'ಎಮರ್ಜೆನ್ಸಿ' ಚಿತ್ರ ನಿಷೇಧಕ್ಕೆ ಶಿರೋಮಣಿ ಅಕಾಲಿ ದಳ ಆಗ್ರಹ

Update: 2024-08-31 02:20 GMT

PC: x.com/TelanganaToday

ಹೊಸದಿಲ್ಲಿ: 'ಎಮರ್ಜೆನ್ಸಿ' ಚಿತ್ರಕ್ಕೆ ನೀಡಿರುವ ಪ್ರಮಾಣಪತ್ರ ರದ್ದುಪಡಿಸಿ, ಚಿತ್ರದ ಮೇಲೆ ನಿಷೇಧ ಹೇರುವಂತೆ ಶಿರೋಮಣಿ ಅಕಾಲಿದಳ ದೆಹಲಿ ಘಟಕದ ಅಧ್ಯಕ್ಷ ಪರಮಜೀತ್ ಸಿಂಗ್ ಸರ್ನಾ ಆಗ್ರಹಿಸಿದ್ದು, ಈ ಸಂಬಂಧ ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ (ಸಿಬಿಎಫ್ಸಿ)ಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.

ಈ ಚಿತ್ರವು ಹಲವು ಐತಿಹಾಸಿಕ ಸತ್ಯಾಂಶಗಳನ್ನು ದೋಷಪೂರಿತವಾಗಿ ಬಿಂಬಿಸಿದ್ದು, ಸಿಖ್ ಸಮುದಾಯವನ್ನು ತಪ್ಪಾಗಿ ಬಿಂಬಿಸಿದೆ. ಇದು ದ್ವೇಷ ಮತ್ತು ಸಾಮಾಜಿಕ ಸಾಮರಸ್ಯ ಹಾನಿಗೆ ಕಾರಣವಾಗಲಿದೆ ಎಂದು ಅವರು ಆಪಾದಿಸಿದ್ದಾರೆ. ಚಿತ್ರ ನಿರ್ಮಾಣಸಂಸ್ಥೆ ಮಣಿಕರ್ಣಿಕಾ ಫಿಲಂಸ್ ಪ್ರೈವೇಟ್ ಲಿಮಿಟೆಡ್ಗೆ ಕೂಡಾ ನೋಟಿಸ್ ಕಳುಹಿಸಲಾಗಿದೆ.

ಇಂಥ ವರ್ಣನೆಯು ತಪ್ಪುದಾರಿಗೆ ಎಳೆಯುವಂಥದ್ದು ಮಾತ್ರವಲ್ಲದೇ, ಪ್ರತಿಕ್ರಮಣಕಾರಿಯೂ ಆಗಿದೆ. ಪಂಜಾಬ್ ಮತ್ತು ದೇಶದ ಸಾಮಾಜಿಕ ಬಂಧವನ್ನು ನಾಶಪಡಿಸುವಂಥದ್ದಾಗಿದೆ. ಸಿಕ್ಖ್ ವಿರೋಧಿ ನಿಲುವಿಗೆ ಹೆಸರಾಗಿರುವ ಹಿಮಾಚಲ ಪ್ರದೇಶ ಮಂಡಿ ಕ್ಷೇತ್ರದ ಸಂಸದೆ ಕಂಗಾನಾ ರಾಣಾವತ್, ಕಾಂಗ್ರೆಸ್ ವಿರುದ್ಧ ನೈಜ ರಾಜಕೀಯ ಮತ್ತು ಐತಿಹಾಸಿಕ ಹೇಳಿಕೆ ನೀಡುವುದನ್ನು ಆಯ್ಕೆ ಮಾಡಿಕೊಳ್ಳುವ ಬದಲು, ಸಿಕ್ಖ್ ಸಮುದಾಯವನ್ನು ಗುರಿ ಮಾಡಿದ್ದಾರೆ" ಎಂದು ಟೀಕಿಸಿದ್ದಾರೆ.

ತುರ್ತು ಪರಿಸ್ಥಿತಿ ವೇಳೆ ಶಿರೋಮಣಿ ಅಕಾಲಿ ದಳ ಹಾಗೂ ಅದರ ನಾಯಕರಾದ ಸರ್ದಾರ್ ಹರಚಂದ್ ಸಿಂಗ್ ಲೋಂಗೊವಾಲ್ ಅವರಂಥವರು ತುರ್ತು ಪರಿಸ್ಥಿತಿ ಹೇರಿದ್ದ ಅಂದಿನ ಪ್ರಧಾನಿ ಇಂದಿರಾಗಾಂಧಿ ವಿರುದ್ಧದ ಮೋರ್ಚಾಗಳ ನೇತೃತ್ವ ವಹಿಸಿದ್ದರು ಎಂದು ಅವರು ಪ್ರತಿಪಾದಿಸಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವಕ್ಕಾಗಿ ನಡೆದ ಹೋರಾಟದಲ್ಲಿ ಅಕಾಲಿಗಳು ಬಂಧನಕ್ಕೆ ಒಳಗಾಗಿ ಪ್ರಕರಣಗಳನ್ನು ಎದುರಿಸಬೇಕಾಯಿತು. ಇದನ್ನು ನಿರ್ಲಕ್ಷಿಸಿರುವ ಚಿತ್ರ ಸಿಕ್ಖ್ ಸಮುದಾಯವನ್ನು ಋಣಾತ್ಮಕವಾಘಿ ಬಿಂಬಿಸಿದೆ ಎಂದು ನೋಟಿಸ್ನಲ್ಲಿ ಆಕ್ಷೇಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News