ದೇಶದ ಜನಸಂಖ್ಯೆಯ ಬೆಳವಣಿಗೆ ದರವನ್ನೂ ಮೀರಿಸಿದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ: ವರದಿ

Update: 2024-08-29 11:27 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ನೂತನ ವರದಿಯೊಂದರ ಪ್ರಕಾರ ಭಾರತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು,ಜನಸಂಖ್ಯಾ ಬೆಳವಣಿಗೆ ದರ ಮತ್ತು ಒಟ್ಟಾರೆ ಆತ್ಮಹತ್ಯೆ ದರವನ್ನು ಮೀರಿಸಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ)ದತ್ತಾಂಶಗಳನ್ನು ಆಧರಿಸಿರುವ ‘ವಿದ್ಯಾರ್ಥಿ ಆತ್ಮಹತ್ಯೆಗಳು:ಭಾರತದಲ್ಲಿ ವ್ಯಾಪಿಸುತ್ತಿರುವ ಸಾಂಕ್ರಾಮಿಕ’ ವರದಿಯನ್ನು ಬುಧವಾರ ವಾರ್ಷಿಕ ಐಸಿ3 ಸಮ್ಮೇಳನ ಮತ್ತು ಎಕ್ಸ್‌ಪೋ 2024ರಲ್ಲಿ ಬಿಡುಗಡೆಗೊಳಿಸಲಾಗಿದೆ.

ಒಟ್ಟಾರೆ ಆತ್ಮಹತ್ಯೆ ಪ್ರಮಾಣ ವಾರ್ಷಿಕ ಶೇ.2ರಷ್ಟು ಹೆಚ್ಚಾಗಿದ್ದರೆ, ಹಲವು ಪ್ರಕರಣಗಳು ವರದಿಯಾಗಿಲ್ಲದಿರುವ ಸಾಧ್ಯತೆಯ ಹೊರತಾಗಿಯೂ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಶೇ.4ರಷ್ಟು ಏರಿಕೆಯಾಗಿದೆ ಎಂದು ವರದಿಯು ಬೆಟ್ಟು ಮಾಡಿದೆ.

ಕಳೆದ ಎರಡು ದಶಕಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಶೇ.4ರಷ್ಟು ಆತಂಕಕಾರಿ ವಾರ್ಷಿಕ ದರದಲ್ಲಿ ಬೆಳೆದಿದ್ದು,ಇದು ರಾಷ್ಟ್ರೀಯ ಸರಾಸರಿಯ ದುಪ್ಪಟ್ಟಾಗಿದೆ. 2022ರಲ್ಲಿ ಒಟ್ಟು ವಿದ್ಯಾರ್ಥಿಗಳ ಆತ್ಮಹತ್ಯೆಗಳಲ್ಲಿ ಪುರುಷ ವಿದ್ಯಾರ್ಥಿಗಳು ಶೇ.53ರಷ್ಟಿದ್ದರು. 2021 ಮತ್ತು 2022ರ ನಡುವೆ ಪುರುಷ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಶೇ.6ರಷ್ಟು ಕಡಿಮೆಯಾಗಿದ್ದರೆ,ಮಹಿಳಾ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಶೇ.7ರಷ್ಟು ಹಚ್ಚಾಗಿದ್ದವು ಎಂದು ಐಸಿ3 ಇನ್‌ಸ್ಟಿಟ್ಯೂಟ್ ಸಂಕಲಿಸಿರುವ ವರದಿಯು ಹೇಳಿದೆ.

ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣವು ಜನಸಂಖ್ಯೆಯ ಬೆಳವಣಿಗೆ ದರಗಳು ಮತ್ತು ಒಟ್ಟಾರೆ ಆತ್ಮಹತ್ಯೆ ಪ್ರವೃತ್ತಿ ಇವೆರಡನ್ನೂ ಮೀರಿಸಿದೆ. ಕಳೆದೊಂದು ದಶಕದಲ್ಲಿ 0-24 ವರ್ಷ ವಯಸ್ಸಿನವರ ಜನಸಂಖ್ಯೆಯು 58.2 ಕೋಟಿಯಿಂದ 58.1 ಕೋಟಿಗೆ ಇಳಿದಿದ್ದರೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ 6,654ರಿಂದ 13,044ಕ್ಕೆ ಏರಿಕೆಯಾಗಿದೆ ಎಂದು ವರದಿಯು ತಿಳಿಸಿದೆ.

ವರದಿಯ ಪ್ರಕಾರ, ಮಹಾರಾಷ್ಟ್ರ,ತಮಿಳುನಾಡು ಮತ್ತು ಮಧ್ಯಪ್ರದೇಶ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರಾಜ್ಯಗಳಾಗಿದ್ದು, ಒಟ್ಟು ರಾಷ್ಟ್ರೀಯ ಪ್ರಮಾಣದಲ್ಲಿ ಮೂರನೇ ಒಂದರಷ್ಟು ಪಾಲನ್ನು ಹೊಂದಿವೆ. ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ.29ರಷ್ಟು ಪಾಲನ್ನು ಹೊಂದಿವೆ.ಇದೇ ವೇಳೆ ಉತ್ತಮ ಶೈಕ್ಷಣಿಕ ವಾತಾವರಣಕ್ಕೆ ಹೆಸರಾಗಿರುವ ರಾಜಸ್ಥಾನವು 10ನೇ ಸ್ಥಾನದಲ್ಲಿದ್ದು, ಇದು ಕೋಟಾದಂತಹ ಕೋಚಿಂಗ್ ಕೇಂದ್ರಗಳೊಂದಿಗೆ ಗುರುತಿಸಿಕೊಂಡಿರುವ ತೀವ್ರ ಒತ್ತಡವನ್ನುಎತ್ತಿ ತೋರಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News