2014ರ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಭೇಟಿಗೆ ನಿರಾಕರಿಸಿದ್ದರಿಂದಲೇ ರಾಮ್ ವಿಲಾಸ್ ಪಾಸ್ವಾನ್ ಯುಪಿಎ ತೊರೆದರು : ಕೇಂದ್ರ ಸಚಿವ ಚಿರಾಗ್ ಪಾಸ್ವಾನ್
ಹೊಸದಿಲ್ಲಿ : 2014ರ ಚುನಾವಣೆಗೂ ಮುನ್ನ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಪದೇ ಪದೇ ಪ್ರಯತ್ನಿಸಿದರೂ, ಅವರಿಗೆ ಭೇಟಿಯ ಅವಕಾಶ ದೊರೆಯದಿದ್ದುದೇ ಅವರು ಯುಪಿಎ ಮೈತ್ರಿಕೂಟವನ್ನು ತೊರೆಯಲು ಪ್ರಮುಖ ಕಾರಣ ಎಂದು ಕೇಂದ್ರ ಸಚಿವ ಹಾಗೂ ಲೋಕ್ ಜನಶಕ್ತಿ (ರಾಮ್ ವಿಲಾಸ್) ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪಿಟಿಐ ಸಂಪಾದಕರೊಂದಿಗಿನ ಸಂವಾದದಲ್ಲಿ ಪಾಲ್ಹೊಂಡು ಮಾತನಾಡಿರುವ ಚಿರಾಗ್ ಪಾಸ್ವಾನ್, ರಾಹುಲ್ ಗಾಂಧಿ ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಲು ತುಂಬಾ ವಿಳಂಬ ಮಾಡಿದರು ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮಾಡಿದ ಭಾಷಣ, ಅವರು ವಿರೋಧ ಪಕ್ಷದ ನಾಯಕರಾಗಲು ಅನರ್ಹ ಎಂಬಂತಿತ್ತು ಎಂದೂ ಅವರು ಟೀಕಿಸಿದ್ದಾರೆ.
ನಮ್ಮ ತಂದೆ ಯುಪಿಎ ಮೈತ್ರಿಕೂಟದಲ್ಲಿ ತಮ್ಮ ಪಕ್ಷದ ಭವಿಷ್ಯದ ಕುರಿತು ಚರ್ಚಿಸಲು ಪದೇ ಪದೇ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ತಮ್ಮ ಪುತ್ರನನ್ನು ಭೇಟಿ ಮಾಡುವಂತೆ ಅವರಿಗೆ ಸಲಹೆ ನೀಡಿದ್ದರು. ರಾಹುಲ್ ಗಾಂಧಿ ಸಂದರ್ಶನಕ್ಕಾಗಿ ಸಮಯ ಕೋರಿ ಮೂರು ತಿಂಗಳಾದರೂ, ಅವರು ನಮ್ಮ ತಂದೆಯ ಮನವಿಗೆ ಸ್ಪಂದಿಸಲಿಲ್ಲ ಎಂದು ಆ ಸಂದರ್ಭದಲ್ಲಿ ಯುಪಿಎ ತೊರೆದು ಎನ್‌ಡಿಎ ಮೈತ್ರಿಕೂಟ ಸೇರ್ಪಡೆಯಾಗಲು ಉತ್ಸುಕರಾಗಿದ್ದ ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ.
"ಹೀಗಿದ್ದೂ, ರಾಮ್ ವಿಲಾಸ್ ಪಾಸ್ವಾನ್ ಯುಪಿಎಯಲ್ಲೇ ಉಳಿಯಲು ಬಯಸಿದ್ದರು ಹಾಗೂ ಆ ಕುರಿತು ರಾಹುಲ್ ಗಾಂಧಿಯೊಂದಿಗೆ ಚರ್ಚಿಸಲು ಬಯಸಿದ್ದರು. ಅದಾಗದ್ದರಿಂದಲೇ ನನಗೆ ಒಳಿತಾಯಿತು. ಒಂದು ವೇಳೆ ಅದೇನಾದರೂ ಸಾಧ್ಯವಾಗಿದ್ದರೆ, ನಾನು ನನ್ನ ತಂದೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸೇರ್ಪಡೆಯಾಗುವಂತೆ ಮನವೊಲಿಸಲು ಸಾಧ್ಯವಾಗುತ್ತಿರಲಿಲ್ಲ. ನನಗೆ ಪ್ರಧಾನಿ ನರೇಂದ್ರ ಮೋದಿಯೆಡೆಗೆ ಆರಾಧನೆ ಹಾಗೂ ಗೌರವವಿದ್ದುದರಿಂದ, ನಾನು ಬಿಜೆಪಿಯೊಂದಿಗಿನ ಮೈತ್ರಿಯನ್ನು ಬಯಸಿದ್ದೆ" ಎಂದೂ ಚಿರಾಗ್ ಪಾಸ್ವಾನ್ ಬಹಿರಂಗಪಡಿಸಿದ್ದಾರೆ.
ಮೋದಿಯೆಡೆಗಿನ ಅವರ ಆರಾಧನೆ ಕುರಿತ ಪ್ರಶ್ನೆಗೆ, ನಮ್ಮ ಪಕ್ಷವು ಎನ್‌ಡಿಎ ಭಾಗವಾಗದೆ ಇರುವಾಗಿನಿಂದಲೂ ನಾನವರನ್ನು ನೋಡಿಕೊಂಡೇ ಬೆಳೆದಿದ್ದೇನೆ. ಪ್ರಧಾನಿಯೊಂದಿಗೆ ನನಗಿದ್ದ ಭಾವನಾತ್ಮಕ ನಂಟೇ ನಾನು ಎನ್‌ಡಿಎ ಮೈತ್ರಿಕೂಟವನ್ನು ಸೇರಲು ಪ್ರಮುಖ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.