ಮಣಿಪುರ ಜನಾಂಗೀಯ ಹಿಂಸಾಚಾರ | ಬಂಡುಕೋರರ ಬಳಿಯಿವೆ 5-7 ಕಿ.ಮೀ. ದೂರ ಕ್ರಮಿಸಬಲ್ಲ ಅತ್ಯಾಧುನಿಕ ರಾಕೆಟ್‌ ಗಳು : ವರದಿ

Update: 2024-09-17 16:55 GMT

Photo: X/@manipur_police

ಇಂಫಾಲ : ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭಗೊಂಡು ಒಂದೂವರೆ ವರ್ಷವಾಗುತ್ತಾ ಬಂದಿದ್ದರೂ, ಹಿಂಸಾಚಾರ ಇಂದಿಗೂ ಅಂತ್ಯಗೊಂಡಿಲ್ಲ. ಈ ನಡುವೆ, ಹಿಂಸಾಚಾರದಲ್ಲಿ ತೊಡಗಿರುವ ಬಂಡುಕೋರರ ಬಳಿ ಎಂ16, ಎಂ18, ಎಂ4ಎ1 ಕಾರ್ಬೈನ್ ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಕಂಡು ಬಂದಿರುವುದು ಭದ್ರತಾ ಪಡೆಗಳನ್ನು ಚಿಂತೆಗೀಡು ಮಾಡಿದೆ.

ಈ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ರಾಜ್ಯ ಶಸ್ತ್ರಾಗಾರದಿಂದ ಲೂಟಿ ಮಾಡಲಾಗಿದ್ದ ಶಸ್ತ್ರಾಸ್ತ್ರಗಳಲ್ಲ ಎಂಬ ಮತ್ತಷ್ಟು ಆತಂಕಕಾರಿ ಸಂಗತಿಯೂ ಈ ಸಂದರ್ಭದಲ್ಲಿ ಬಯಲಾಗಿದೆ.

ಭದ್ರತಾ ಪಡೆಗಳು ಬಂಡುಕೋರರಿಂದ ಈವರೆಗೆ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳ ಪೈಕಿ ಶೇ. 30ರಷ್ಟು ಇಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಕಂಡು ಬಂದಿವೆ ಎಂದು ವರದಿಯಾಗಿದೆ.

ರಾಜ್ಯ ಶಸ್ತ್ರಾಸ್ತ್ರ ಕೋಠಿಯಿಂದ 6,000ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿತ್ತು. ಈ ಪೈಕಿ ಈವರೆಗೆ 2,600 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ರಾಜ್ಯ ಶಸ್ತ್ರಾಸ್ತ್ರ ಕೋಠಿಯಿಂದ ಲೂಟಿ ಮಾಡಲಾಗಿದ್ದ 1,200 ಶಸ್ತ್ರಾಸ್ತ್ರಗಳು ಮಾತ್ರ ಈ ಪೈಕಿ ಸೇರಿವೆ. 600 ಶಸ್ತ್ರಾಸ್ತ್ರಗಳು ದೇಶಿ ಆಯುಧಗಳಾಗಿದ್ದರೆ, ಉಳಿದ 800 ಶಸ್ತ್ರಾಸ್ತ್ರಗಳು ಸುಧಾರಿತ ಶಸ್ತ್ರಾಸ್ತ್ರಗಳಾಗಿವೆ ಎಂದು ಹೇಳಲಾಗಿದೆ.

ಬಂಡುಕೋರರ ಬಳಿ 5-7 ಕಿಮೀ ವ್ಯಾಪ್ತಿಯವರೆಗೆ ಚಲಿಸಬಲ್ಲ ಸುಧಾರಿತ ರಾಕೆಟ್‌ ಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 2023ರಲ್ಲಿ ಮಣಿಪುರದಲ್ಲಿ ಪ್ರಾರಂಭಗೊಂಡ ಜನಾಂಗೀಯ ಹಿಂಸಾಚಾರವು ಈವರೆಗೆ ನಿಯಂತ್ರಣಕ್ಕೆ ಬಂದಿಲ್ಲ. ಈ ನಡುವೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಆಡಿಯೊವೊಂದರಿಂದ, ಈ ಜನಾಂಗೀಯ ಹಿಂಸಾಚಾರದಲ್ಲಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಕೈವಾಡವಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಇದು ತಿರುಚಿದ ಆಡಿಯೊ ಎಂದು ಮಣಿಪುರದ ಬಿಜೆಪಿ ಸರಕಾರ ಮರು ಆರೋಪ ಮಾಡಿದ್ದರೂ, ಆಡಿಯೊ ಆರೋಪದ ಕುರಿತು ಪ್ರತಿಕ್ರಿಯಿಸಲೇಬೇಕಾದ ಇಕ್ಕಟ್ಟಿಗೆ ಮಣಿಪುರದ ಬಿಜೆಪಿ ಸರಕಾರ ಸಿಲುಕಿದೆ.

ಸೌಜನ್ಯ: thewire.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News