ರಾಹುಲ್‌ ಗಾಂಧಿ ನಂಬರ್ ಒನ್ ಉಗ್ರ : ಕೇಂದ್ರ ಸಚಿವ ರವನೀತ್ ಸಿಂಗ್ ವಿವಾದಾತ್ಮಕ ಹೇಳಿಕೆ

Update: 2024-09-15 17:07 GMT

ರವನೀತ್ ಸಿಂಗ್ ಬಿಟ್ಟು , ರಾಹುಲ್ ಗಾಂಧಿ | PTI 

ಪಾಟ್ನಾ : "ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಬಾಂಬ್‌ಗಳನ್ನು ತಯಾರಿಸುತ್ತಿರುವವರು ಬೆಂಬಲಿಸುತ್ತಿದ್ದು, ಅವರು ನಂಬರ್ ಒನ್ ಭಯೋತ್ಪಾದಕ” ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ರವಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಹಾರದ ಭಾಗಲ್ಪುರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಚಾಲನೆ ನೀಡುವ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತದಲ್ಲಿ ಸಿಖ್ಖರ ಸ್ಥಿತಿಗತಿ ಕುರಿತು ಅಮೆರಿಕದಲ್ಲಿ ರಾಹುಲ್‌ ಗಾಂಧಿ ನೀಡಿರುವ ಹೇಳಿಕೆಗಳ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

“ರಾಹುಲ್ ಗಾಂಧಿ ಭಾರತೀಯರಲ್ಲ. ಅವರು ತಮ್ಮ ಹೆಚ್ಚಿನ ಸಮಯವನ್ನು ದೇಶದ ಹೊರಗೆ ಕಳೆಯುತ್ತಾರೆ. ವಿದೇಶದಲ್ಲಿ ದೇಶದ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುತ್ತಾರೆ. ರಾಹುಲ್ ಗಾಂಧಿಗೆ ದೇಶವನ್ನು ವಿಭಜಿಸುವ ಮಾತುಗಳನ್ನಾಡುವ ಪ್ರತ್ಯೇಕತಾವಾದಿಗಳು ಬೆಂಬಲ ನೀಡುತ್ತಾರೆ. ಸಿಖ್ಖರ ವಿರುದ್ಧ ಮಾಡಿದ ಹೇಳಿಕೆಗಳಿಗಾಗಿ ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದವರು ರಾಹುಲ್ ಗಾಂಧಿಯನ್ನು ಶ್ಲಾಘಿಸುತ್ತಿದ್ದಾರೆ. ಬಾಂಬ್ ತಯಾರಿಕೆಯಲ್ಲಿ ನಿಪುಣರಾಗಿರುವವರ ಬೆಂಬಲ ರಾಹುಲ್ ಗಾಂಧಿಯವರಿಗಿದ್ದಂತೆ ಕಾಣುತ್ತಿದೆ. ಪ್ರತ್ಯೇಕತಾವಾದಿಯಂತೆ ಮಾತನಾಡುತ್ತಿರುವ ರಾಹುಲ್ ದೇಶದ ಬಹುದೊಡ್ಡ ಶತ್ರು, ನಂಬರ್ ಒನ್ ಭಯೋತ್ಪಾದಕ”, ಎಂದು ಲೋಕಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ, ರವನೀತ್‌ ಸಿಂಗ್ ಬಿಟ್ಟು ಕಿಡಿ ಕಾರಿದ್ದಾರೆ.

“ಕಾಂಗ್ರೆಸ್ ಈ ಹಿಂದೆ ಮುಸ್ಲಿಮರ ತುಷ್ಠೀಕರಣ ಮಾಡುತ್ತಿತ್ತು. ಈಗ ಸಿಖ್ಖರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ರಾಹುಲ್ ಗಾಂಧಿ ಹಿಂದುಳಿದ ವರ್ಗಗಳ, ಇತರ ಜಾತಿಗಳ ಬಗ್ಗೆ ಮಾತನಾಡುತ್ತಾರೆ. ಪ್ರತಿಪಕ್ಷದ ನಾಯಕನಾದ ನಂತರವೂ ಚಮ್ಮಾರ, ಬಡಗಿ, ಮೆಕ್ಯಾನಿಕ್ ನ ನೋವನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ” ಎಂದು ಬಿಟ್ಟು ವ್ಯಂಗ್ಯವಾಡಿದ್ದಾರೆ.

ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ಸಂದೀಪ್ ದೀಕ್ಷಿತ್, “ಬಿಟ್ಟು ಅವರು ಕಾಂಗ್ರೆಸ್‌ ನಲ್ಲಿದ್ದಾಗ ರಾಹುಲ್ ಗಾಂಧಿಯನ್ನು ಹೊಗಳುತ್ತಿದ್ದರು. ಈಗ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ ಅವರು ಬಿಜೆಪಿ ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ತೋರಿಸುತ್ತಿದ್ದಾರೆ" ಎಂದು ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News