ಬಿಜೆಪಿ, ಆರೆಸ್ಸೆಸ್ ವಿರುದ್ಧ ಹೇಳಿಕೆ: ಅಸ್ಸಾಂನಲ್ಲಿ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್

ಗುವಾಹತಿ: ಬಿಜೆಪಿ ಹಾಗೂ ಆರೆಸ್ಸೆಸ್ ದೇಶದ ಪ್ರತಿಯೊಂದು ಸಂಘ ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿದೆ ಎಂಬ ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಅಸ್ಸಾಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಗುವಾಹತಿಯ ಪಾನ್ ಬಜಾರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ರಾಹುಲ್ ಅವರ ಹೇಳಿಕೆ ದೇಶದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯ ತರವಂಥದ್ದು ಎಂದು ಆಪಾದಿಸಲಾಗಿದೆ. ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 152 ಮತ್ತು 197(1)ಡಿ ಅನ್ವಯ ಇದು ಜಾಮೀನು ರಹಿತ ಅಪರಾಧವಾಗಿದೆ.
ಜನವರಿ 15ರಂದು ಕಾಂಗ್ರೆಸ್ ಪಕ್ಷದ ಹೊಸ ಕಚೇರಿಯನ್ನು ದೆಹಲಿಯ ಕೋಟ್ಲಾ ರಸ್ತೆಯಲ್ಲಿ ಉದ್ಘಾಟಿಸುವ ವೇಳೆ ರಾಹುಲ್ ಗಾಂಧಿಯವರು ಸ್ವೀಕಾರಾರ್ಹ ಮುಕ್ತ ವಾಕ್ ಸ್ವಾತಂತ್ರ್ಯದ ಗಡಿಯನ್ನು ಮೀರಿದ್ದಾರೆ ಹಾಗೂ ಸಾರ್ವಜನಿಕ ವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ತರುವ ಮಾತುಗಳನ್ನು ಆಡಿದ್ದಾರೆ ಎನ್ನುವುದು ದೂರುದಾರ ಮಂಜೀತ್ ಚೇಟಿಯಾ ಅವರ ಆರೋಪ.
"ಭಾರತ ಸರ್ಕಾರದ ವಿರುದ್ಧವೇ ಹೋರಾಟವನ್ನು ಘೋಷಿಸುವ ಮೂಲಕ, ಜನತೆಯಲ್ಲಿ ವಿಭಜನಕಾರಿ ಚಟುವಟಿಕೆಗಳು ಮತ್ತು ಬಂಡಾಯಕ್ಕೆ ಕುಮ್ಮಕ್ಕು ನೀಡಿದ್ದಾರೆ. ದೇಶದ ಸರ್ಕಾರದ ಅಧಿಕಾರವನ್ನು ಅನಧಿಕೃತಗೊಳಿಸುವ ಮೂಲಕ ಸರ್ಕಾರವನ್ನು ವಿರೋಧಿ ಪಡೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಅರಾಜಕತೆಗೆ ಮತ್ತು ಪ್ರತ್ಯೇಕತಾವಾದಿ ಭಾವನೆಗಳಿಗೆ ಪ್ರಚೋದನೆ ನೀಡಿದ್ದಾರೆ" ಎಂದು ದೂರುದಾರರು ವಿವರಿಸಿದ್ದಾರೆ.
ಸತತ ಚುನಾವಣಾ ಸೋಲುಗಳ ಹಿನ್ನೆಲೆಯಲ್ಲಿ ಹತಾಶರಾಗಿ ರಾಹುಲ್ ಈ ಹೇಳಿಕೆ ನೀಡಿದ್ದಾಗಿ ಚೇಟಿಯಾ ವಿಶ್ಲೇಷಿಸಿದ್ದಾರೆ.