ಪ್ರಧಾನಿ ಮೋದಿಯವರದ್ದು ಡೆಮೋಕ್ರಸಿ ಅಲ್ಲ, ಡೆಮೋ ಕುರ್ಸಿ : ಕಾಂಗ್ರೆಸ್ ಆಕ್ರೋಶ
ಹೊಸದಿಲ್ಲಿ : ತುರ್ತು ಪರಿಸ್ಥಿತಿ ಹೇರಿದ ಅಂದಿನ ಕಾಂಗ್ರೆಸ್ ಸರಕಾರದ ನಡೆಯನ್ನು ನೆನಪಿಸಲು ಜೂ.25ರಂದು ಸಂವಿಧಾನ ಹತ್ಯಾ ದಿನ ಆಚರಣೆ ಕುರಿತ ಕೇಂದ್ರ ಸರಕಾರದ ಗಜೆಟ್ ಅಧಿಸೂಚನೆಯನ್ನು ಟೀಕಿಸಿರುವ ಕಾಂಗ್ರೆಸ್, ಪ್ರಧಾನಿ ಮೋದಿಯವರಿಂದ ಮತ್ತೊಂದು ಹೆಡ್ ಲೈನ್ ಗಾಗಿ ಸರ್ಕಸ್ ಎಂದು ಟೀಕಿಸಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ “ಹತ್ತು ವರ್ಷಗಳ ಕಾಲ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದ ಜೈವಿಕೇತರ ಪ್ರಧಾನಮಂತ್ರಿಯು ಬೂಟಾಟಿಕೆಯಲ್ಲಿ ಮತ್ತೊಂದು ಹೆಡ್ ಲೈನ್ ಕಸರತ್ತು ನಡೆಸುತ್ತಿದ್ದಾರೆ. ಜೂನ್ 4, 2024 ರಂದು ಅವರಿಗೆ ರಾಜಕೀಯ ಮತ್ತು ನೈತಿಕ ಸೋಲು. ಇದು ಮೋದಿಮುಕ್ತಿ ದಿವಸ್ ಎಂದು ಇತಿಹಾಸದಲ್ಲಿ ದಾಖಲಾಗುತ್ತದೆ. ಭಾರತದ ಸಂವಿಧಾನ ಮತ್ತು ಅದರ ತತ್ವಗಳು, ಮೌಲ್ಯಗಳು ಮತ್ತು ಸಂಸ್ಥೆಗಳನ್ನು ವ್ಯವಸ್ಥಿತ ಆಕ್ರಮಣಕ್ಕೆ ಒಳಪಡಿಸಿದ ಜೈವಿಕವಲ್ಲದ ಪ್ರಧಾನಿ ” ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರೆಸ್ಸೆಸ್ನ ಮೇಲೆ ವಾಗ್ದಾಳಿ ನಡೆಸಿದ ಜೈರಾಂ ರಮೇಶ್, ಸಂಘಟನೆಯು "ಮನುಸ್ಮೃತಿಯಿಂದ ಸ್ಫೂರ್ತಿ ಪಡೆಯದ ಕಾರಣ" ಸಂವಿಧಾನವನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ್, "ಭಾರತದ ಸಂವಿಧಾನ ಮತ್ತು ಅದರ ತತ್ವಗಳು, ಮೌಲ್ಯಗಳು ಮತ್ತು ಸಂಸ್ಥೆಗಳನ್ನು ವ್ಯವಸ್ಥಿತ ದಾಳಿಗೆ ಒಳಪಡಿಸಿದ ಅಜೈವಿಕ ಪ್ರಧಾನಿಯ ಜೈವಿಕ ಸೈದ್ಧಾಂತಿಕ ಪರಿವಾರವು ನವೆಂಬರ್ 1949 ರಲ್ಲಿ ಭಾರತವು ಮನುಸ್ಮೃತಿಯಿಂದ ಸ್ಫೂರ್ತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ಸಂವಿಧಾನವನ್ನು ತಿರಸ್ಕರಿಸಿದೆ. ಅವರಿಗೆ ಡೆಮೋಕ್ರಸಿ(ಪ್ರಜಾಪ್ರಭುತ್ವ) ಎಂದರೆ ಕೇವಲ ಡೆಮೊ-ಕುರ್ಸಿ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಅಜಯ್ ರೈ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ಲೋಕಸಭಾ ಚುನಾವಣೆಯ ಫಲಿತಾಂಶದಿಂದ ಬಿಜೆಪಿ ತುಂಬಾ ಅಸಮಾಧಾನಗೊಂಡಿದೆ, ಈಗ ಅವರು ಯಾವ ದಾರಿಯಲ್ಲಿ ಹೋಗಬೇಕು ಅಥವಾ ಯಾವ ಅಸ್ತ್ರವನ್ನು ಬಳಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರು ಈಗ ತುರ್ತು ಪರಿಸ್ಥಿತಿಗಳ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.