ಪಶ್ಚಿಮಬಂಗಾಳದಲ್ಲಿ ಉಕ್ಕಿನ ಕಾರ್ಖಾನೆ ಆರಂಭಿಸಲು ಮುಂದಾದ ಸೌರವ್ ಗಂಗುಲಿ

Update: 2023-09-16 07:21 GMT

Twitter@NDTV

ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರದ ಸಲ್ಬೋನಿಯಲ್ಲಿ ಉಕ್ಕಿನ ಕಾರ್ಖಾನೆಯನ್ನು ಆರಂಭಿಸುವ ಮೂಲಕ ಕೈಗಾರಿಕೋದ್ಯಮಿಯಾಗಲು ಸಿದ್ಧರಾಗಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ 12 ದಿನಗಳ ಸ್ಪೇನ್ ಹಾಗೂ ದುಬೈ ಪ್ರವಾಸದಲ್ಲಿ ಅವರೊಂದಿಗೆ ಬಂದಿದ್ದ ನಿಯೋಗದ ಭಾಗವಾಗಿರುವ ಗಂಗುಲಿ , ಐದರಿಂದ ಆರು ತಿಂಗಳಲ್ಲಿ ಕಾರ್ಖಾನೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

"ನಾವು ಬಂಗಾಳದಲ್ಲಿ ಮೂರನೇ ಉಕ್ಕಿನ ಸ್ಥಾವರವನ್ನು ನಿರ್ಮಿಸಲು ಆರಂಭಿಸುತ್ತಿರುವ ಕಾರಣ ನಾನು ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಕ್ರೀಡೆಯನ್ನು ಮಾತ್ರ ಆಡಿದ್ದೇನೆ ಎಂದು ನಮ್ಮಲ್ಲಿ ಬಹಳಷ್ಟು ಜನರು ನಂಬುತ್ತಾರೆ. ಆದರೆ ನಾವು 2007 ರಲ್ಲಿ ಸಣ್ಣ ಉಕ್ಕಿನ ಕಾರ್ಖಾನೆಯನ್ನು ಆರಂಭಿಸಿದ್ದೇವೆ ಮತ್ತು ಐದರಿಂದ ಆರು ತಿಂಗಳ ನಂತರ ನಾವು ಮೇದಿನಿಪುರದಲ್ಲಿ ನಮ್ಮ ಹೊಸ ಉಕ್ಕಿನ ಸ್ಥಾವರ ನಿರ್ಮಾಣ ಆರಂಭಿಸುತ್ತೇವೆ" ಎಂದು ಗಂಗುಲಿ ಹೇಳಿದರು.

ಗುರುವಾರ ಮ್ಯಾಡ್ರಿಡ್ ನಲ್ಲಿ 'ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆ (ಬಿಜಿಬಿಎಸ್)' ಉದ್ದೇಶಿಸಿ ಮಾತನಾಡಿದ ಗಂಗುಲಿ ಅವರು ಇನ್ನೊಂದು ವರ್ಷದಲ್ಲಿ ಅತ್ಯಾಧುನಿಕ ಸೌಲಭ್ಯವನ್ನು ಪೂರ್ಣಗೊಳಿಸಲಿದ್ದೇವೆ ಎಂದು ಅವರು ಹೇಳಿದರು.

ಸುಮಾರು 50-55 ವರ್ಷಗಳ ಹಿಂದೆ ತಮ್ಮ ಅಜ್ಜ ಆರಂಭಿಸಿದ ಕುಟುಂಬ ವ್ಯವಹಾರವನ್ನು ಉಲ್ಲೇಖಿಸಿದ ಮಾಜಿ ಬಿಸಿಸಿಐ ಅಧ್ಯಕ್ಷ ಗಂಗುಲಿ, "ಪಶ್ಚಿಮಬಂಗಾಳ ರಾಜ್ಯವು ವ್ಯಾಪಾರಕ್ಕಾಗಿ ಪ್ರಪಂಚದ ಇತರರನ್ನು ಯಾವಾಗಲೂ ಆಹ್ವಾನಿಸುತ್ತದೆ. ಅದಕ್ಕಾಗಿಯೇ ಇಂದು ಸಿಎಂ ಈ ದೇಶದಲ್ಲಿದ್ದಾರೆ. ಸರಕಾರವು ರಾಜ್ಯ ಮತ್ತು ಯುವಜನರ ಅಭಿವೃದ್ಧಿಗೆ ಕೆಲಸ ಮಾಡಲು ಬಯಸುತ್ತದೆ ಎಂಬುದು ಸ್ಪಷ್ಟವಾಗಿದೆ" ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News