿಕೋದ್ಯಮಿಗಳಿಗಿಂತ ಸಣ್ಣ ಉದ್ಯಮಿಗಳಿಗೆ ಸಹಾಯ ಮಾಡುತ್ತೇವೆ. ಅಗ್ನಿವೀರ್ ಯೋಜನೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ, ' ಎಂದು ಇಂಡಿಯಾ ಬಣದ ಸರ್ಕಾರ ರಚನೆಯಾದ ಬಳಿಕ ಕೈಗೊಳ್ಳುವ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News