ತನಿಖಾಧಿಕಾರಿಗಳಿಗೆ ನೆರವು ನೀಡುವ ಸೋಗು ಹಾಕಿದ್ದ ಕೊಲೆಗಾರನನ್ನು ಪೊಲೀಸರು ಭೇದಿಸಿದ್ದು ಹೇಗೆ?
ಬೆಂಗಳೂರು: ರಖಿಬಾ ನಿಸಾರ್ ಎಂಬ ಬಾಲಕಿಯು ಬೆಂಗಳೂರಿನ ವಿಕ್ಟೋರಿಯಾ ರಸ್ತೆಯಲ್ಲಿರುವ ಶ್ರೀ ಧನರಾಜ್ ಫೂಲ್ ಚಂದ್ ಹಿಂದಿ ಪ್ರೌಢಶಾಲೆಯಲ್ಲಿ ಎರಡನೆ ತರಗತಿ ವಿದ್ಯಾರ್ಥಿಯಾಗಿದ್ದಳು.
2014ರಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿ ನಡೆದಿದ್ದ ಈ ಏಳು ವರ್ಷದ ಬಾಲಕಿಯ ಅಪಹರಣ ಪ್ರಕರಣದಿಂದ ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿದ್ದರು. ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಲು ಸಮಯದ ವಿರುದ್ಧ ಹೋರಾಡುತ್ತಿದ್ದರೆ, ಓರ್ವ ವ್ಯಕ್ತಿ ಪೊಲೀಸರ ತನಿಖೆಗೆ ಸಹಕರಿಸುವಂತೆ ವರ್ತಿಸುತ್ತಿದ್ದ.
ಸಂತ್ರಸ್ತೆ ರಖಿಬಾ ನಿಸಾರ್ ಎಂಬ ಬಾಲಕಿ ಬೆಂಗಳೂರಿನ ವಿಕ್ಟೋರಿಯಾ ರಸ್ತೆಯಲ್ಲಿರುವ ಶ್ರೀ ಧನರಾಜ್ ಫೂಲ್ ಚಂದ್ ಹಿಂದಿ ಪ್ರೌಢಶಾಲೆಯಲ್ಲಿ ಎರಡನೆ ತರಗತಿಯ ವಿದ್ಯಾರ್ಥಿಯಾಗಿದ್ದಳು. ಆಕೆ ಸೈಯೀದಾ ಸಮೀನಾ ನಿಸಾರ್ ಹಾಗೂ ಸೈಯದ್ ನಿಸಾರ್ ದಂಪತಿಗಳ ನಾಲ್ವರು ಪುತ್ರಿಯರ ಪೈಕಿ ಕೊನೆಯ ಪುತ್ರಿಯಾಗಿದ್ದಳು. ಗಲ್ಫ್ ನಲ್ಲಿ ಕಂಪ್ಯೂಟರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆಕೆಯ ತಂದೆಯು, ಹೊಸ ಮನೆಯನ್ನು ನಿರ್ಮಿಸಲು ಭಾರತಕ್ಕೆ ಮರಳಿ ಬಂದಿದ್ದರು. ಮನೆಯ ನಿರ್ಮಾಣ ಪೂರ್ಣಗೊಂಡ ನಂತರ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ಯೋಗವೊಂದನ್ನು ಕಂಡುಕೊಳ್ಳುವ ಯೋಜನೆ ಸೈಯದ್ ನಿಸಾರ್ ಅವರದ್ದಾಗಿತ್ತು.
ಶಾಲೆಯಿಂದಲೇ ಅಪರಹಣ
ಜುಲೈ 9, 2014ರಂದು ಸೈಯೀದಾ ಸಮೀನಾ ನಿಸಾರ್ ಸ್ವೀಕರಿಸಿದ ಸಂದೇಶವೊಂದರಲ್ಲಿ ಹೀಗೆ ಸೂಚಿಸಲಾಗಿತ್ತು: “ಹಲೊ ಸಮೀನಾ ನಿಸಾರ್, ನಿಮ್ಮ ಪುತ್ರಿ ನನ್ನ ತಂಡದೊಂದಿಗಿರುವುದರಿಂದ ಹೆದರಬೇಡಿ. ಪೊಲೀಸರ ಬಳಿಗೆ ಅಥವಾ ನಿಮ್ಮ ಸಂಬಂಧಿಕರ ಬಳಿಗೆ ತೆರಳಲು ಪ್ರಯತ್ನಿಸಬೇಡಿ. ನಾನು ನಿಮಗೆ ಎಚ್ಚರಿಕೆ ನೀಡುತ್ತೇನೆ ಹಾಗೂ ನನ್ನ ತಂಡವು ನಿಮ್ಮನ್ನು ಗಮನಿಸುತ್ತಿದೆ.”
ನಂತರದ ಸಂದೇಶದಲ್ಲಿ ಅಪಹರಣಕಾರನು ಬಾಲಕಿಯನ್ನು ಬಿಡುಗಡೆ ಮಾಡಲು ರೂ. 10 ಲಕ್ಷ ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದರಿಂದ ಗಾಬರಿಗೊಂಡಿದ್ದ ಸಮೀನಾ ನಿಸಾರ್, ಈ ವಿಷಯವನ್ನು ತಮ್ಮ ಪತಿ ಹಾಗೂ ಸಂಬಂಧಿಕರಿಗೆ ತಿಳಿಸಿ, ಅದೇ ದಿನ ಸಂಜೆ ಅಶೋಕನಗರ ಪೊಲೀಸ್ ಠಾಣೆಗೆ ತೆರಳಿದ್ದರು.
ಪೊಲೀಸರು ಆ ಸಂಖ್ಯೆಯನ್ನು ಹಿಂಬಾಲಿಸಲು ಪ್ರಯತ್ನಿಸಿದಾಗ ಆ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಕ್ಷಣಾರ್ಧದಲ್ಲಿ ಐಪಿಎಸ್ ಅಧಿಕಾರಿಗಳೂ ಕೂಡಾ ತನಿಖೆಯ ಮೇಲುಸ್ತುವಾರಿಯಲ್ಲಿ ಭಾಗಿಯಾಗಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳು ರಖಿಬಾ ವ್ಯಾಸಂಗ ಮಾಡುತ್ತಿದ್ದ ಶಾಲೆಗೆ ತೆರಳಿ, ರಖಿಬಾಳ ಅಜ್ಜಿಯು ಅಸ್ವಸ್ಥಗೊಂಡಿರುವುದರಿಂದ ನಾನು ಆಕೆಯನ್ನು ಶಾಲೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿರುವುದು ಬಯಲಾಯಿತು. ರಖಿಬಾಳ ಹಿರಿಯ ಸಹೋದರಿ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೂ, ರಖಿಬಾಳ ತರಗತಿ ಶಿಕ್ಷಕಿಯಾಗಿದ್ದ ಮೇರಿ ಪ್ರಿಯಾಂಕಾ ಈ ವಿಷಯವನ್ನು ಆಕೆಯೊಂದಿಗೆ ಮರು ಪರಿಶೀಲಿಸುವ ಗೋಜಿಗೇ ಹೋಗಿರಲಿಲ್ಲ.
ಪೊಲೀಸರಿಗೆ ನೆರವು ನೀಡಿದ ‘ಕೊಲೆಗಾರ’
“ಸಮೀನಾ ನಿಸಾರ್ ಹಲವಾರು ಸಂಬಂಧಿಕರೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದರು. ಈ ಗುಂಪಿನಲ್ಲಿ 28 ವರ್ಷದ ಸೈಯದ್ ಸಲ್ಮಾನ್ ಶಾ ಕೂಡಾ ಇದ್ದ” ಎಂದು ಆಗ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಟಿ.ರಂಗಪ್ಪ ಸ್ಮರಿಸುತ್ತಾರೆ.
ಸಲ್ಮಾನ್ ಶಾನ ಪತ್ನಿಯಾದ ಶಬ್ರೀನಾ, ಸಮೀನಾ ನಿಸಾರ್ ರ ಸೋದರ ಸಂಬಂಧಿಯಾಗಿದ್ದರು. ಸಲ್ಮಾನ್ ಶಾ ಕುಟುಂಬವು ಭಾರತೀನಗರದಲ್ಲಿ ವಾಸಿಸುತ್ತಿದ್ದರೆ, ರಖಿಬಾ ಹಾಗೂ ಆಕೆಯ ಕುಟುಂಬವು ಆಸ್ಟಿನ್ ಟೌನ್ ನಲ್ಲಿ ವಾಸಿಸುತ್ತಿತ್ತು.
“ತನಿಖೆಯು ಪ್ರಾರಂಭವಾದಾಗ, ಅಲ್ಲಿ ಹಲವಾರು ತಂಡಗಳಿದ್ದವು. ಒಂದು ತಂಡವು ರಖಿಬಾ ವ್ಯಾಸಂಗ ಮಾಡುತ್ತಿದ್ದ ಶಾಲೆಯಿಂದ ಮಾಹಿತಿಯನ್ನು ಪಡೆಯುತ್ತಿದ್ದರೆ, ಮತ್ತೊಂದು ತಂಡವು ಒತ್ತೆ ಹಣದ ಸಂದೇಶ ಬಂದಿದ್ದ ಮೊಬೈಲ್ ಸಂಖ್ಯೆಯ ಬೆನ್ನು ಹತ್ತಿತ್ತು. ಈ ವೇಳೆ ಜುಲೈ 9, 2014ರಂದು ನಡೆದಿದ್ದ ಘಟನೆಗಳನ್ನು ಮರು ನಿರೂಪಿಸುವ ಮೂಲಕ ಸಲ್ಮಾನ್ ಪೊಲೀಸರಿಗೆ ನೆರವು ನೀಡುತ್ತಿದ್ದ” ಎಂದು ರಂಗಪ್ಪ ಹೇಳುತ್ತಾರೆ.
“ನಾನು ಸಮೀನಾರಿಗಿರುವ ಪ್ರತಿಸ್ಪರ್ಧಿಗಳು, ಸ್ನೇಹಿತರು ಹಾಗೂ ಯಾರಾದರೂ ಶಂಕಿತರ ಕುರಿತು ಸಮೀನಾರನ್ನು ಪ್ರಶ್ನಿಸುತ್ತಿದ್ದೆ. ಅದರಿಂದ ಆಕೆ ಗಾಬರಿಗೊಂಡಾಗ, ಆಕೆಗೆ ಸುಧಾರಿಸಿಕೊಳ್ಳಲು ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಸಲ್ಮಾನ್ ಪದೇ ಪದೇ ಪೊಲೀಸ್ ಠಾಣೆಯಿಂದ ಹೊರ ಹೋಗುವುದು ಮತ್ತು ಮರಳಿ ಬರುವುದನ್ನು ನಾನು ಗಮನಿಸಿದೆ. ಆತ ಸಮೀನಾ ಬಳಿಗೆ ಬಂದು ನಿನ್ನ ಪುತ್ರಿಯು ಸುರಕ್ಷಿತವಾಗಿರುತ್ತಾಳೆ ಎಂದು ಹೇಳುತ್ತಿದ್ದರೂ, ಆತ ಆತಂಕಗೊಂಡಿರುವಂತೆ ಕಂಡು ಬರುತ್ತಿದ್ದ” ಎಂದು ಅವರು ಸ್ಮರಿಸುತ್ತಾರೆ. ಆದರೆ, ಆತನೇ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಎಂಬ ಸಂಗತಿ ನಂತರದಲ್ಲಿ ಬಯಲಾಗಿತ್ತು.
ಸಮೀನಾ ನಿಸಾರ್ ಅವರ ಸಹೋದರಿ ಸಬೀರಾ ಇನಾಯತ್ ಹಾಗೂ ಆಕೆಯ ಪತಿ ಇನಾಯತ್ ಅಹ್ಮದ್ ಸಲ್ಮಾನ್ ಮೊದಲಿಗೆ ಶಾ ಮೇಲೆ ಸಂಶಯ ವ್ಯಕ್ತಪಡಿಸಿದರು. “ಅವರು ತಮ್ಮ ಸಂಶಯವನ್ನು ಸಮೀನಾಗೆ ತಿಳಿಸಿದರಾದರೂ, ಆಕೆ ಅದನ್ನು ನಂಬಲಿಲ್ಲ. ನಾಲ್ಕು ಗಂಟೆಗಳ ನಂತರ, ಸಬೀರಾ ತಮ್ಮ ಸಂಶಯದ ಕುರಿತು ನನಗೆ ಮಾಹಿತಿ ನೀಡಿದರು” ಎಂದು ರಂಗಪ್ಪ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು.
ಮರು ದಿನ ಸುಮಾರು 1.30 ಗಂಟೆಗೆ ವಿಚಾರಣೆ ನಡೆಸಲು ಸಲ್ಮಾನ್ ಶಾನನ್ನು ರಂಗಪ್ಪ ಹಾಗೂ ಆತನ ತಂಡವು ಠಾಣೆಗೆ ಕರೆ ತಂದಿತ್ತು. ಆದರೆ, ಆ ಬಾಲಕಿಯ ಮೃತ ದೇವು ಆತನ ಮನೆಯೊಳಗೇ ಇರುವುದು ಅವರಿಗೆ ತಿಳಿದಿರಲಿಲ್ಲ. ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ ನಂತರ, ನನ್ನ ಪತ್ನಿಯು ರಖಿಬಾಳನ್ನು ಅಪಹರಿಸಿದಳು ಎಂದು ಶಾ ತಪ್ಪೊಪ್ಪಿಕೊಂಡಿದ್ದ.
“ನಾವು ಶಾ ಮನೆಗೆ ತೆರಳಿದಾಗ, ಅಲ್ಲಿ ಪತಿ ಹಾಗೂ ಪತ್ನಿ ನಡುವೆ ಮತ್ತೊಂದು ನಾಟಕ ಪ್ರಾರಂಭವಾಯಿತು. ಸಲ್ಮಾನ್ ತನ್ನ ಪತ್ನಿಯನ್ನು ದೂಷಿಸಿದರೆ, ಆತನ ಪತ್ನಿ ಶಬ್ರೀನ್ ಆತನನ್ನೇ ದೂಷಿಸತೊಡಗಿದಳು. ಈ ನಾಟಕವು ಸುಮಾರು 10 ನಿಮಿಷಗಳ ಕಾಲ ನಡೆಯಿತು. ಈ ನಡುವೆ, ನಾವು ಮನೆಯನ್ನು ತಪಾಸಣೆ ಮಾಡಲು ಪ್ರಾರಂಭಿಸಿದೆವು. ನಮ್ಮ ಕಾನ್ ಸ್ಟೇಬಲ್ ಒಬ್ಬರು ಮಂಚದ ಕೆಳಗೆ ಕಂಬಳಿಯಲ್ಲಿ ಏನನ್ನೊ ಸುತ್ತಿಟ್ಟಿರುವುದನ್ನು ಪತ್ತೆ ಹಚ್ಚಿದರು. ನಾವು ಅದನ್ನು ತೆರೆದಾಗ, ನಮಗೆ ರಖಿಬಾಳ ಮೃತ ದೇಹ ದೊರೆಯತು. ಅದನ್ನು ನೋಡುತ್ತಿದ್ದಂತೆಯೆ ನನ್ನ ದೇಹವೆಲ್ಲ ತಣ್ಣಗಾಯಿತು. ಇಂದಿನವರೆಗೂ ಆ ಘಟನೆಯನ್ನು ಮರೆಯಲು ನನಗೆ ಸಾಧ್ಯವಾಗುತ್ತಿಲ್ಲ. ನಂತರ ನಾವು ದಂಪತಿಗಳನ್ನು ಬಂಧಿಸಿದೆವು” ಎಂದು ಸದ್ಯ ಬೆಂಗಳೂರಿನ ಹಲಸೂರು ಉಪ ವಲಯದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾಗಿರುವ ರಂಗಪ್ಪ ನಿಟ್ಟುಸಿರು ಬಿಟ್ಟರು.
ಹಣದಾಸೆಗೆ ನಡೆದಿತ್ತು ಅಪಹರಣ
ದಂಪತಿಗಳಾದ ಶಬ್ರೀನ್ ಹಾಗೂ ಸಲ್ಮಾನ್ ತೀವ್ರ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದರು. ರಖಿಬಾಳ ತಂದೆ ಗಲ್ಫ್ ನಲ್ಲಿ ದೀರ್ಘಕಾಲದಿಂದ ಉದ್ಯೋಗ ಮಾಡುತ್ತಿದ್ದುದರಿಂದ ಅವರ ಬಳಿ ಹೇರಳ ಹಣ ಇರಬಹುದು ಎಂದು ಅವರು ಭಾವಿಸಿದ್ದರು.
ಅವರು ರಖಿಬಾಳನ್ನು ಅಪಹರಿಸಲು ನಿರ್ಧರಿಸಿದರು. ನಂತರ ಬುರ್ಖಾಧಾರಿಯಾಗಿ ರಖಿಬಾಳ ಶಾಲೆಗೆ ತೆರಳಿದ ಶಬ್ರೀನ್ ಳನ್ನು ರಖಿಬಾ ಅಪ್ಪಿಕೊಂಡಿದ್ದರಿಂದ, ಶಿಕ್ಷಕಿಯು ಆಕೆ ಪರಿಚಿತ ವ್ಯಕ್ತಿಯೇ ಇರಬೇಕು ಎಂದು ಭಾವಿಸಿದರು.
ಸಮೀನಾ ನಾಸಿರ್ ಗೆ ಒತ್ತೆ ಹಣದ ಸಂದೇಶ ಕಳಿಸಿದ ನಂತರ ಸಲ್ಮಾನ್ ಶಾ ಆಕೆಯ ನಡೆಗಳ ಮೇಲೆ ಕಣ್ಣಿಡಲು ಆಕೆಯೊಂದಿಗೇ ಇರತೊಡಗಿದ. ಈ ವಿಷಯವು ಪೊಲೀಸ್ ಠಾಣೆಯ ಮೆಟ್ಟಿಲೇರಿದಾಗ, ನಮ್ಮ ಯೋಜನೆಯಲ್ಲಿ ಯಾವುದೋ ಲೋಪವಾಗಿದೆ ಎಂಬ ಸಂಗತಿ ಸಲ್ಮಾನ್ ಶಾಗೆ ಅರಿವಾಯಿತು. ಸಮೀನಾ ನಿಸಾರ್ ಇನ್ನೂ ಪೊಲೀಸ್ ಠಾಣೆಯಲ್ಲಿಯೇ ಇರುವಾಗ, ತನ್ನ ಮನೆಗೆ ಮರಳಿದ್ದ ಸಲ್ಮಾನ್ ಶಾ, ರಖಿಬಾಳ ಕತ್ತು ಹಿಚುಕಿ ಹತ್ಯೆಗೈದಿದ್ದ. ನಂತರ, ಮರುದಿನ ಆಕೆಯ ಮೃತ ದೇಹವನ್ನು ವಿಸರ್ಜಿಸಲು ಯೋಜಿಸಿದ್ದ. ಆದರೆ, ಆತ ಆ ಕೃತ್ಯ ಎಸಗುವ ಮುನ್ನವೇ ಪೊಲೀಸರು ಆತನನ್ನು ಭೇದಿಸಿದ್ದರು.
ಶಬ್ರಿನ್ ಯಾವುದೇ ಗುರುತಿನ ದಾಖಲೆ ನೀಡದೆ ಶಿವಾಜಿನಗರದಿಂದ ಸಿಮ್ ಕಾರ್ಡ್ ತಂದಿರುವುದು ತನಿಖೆಯ ನಂತರದಲ್ಲಿ ಪತ್ತೆಯಾಯಿತು. ಸಮೀನಾ ನಾಸಿರ್ ಅಶೋಕನಗರ ಪೊಲೀಸ್ ಠಾಣೆಯಲ್ಲಿದ್ದಾಗ, ಸಲ್ಮಾನ್ ಶಾ ಸಿಮ್ ಕಾರ್ಡ್ ಬದಲಾಯಿಸಿ ಕೆಲವು ಸಂದೇಶ ರವಾನಿಸಿರುವುದೂ ತನಿಖೆಯಿಂದ ಬಹಿರಂಗವಾಗಿತ್ತು.
ಕೊನೆಗೂ ಕಂಬಿಯ ಹಿಂದೆ ಅಪರಾಧಿಗಳು
ಜುಲೈ 30, 2021ರಂದು ಸಲ್ಮಾನ್ ಶಾ ಹಾಗೂ ಶಬ್ರೀನ್ ದಂಪತಿಗಳಿಗೆ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 364ಎ (ಒತ್ತೆ ಹಣಕ್ಕಾಗಿ ಅಪಹರಣ), 302 (ಹತ್ಯೆ) ಹಾಗೂ 201 (ಸಾಕ್ಷ್ಯಗಳ ನಾಶ) ಅಡಿಯಲ್ಲಿ ದೋಷಿಗಳೆಂದು ತೀರ್ಪು ನೀಡಲಾಯಿತು.
2013ರಲ್ಲಿ ಶಬ್ರೀನ್ ರ ಚಿಕ್ಕಪ್ಪನನ್ನೂ ದಂಪತಿಗಳು ಹತ್ಯೆಗೈದು, ಪೊಲೀಸರನ್ನು ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ರಂಗಪ್ಪ ಹೇಳುತ್ತಾರೆ. “65 ವರ್ಷದ ಹಫೀಝ್ ಶಂಸುಲ್ ಹುದಾ, ಅಲ್-ಕುದ್ಸ್ ಮೈನಾರಿಟೀಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿದ್ದರು ಹಾಗೂ ಉರ್ದು-ಇಂಗ್ಲಿಷ್ ವಾರಪತ್ರಿಕೆಯಾದ ಮಖ್ಝಾನ್ ನ ಪ್ರಧಾನ ಸಂಪಾದಕರೂ ಆಗಿದ್ದರು. ಅವರನ್ನು ದೇವರಜೀವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹತ್ಯೆಗೈಯ್ಯಲಾಗಿತ್ತಾದರೂ, ಅದು ಭೇದಿಸಲಾಗದ ಪ್ರಕರಣವಾಗಿಯೇ ಉಳಿದಿತ್ತು. ರಖಿಬಾಳ ಹತ್ಯೆಯ ಸಂಬಂಧ ವಿಚಾರಣೆ ನಡೆಸುವಾಗ, ತಾವು ಹುದಾರನ್ನೂ ಹತ್ಯೆಗೈದಿರುವುದಾಗಿ ಶಬ್ರೀನ್ ತಪ್ಪೊಪ್ಪಿಕೊಂಡಿದ್ದಳು” ಎನ್ನುತ್ತಾರೆ ರಂಗಪ್ಪ.
“ನಾವು ಪ್ರತ್ಯೇಕವಾಗಿ ಅವರನ್ನು ಈ ಸಂಬಂಧ ವಿಚಾರಣೆಗೊಳಪಡಿಸಿದೆವು ಹಾಗೂ ವಿಚಾರಣೆಯ ಸಂದರ್ಭದಲ್ಲಿ ಸರ್ವೇಸಾಮಾನ್ಯ ತಂತ್ರಗಳನ್ನೇ ಬಳಸಿದೆವು. ಆಗ 2013ರಲ್ಲಿ ನಡೆದಿದ್ದ ಹತ್ಯೆಯನ್ನೂ ಅವರೇ ಮಾಡಿದ್ದರು ಎಂಬ ಸಂಗತಿ ನಮಗೆ ತಿಳಿಯಿತು” ಎಂದು ರಂಗಪ್ಪ ತಮ್ಮ ಮಾತು ಮುಕ್ತಾಯಗೊಳಿಸಿದರು.
ಹಫೀಝ್ ಹುದಾ ಹತ್ಯಾ ಪ್ರಕರಣವು ಸದ್ಯ ವಿಚಾರಣೆಯ ಹಂತದಲ್ಲಿದೆ.
ಸೌಜನ್ಯ: indianexpress.com