ಜಮ್ಮು ಕಾಶ್ಮೀರದಲ್ಲಿ ಒಂದೇ ತಿಂಗಳಲ್ಲಿ ಐದನೇ ಭಯೋತ್ಪಾದಕ ದಾಳಿ: ಕೇಂದ್ರ ಸರಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

Update: 2024-07-09 08:04 GMT

Photo: PTI

ಹೊಸದಿಲ್ಲಿ: ನಿರಂತರ ಭಯೋತ್ಪಾದನಾ ದಾಳಿಗಳಿಗೆ ಪರಿಹಾರವು ಬಲವಾದ ಕ್ರಮಗಳಿಂದ ಬರುತ್ತದೆ ಹೊರತು ಪೊಳ್ಳು ಭಾಷಣ ಮತ್ತು ಸುಳ್ಳು ಭರವಸೆಗಳಿಂದ ಅಲ್ಲ ಎಂದು ರಾಹುಲ್ ಗಾಂಧಿ ಸೋಮವಾರ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮಚೇಡಿ ಪ್ರದೇಶದಲ್ಲಿ ಐದು ಸೈನಿಕರು ಹುತಾತ್ಮರಾದ ಬಳಿಕ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

ದಾಳಿಯಲ್ಲಿ 4 ಸೈನಿಕರು ಗಾಯಗೊಂಡಿದ್ದಾರೆ ಎಂದೂ ವರದಿಯಾಗಿದೆ.

ದಾಳಿ ನಡೆದ ಪ್ರದೇಶವು ಭಾರತೀಯ ಸೇನೆಯ 9 ಕಾರ್ಪ್ಸ್ ಅಡಿಯಲ್ಲಿ ಬರುತ್ತದೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ನಂತರ, ನಮ್ಮ ಸೈನಿಕರು ಕೂಡ ಪ್ರತಿದಾಳಿ ನಡೆಸಿದರು ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಕಥುವಾ ಪಟ್ಟಣದಿಂದ 150 ಕಿಮೀ ದೂರದಲ್ಲಿರುವ ಲೋಹೈ ಮಲ್ಹಾರ್‌ನ ಬದ್ನೋಟಾ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ 3.30 ರ ಸುಮಾರಿಗೆ ಮಚೇಡಿ-ಕಿಂಡ್ಲಿ-ಮಲ್ಹಾರ್ ರಸ್ತೆಯಲ್ಲಿ ನಿತ್ಯ ಗಸ್ತು ತಿರುಗುತ್ತಿದ್ದ ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಗ್ರೆನೇಡ್ ಎಸೆದು ಗುಂಡಿನ ದಾಳಿ ನಡೆಸಿದರು. ಈ ದಾಳಿಯಲ್ಲಿ ಐವರು ಸೈನಿಕರು ಹುತಾತ್ಮರಾಗಿದ್ದಾರೆ.

ಮೋದಿ ಸರ್ಕಾರ ಮೂರನೇ ಬಾರಿಗೆ ಆಡಳಿತಕ್ಕೆ ಬಂದ ನಂತರ ಜಮ್ಮು ಕಾಶ್ಮೀರದಲ್ಲಿ ಒಂದೇ ತಿಂಗಳಲ್ಲಿ ನಡೆದ ಐದನೇ ಭಯೋತ್ಪಾದಕ ದಾಳಿ ಇದಾಗಿದೆ. 

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕಿ ಮೆಹಬೂಬಾ ಮುಫ್ತಿ, ಯೋಧರ ಮರಣವು ಜಮ್ಮು ಕಾಶ್ಮೀರದಲ್ಲಿನ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಹೇಳುತ್ತಿದೆ ಎಂದು ಹೇಳಿದ್ದಾರೆ.

ಕಥುವಾದಲ್ಲಿ ನಾಲ್ವರು ಯೋಧರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇನೆ. 2019 ರ ಮೊದಲು ಉಗ್ರಗಾಮಿತ್ವದ ಯಾವುದೇ ಕುರುಹು ಕಂಡುಬಂದಿಲ್ಲದ ಸ್ಥಳಗಳಲ್ಲಿ ಈಗ ಸೈನಿಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬುದು ದುರಂತ ಮತ್ತು ಅಷ್ಟೇ ಆಘಾತಕಾರಿ. ಜಮ್ಮು ಕಾಶ್ಮೀರದ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಉತ್ತಮ ಮಾಡಿಕೊಳ್ಳಬೇಕಾದ ಅಗತ್ಯವನ್ನು ನಿಮಗೆ ಈ ದಾಳಿ ತಿಳಿಸುತ್ತದೆ. ಅವರ ಕುಟುಂಬಗಳಿಗೆ ಗಾಢ ಸಂತಾಪ ಸೂಚಿಸುತ್ತೇನೆ ಎಂದು ಮೆಹಬೂಬಾ ಮುಫ್ತಿ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಯೋಧರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಎಐಸಿಸಿ ಅಧ್ಯಕ್ಷ ಹಾಗು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, "ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಇಳಿಮುಖ ದಾರಿಯಲ್ಲಿದೆ. ಯಾವುದೇ ಬಣ್ಣ ಬಳಿಯುವಿಕೆ , ನಕಲಿ ಹೇಳಿಕೆಗಳು, ಪೊಳ್ಳು ಹೆಗ್ಗಳಿಕೆಗಳು ಮತ್ತು ಎದೆ ಉಬ್ಬಿಸಿಕೊಳ್ಳುವ ವರ್ತನೆಗಳಿಂದ ಮೋದಿ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ಭದ್ರತೆಗೆ ದುರಂತವಾಗಿ ಪರಿಣಮಿಸಿದೆ ಎಂಬ ಸತ್ಯವನ್ನು ಮರೆಮಾಚಾಲು ಸಾಧ್ಯವಿಲ್ಲ. ಪ್ರಚಾರವೇ ಗುರಿಯಾದಾಗ ನಿಜವಾದ ಸುರಕ್ಷತಾ ಚಟುವಟಿಕೆ ಅದಕ್ಕೆ ಬಲಿಯಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಉದ್ಧವ್ ಠಾಕ್ರೆ ಬಣದ ಶಿವಸೇನೆಯ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಇದು 'ಎನ್‌ಡಿಎ ಮೂರನೇ ಅವಧಿಯ ಪ್ರಾರಂಭದ ನಂತರ ನಡೆಯುತ್ತಿರುವ 5 ನೇ ಭಯೋತ್ಪಾದಕ ದಾಳಿ' ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಗೃಹ ಸಚಿವರ, ಪ್ರಧಾನ ಮಂತ್ರಿಯವರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ರಕ್ಷಣಾ ಸಚಿವರ ಮೌನವನ್ನು ಪ್ರಶ್ನಿಸಿದ್ದಾರೆ.

ಐದು ಸೈನಿಕರು ಹುತಾತ್ಮರಾಗಿರುವ ಬಗ್ಗೆ ರಕ್ಷಣಾ ಸಚಿವ ಸಂತಾಪ ಸೂಚಿಸಿ ಇದಕ್ಕೆ ತಕ್ಕ ತಿರುಗೇಟು ನೀಡುವುದಾಗಿ ಎಕ್ಸ್ ನಲ್ಲಿ ಹೇಳಿದ್ದಾರೆ.

ಆದರೆ ಪ್ರಧಾನಿ ಮೋದಿ ಹಾಗು ಗೃಹ ಸಚಿವ ಅಮಿತ್ ಶಾ ಅವರು ದುರಂತದ ಬಗ್ಗೆ ಯಾವುದೇ ಹೇಳಿಕೆ ನೀಡಿದ್ದು ವರದಿಯಾಗಿಲ್ಲ. ಮೋದಿ ಹಾಗು ಪಿಎಂಒ ಎಕ್ಸ್ ಖಾತೆಗಳಲ್ಲಿ ಅವರ ಮಾಸ್ಕೊ ಭೇಟಿಯ ವಿವರಗಳೇ ತುಂಬಿವೆ.

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಸೋಮವಾರ ಸಂತಾಪ ವ್ಯಕ್ತಪಡಿಸಿದ್ದಾರೆ.

ನಮ್ಮ ಸೇನೆಯ ಮೇಲಿನ ಈ ಹೇಡಿತನದ ದಾಳಿ ಅತ್ಯಂತ ಖಂಡನೀಯ. ಒಂದು ತಿಂಗಳ ಅವಧಿಯಲ್ಲಿ ನಡೆದ ಐದನೇ ಭಯೋತ್ಪಾದಕ ದಾಳಿಯು ದೇಶದ ಭದ್ರತೆ ಮತ್ತು ನಮ್ಮ ಸೈನಿಕರ ಜೀವದ ಮೇಲಿನ ಘೋರ ದಾಳಿಯಾಗಿದೆ, ”ಎಂದು ಅವರು ಹೇಳಿದ್ದಾರೆ.

"ನಿರಂತರ ಭಯೋತ್ಪಾದನಾ ದಾಳಿಗಳಿಗೆ ಪರಿಹಾರವು ಬಲವಾದ ಕ್ರಮಗಳಿಂದ ಬರುತ್ತದೆಯೇ ಹೊರತು ಪೊಳ್ಳು ಭಾಷಣ ಮತ್ತು ಸುಳ್ಳು ಭರವಸೆಗಳಿಂದ ಅಲ್ಲ. ಈ ದುಃಖದ ಸಮಯದಲ್ಲಿ ನಾವು ದೇಶದೊಂದಿಗೆ ದೃಢವಾಗಿ ನಿಲ್ಲುತ್ತೇವೆ" ಎಂದು ರಾಹುಲ್ ಹೇಳಿದ್ದಾರೆ.

2023ರಲ್ಲಿ ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ ಕಳೆದ ಸುಮಾರು ನಾಲ್ಕು ವರ್ಷಗಳಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಅಧಿಕೃತ ಮಾಹಿತಿ ಬಹಿರಂಗಪಡಿಸಿದೆ.

ಆಗಸ್ಟ್ 5, 2019 ಮತ್ತು ಜೂನ್ 16, 2023 ರ ನಡುವೆ 231 ಭಯೋತ್ಪಾದಕರು ಮತ್ತು ಅವರ ಸಹಾಯಕರ ಬಂಧನ ನಡೆದಿದೆ. ಇದು ಅಕ್ಟೋಬರ್ 27, 2015 ಮತ್ತು ಆಗಸ್ಟ್ 4, 2019 ಕ್ಕೆ ಹೋಲಿಸಿದರೆ 71 ಶೇಕಡ ಹೆಚ್ಚು.

ಅಧಿಕೃತ ಮಾಹಿತಿಯ ಪ್ರಕಾರ, ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು ಪ್ರದೇಶದಲ್ಲಿ ಎಂಟು ಗ್ರೆನೇಡ್ ಮತ್ತು 13 ಸುಧಾರಿತ ಸ್ಫೋಟಕ ಸಾಧನ (ಐಇಡಿ) ದಾಳಿಗಳು ನಡೆದಿವೆ. ಅಕ್ಟೋಬರ್ 27, 2015 ರಿಂದ ಆಗಸ್ಟ್ 4, 2019 ರವರೆಗೆ ನಾಲ್ಕು ಗ್ರೆನೇಡ್ ಮತ್ತು ಏಳು ಐಇಡಿ ದಾಳಿಗಳು ನಡೆದಿದ್ದವು.

ಸುಧಾರಿತ ಸ್ಪೋಟಕಗಳು ಅಂದ್ರೆ ಐಇಡಿ ಸ್ಫೋಟಗಳಲ್ಲಿನ ಸಾವುನೋವುಗಳು 2015-19 ರಲ್ಲಿ ಮೂರರಿಂದ 2019-2023 ರಲ್ಲಿ 11 ಕ್ಕೆ ಏರಿದೆ. ಅಂದ್ರೆ 73 ಶೇಕಡದಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News