ಭಾಯ್-ಬೆಹನ್ ಬಹಿರಂಗ ಚರ್ಚೆಗೆ ಸ್ಮೃತಿ ಇರಾನಿ ಆಹ್ವಾನ: ಕಾಂಗ್ರೆಸ್ ಪ್ರತಿಕ್ರಿಯೆ ಹೀಗಿದೆ...
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣಗಳಲ್ಲಿ ಸತ್ಯಾಂಶಗಳನ್ನು ಆಧರಿಸಿ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ಆಪಾದಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಯಾವುದೇ ವಿಚಾರದಲ್ಲಿ ಬಿಜೆಪಿ ವಕ್ತಾರರ ಜತೆ ಬಹಿರಂಗ ಚರ್ಚೆಗೆ ಬರಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲು ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭಾಷಣಗಳಲ್ಲಿ ತಮ್ಮ ಕಲ್ಪನೆಯನ್ನು ಹೆಚ್ಚಾಗಿ ಹರಿಯಬಿಡುತ್ತಿದ್ದಾರೆ. ಅದರ ಬದಲು ನಿರುದ್ಯೋಗ, ಬೆಲೆ ಏರಿಕೆ ಮತ್ತು ರೈತರ ಭವಿಷ್ಯದ ಬಗ್ಗೆ ಅವರು ಮಾತನಾಡಲಿ ಎಂದು ಪ್ರಿಯಾಂಕಾ ಸವಾಲು ಹಾಕಿದ್ದರು.
ಕಾಂಗ್ರೆಸ್ ನಾಯಕಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಇರಾನಿ, ಯಾವುದೇ ಟೆಲಿವಿಷನ್ ಚಾನೆಲ್ ಗಳಲ್ಲಿ, ಯಾವುದೇ ನಿರೂಪಕರ ಎದುರು, ಯಾವುದೇ ಸಮಯ ಅಥವಾ ಯಾವುದೇ ವಿಷಯಗಳ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲು "ಬಾಯ್ ಔರ್ ಬೆಹನ್" ಬರಲಿ ಎಂದು ಪ್ರತಿ ಸವಾಲು ಹಾಕಿದ್ದರು. ನಮ್ಮ ಪಕ್ಷದಿಂದ ಕೇವಲ ಸುಧಾಂಶು ತ್ರಿವೇದಿ ಸಾಕು. ಅವರು ಉತ್ತರಿಸುತ್ತಾರೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರಿನೇತ್, ಮೊದಲು ಸಚಿವೆ ನನ್ನೊಂದಿಗೆ ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡಿದ್ದಾರೆ.
"ಮೊದಲು ನನ್ನ ಜತೆ ಚರ್ಚೆಗೆ ಬನ್ನಿ. ಸ್ಥಳ, ದಿನ, ನಿರೂಪಕರು ಮತ್ತು ವಿಷಯ ಕೂಡಾ ನಿಮ್ಮದೇ? ಆ ಧೈರ್ಯ ನಿಮಗಿದೆಯೇ? ಕಾಂಗ್ರೆಸ್ ಅಗ್ರ ನಾಯಕರ ಎದುರು ಮಾತನಾಡುವ ಘನತೆ ನಿಮಗಿಲ್ಲ. ಬಣ್ಣದ ಮಾತುಗಳಿಂದ ನಿಮ್ಮ ಅಸ್ತಿತ್ವಕ್ಕೆ ಹೋರಾಡುವುದು ನಿಲ್ಲಿಸಿ. ಸವಾಲು ಸ್ವೀಕರಿಸಿ" ಎಂದು ಎಕ್ಸ್ ಪೋಸ್ಟ್ ನಲ್ಲಿ ಶ್ರಿನೇತ್ ಹೇಳಿದ್ದಾರೆ.