ರಾಜಸ್ಥಾನ ವಿಧಾನಸಭಾ ಚುನಾವಣೆ: ಒಪಿಎಸ್‌ಗೆ ಕಾನೂನು,ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಪ್ರತಿ ಕೆಜಿ ಹಸುವಿನ ಸಗಣಿಗೆ 2 ರೂ.

Update: 2023-10-27 18:05 GMT

Photo: twitter/ashokgehlot51

ಜೈಪುರ,ಅ.27: ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರ ರಾಜ್ಯದ ಜನರಿಗೆ ಇನ್ನೂ ಐದು ಗ್ಯಾರಂಟಿಗಳನ್ನು ಪ್ರಕಟಿಸಿದರು.

ಹಳೆಯ ಪಿಂಚಣಿ ಯೋಜನೆ ಕುರಿತು ಕಾನೂನು,ಪ್ರತಿ ಕೆ.ಜಿ.ಗೆ ಎರಡು ರೂ.ದರದಲ್ಲಿ ಹಸುವಿನ ಸಗಣಿ ಖರೀದಿ,ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ವಿತರಣೆ, ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಉಂಟಾದ ನಷ್ಟಕ್ಕೆ 15 ಲ.ರೂ.ಗಳ ವಿಮೆ,ಒಂದು ಕೋಟಿ ಮಹಿಳೆಯರಿಗೆ ಮೂರು ವರ್ಷಗಳವರೆಗೆ ಉಚಿತ ಇಂಟರ್ನೆಟ್ ಸೇವೆಯೊಂದಿಗೆ ಸ್ಮಾರ್ಟ್‌ಫೋನ್ ವಿತರಣೆ; ಇವು ಗೆಹ್ಲೋಟ್ ಶುಕ್ರವಾರ ಪ್ರಕಟಿಸಿದ ಹೊಸ ಗ್ಯಾರಂಟಿಗಳು. 1.05 ಕೋಟಿ ಕುಟುಂಬಗಳಿಗೆ 500 ರೂ. ದರದಲ್ಲಿ ಎಲ್‌ಪಿಜಿ ಸಿಲಿಂಡರ್ ಮತ್ತು ಕುಟುಂಬದ ಯಜಮಾನಿಗೆ ಕಂತುಗಳಲ್ಲಿ ವಾರ್ಷಿಕ 10,000 ರೂ. ಗೌರವ ಧನ ನೀಡುವ ಗ್ಯಾರಂಟಿಗಳನ್ನು ಗೆಹ್ಲೋಟ್ ಬುಧವಾರ ಪ್ರಕಟಿಸಿದ್ದರು.

ಭರವಸೆಗಳನ್ನು ಈಡೇರಿಸುವಲ್ಲಿ ತನ್ನ ಸಾಧನೆಯನ್ನು ಎತ್ತಿ ತೋರಿಸಿದ ಗೆಹ್ಲೋಟ್,ಏಳು ದಿನಗಳಲ್ಲಿ ರೈತರ ಸಾಲಗಳನ್ನು ಮನ್ನಾ ಮಾಡುವ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭರವಸೆಯನ್ನು ಸಕಾಲದಲ್ಲಿ ಈಡೇರಿಸಲಾಗಿದೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ.ಡಿ.ದಾಳಿಗಳ ಕುರಿತು ಕೇಂದ್ರದ ವಿರುದ್ಧ ದಾಳಿ

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗೆಹ್ಲೋಟ್ ಆರೋಪಿಸಿದರು. ಗುರುವಾರವಷ್ಟೇ ಜಾರಿ ನಿರ್ದೇಶನಾಲಯ (ಈ.ಡಿ)ವು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋಟ್ಸಾರಾ ಅವರಿಗೆ ಸೇರಿದ ಆವರಣಗಳ ಮೇಲೆ ದಾಳಿ ನಡೆಸಿತ್ತು.

‘ಈ ದೇಶದಲ್ಲಿ ನಾಯಿಗಳಿಗಿಂತ ಹೆಚ್ಚಾಗಿ ಈ.ಡಿ.ಓಡಾಡುತ್ತಿದೆ ಎಂದು ಮುಖ್ಯಮಂತ್ರಿಗಳೋರ್ವರು (ಭೂಪೇಶ ಬಾಘೆಲ್) ಹೇಳುವಂತಾಗಿತ್ತು. ಇದಕ್ಕಿಂತ ದೊಡ್ಡ ದೌರ್ಭಾಗ್ಯ ಬೇರೆ ಏನಿದೆ?’ ಎಂದು ಪ್ರಶ್ನಿಸಿದ ಗೆಹ್ಲೋಟ್,ಅವರು ಏನನ್ನೇ ಹೇಳಿರಲಿ,ನೋವಿನಿಂದಲೇ ಅದನ್ನು ಹೇಳಿದ್ದಾರೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬಹುದು ಎಂದು ಸುದ್ದಿಗಾರನ್ನುದ್ದೇಶಿಸಿ ಹೇಳಿದರು.

ದೋಟ್ಸಾರಾ ಬಿಜೆಪಿಯ ವಿರುದ್ಧ ಧ್ವನಿ ಎತ್ತುತ್ತಿರುವುದರಿಂದ ಈ.ಡಿ.ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ ಗೆಹ್ಲೋಟ್,ತನಿಖಾ ಸಂಸ್ಥೆಗಳು ರಾಜಕೀಯ ಅಸ್ತ್ರಗಳಾಗಿವೆ. ಮೋದಿಜಿ,ನಿಮಗೆ ಗೊತ್ತಿಲ್ಲ,ನಿಮ್ಮ ಅಧಿಕಾರದ ಕ್ಷಣಗಣನೆ ಈಗಾಗಲೇ ಆರಂಭಗೊಂಡಿದೆ ಎಂದರು.

‘ಪ್ರಧಾನಿ ಮೋದಿ ಕೂಡ ನಮ್ಮ ಗ್ಯಾರಂಟಿ ಮಾದರಿಯನ್ನು ಅನುಸರಿಸುತ್ತಿದ್ದಾರೆ ’ ಎಂದು ಅವರು ಪ್ರತಿಪಾದಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News