ಶರದ್ ಪವಾರ್ ಗೆ ಪ್ರಧಾನಿಯಾಗುವ ಅವಕಾಶ ದೊರೆಯಲಿಲ್ಲ, ಯಾಕೆಂದರೆ…: ಪ್ರಧಾನಿ ಮೋದಿ ಹೇಳಿದ್ದೇನು?
'Sharad Pawar didn't get chance to become Prime Minister because'...: PM Modi
ಹೊಸದಿಲ್ಲಿ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿನ ವಂಶಪಾರಂಪರ್ಯ ಆಡಳಿತದ ಕಾರಣಕ್ಕೆ ಪ್ರಧಾನಿಯಾಗುವ ಅವಕಾಶ ದೊರೆಯಲಿಲ್ಲ ಎಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಮೂಲಗಳು India Today ಸುದ್ದಿ ಸಂಸ್ಥೆಗೆ ತಿಳಿಸಿವೆ ಎಂದು ವರದಿಯಾಗಿದೆ.
ಕಳೆದ ತಿಂಗಳು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್‍ಸಿಪಿ)ವು ವಿಭಜನೆಗೆ ಸಾಕ್ಷಿಯಾದ ನಂತರ ಪ್ರಧಾನಿ ನರೇಂದ್ರ ಮೋದಿಯವರಿಂದ ಈ ಹೇಳಿಕೆ ಹೊರ ಬಿದ್ದಿದೆ. ಈ ವಿಭಜನೆಯ ಸಂದರ್ಭದಲ್ಲಿ ಎನ್‍ಸಿಪಿಯ ಅಜಿತ್ ಪವಾರ್ ಹಾಗೂ ಎಂಟು ಮಂದಿ ಶಾಸಕರು ಏಕನಾಥ್ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಯಾಗಿದ್ದರು. ಇದಾದ ನಂತರ ಅಜಿತ್ ಪವಾರ್ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಕೆಲ ದಿನಗಳ ಹಿಂದಷ್ಟೆ ಶರದ್ ಪವಾರ್ ಅವರು ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಆ ಸಮಾರಂಭದಲ್ಲಿನ ಪವಾರ್ ಉಪಸ್ಥಿತಿ ವಿರೋಧ ಪಕ್ಷಗಳಲ್ಲಿ ಕಳವಳಕ್ಕೆ ಕಾರಣವಾಗಿತ್ತು. ವಿಶೇಷವಾಗಿ, ಕಳೆದ ತಿಂಗಳಷ್ಟೇ ಪ್ರಕಟಗೊಂಡಿರುವ ವಿರೋಧ ಪಕ್ಷಗಳ INDIA ಮೈತ್ರಿಕೂಟದಲ್ಲಿ ಎನ್‍ಸಿಪಿ ಕೂಡಾ ಪಾಲುದಾರ ಪಕ್ಷವಾಗಿರುವುದರಿಂದ ವಿರೋಧ ಪಕ್ಷಗಳಲ್ಲಿ ಆತಂಕ ಉಂಟು ಮಾಡಿತ್ತು.