“ನಾವು ಮೋದಿಯವರ ಪ್ರಶಂಸಕರು”: ರಾಮ ಮಂದಿರ ಅಪೂರ್ಣ ಎಂದಿದ್ದ ಜ್ಯೋತಿರ್ಮಠದ ಶಂಕರಾಚಾರ್ಯ

Update: 2024-01-21 18:38 GMT

ಹೊಸದಿಲ್ಲಿ: ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಹಾಗೂ ಮಂದಿರವನ್ನು ಅಪೂರ್ಣ ಎಂದು ಬಣ್ಣಿಸಿದ್ದ ಉತ್ತರಾಖಂಡದ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು,ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಹಿಂದೂಗಳಲ್ಲಿ ತಮ್ಮ ಆತ್ಮ ಗೌರವದ ಅರಿವಾಗಿದೆ, ಹೀಗಾಗಿ ಮೋದಿಯವರ ಪ್ರಶಂಸಕರಲ್ಲಿ ತಾನೂ ಒಬ್ಬನಾಗಿದ್ದೇನೆ ಎಂದು ರವಿವಾರ ಪುನರುಚ್ಚರಿಸಿದರು.

‘ಸತ್ಯವೇನೆಂದರೆ ಮೋದಿಯವರು ಹಿಂದೂಗಳಲ್ಲಿ ಆತ್ಮ ಗೌರವದ ಅರಿವನ್ನು ಮೂಡಿಸಿದ್ದಾರೆ ಮತ್ತು ಇದು ಸಣ್ಣ ವಿಷಯವೇನಲ್ಲ. ನಾವು ಮೋದಿ ವಿರೋಧಿಗಳಲ್ಲ, ಅವರ ಪ್ರಶಂಸಕರು ಎಂದು ಹಲವಾರು ಸಲ ಸಾರ್ವಜನಿಕವಾಗಿ ಹೇಳಿದ್ದೇವೆ. ಮೋದಿಯವರಂತೆ ಹಿಂದೂಗಳನ್ನು ಬಲಗೊಳಿಸಿದ ಇನ್ನೊಬ್ಬ ಪ್ರಧಾನಿಯಿದ್ದರೆ ಹೆಸರಿಸಿ. ನಾವು ಹಲವಾರು ಪ್ರಧಾನಿಗಳನ್ನು ಹೊಂದಿದ್ದೆವು ಮತ್ತು ಅವರೆಲ್ಲ ಒಳ್ಳೆಯವರೇ ಆಗಿದ್ದರು. ನಾವು ಯಾರನ್ನೂ ಟೀಕಿಸುತ್ತಿಲ್ಲ ’ ಎಂದು ಅವರು ಹೇಳಿದರು.

ಮೋದಿಯವರು ಮಾಡಿರುವಂತೆ ಹಿಂದೂಗಳನ್ನು ಜಾಗ್ರತಗೊಳಿಸಲು ಇತರ ಯಾವುದೇ ಪ್ರಧಾನಿಗೆ ಸಾಧ್ಯವಿರಲಿಲ್ಲ ಎಂದು ಹೇಳಿದ ಸ್ವಾಮಿ ಅವಿಮುಕ್ತೇಶ್ವರಾನಂದ,‘ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದಾಗ ನಾವು ಅದನ್ನು ಸ್ವಾಗತಿಸಿರಲಿಲ್ಲವೇ? ಪೌರತ್ವ ತಿದ್ದುಪಡಿ ಕಾಯ್ದೆ ಬಂದಾಗ ನಾವು ಅದನ್ನು ಪ್ರಶಂಸಿಸಿರಲಿಲ್ಲವೇ? ಮೋದಿಯವರ ಸ್ವಚ್ಛತಾ ಅಭಿಯಾನಕ್ಕೆ ನಾವು ಅಡ್ಡಿಯುಂಟು ಮಾಡಿದ್ದೇವೆಯೇ? ವಿವಾದಿತ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳಲಿದೆ ಎಂದು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಗೆ ಭಂಗವುಂಟಾಗಿರದ್ದನ್ನೂ ನಾವು ಪ್ರಶಂಸಿಸಿದ್ದೆವು. ಹಿಂದುಗಳು ಸಬಲಗೊಂಡಾಗ ನಾವು ಖುಷಿ ಪಡುತ್ತೇವೆ ಮತ್ತು ಮೋದಿ ಆ ಕೆಲಸವನ್ನು ಮಾಡುತ್ತಿದ್ದಾರೆ ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News