ಅರ್ಕಾವತಿ ನದಿಯಲ್ಲಿ ಅಪಾಯಕಾರಿ ಮಟ್ಟ ಮೀರಿದ ರಾಸಾಯನಿಕಗಳು, ಕೀಟನಾಶಕಗಳು, ಲೋಹಗಳು: ವರದಿ

Update: 2025-01-25 11:38 IST
ಅರ್ಕಾವತಿ ನದಿಯಲ್ಲಿ ಅಪಾಯಕಾರಿ ಮಟ್ಟ ಮೀರಿದ ರಾಸಾಯನಿಕಗಳು, ಕೀಟನಾಶಕಗಳು, ಲೋಹಗಳು: ವರದಿ

ಸಾಂದರ್ಭಿಕ ಚಿತ್ರ (PTI)

  • whatsapp icon

ಬೆಂಗಳೂರು: ಅರ್ಕಾವತಿ ನದಿಯು ಮಲಿನಯುಕ್ತವಾಗಿದ್ದು, ರಾಸಾಯನಿಕಗಳು, ಕೀಟನಾಶಕಗಳು ಮತ್ತು ಭಾರ ಲೋಹಗಳು ನದಿಯಲ್ಲಿ ಅಪಾಯಕಾರಿ ಮಟ್ಟವನ್ನು ಮೀರಿದೆ ಎಂಬುವುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.

‘ಅರ್ಕಾವತಿಯಲ್ಲಿ ಅಡಗಿರುವ ಮಾಲಿನ್ಯಗಳ ಅನ್ವೇಷಣೆ: ಹೊರಬರುತ್ತಿರುವ ಮಾಲಿನ್ಯಕಾರಕಗಳಿಂದ ಬೆಂಗಳೂರು ಮತ್ತು ಅದರಾಚೆಗೆ ಪರಿಣಾಮʼ (Uncovering the Hidden Pollution in the Arkavathi: Emerging Contaminants Impacting Bengaluru and Beyond) ಎಂಬ ಶೀರ್ಷಿಕೆಯ ಪಾನಿ.ಅರ್ಥ್(Paani.Earth) ವರದಿಯನ್ನು ಅರ್ಕಾವತಿ ಮತ್ತು ಅದರ ಉಪನದಿಯಾದ ವೃಷಭಾವತಿಯ ಉದ್ದಕ್ಕೂ 7 ಸ್ಥಳಗಳಿಂದ ಮಾಲಿನ್ಯ ಮಾದರಿಗಳನ್ನು ಸಂಗ್ರಹಿಸಿ ಮೌಲ್ಯಮಾಪನ ಮಾಡಿದ ಬಳಿಕ ಸಿದ್ಧಪಡಿಸಲಾಗಿದೆ. 65 ನೀರಿನ ಮಾದರಿ ಮತ್ತು 20 ಕೆಸರು ಮಾಲಿನ್ಯಯುಕ್ತ ಮಾದರಿಗಳನ್ನು ಪರೀಕ್ಷಿಸಿ ವರದಿಯನ್ನು ತಯಾರಿಸಲಾಗಿದೆ.

ಫೆಬ್ರವರಿ ಮತ್ತು ಮಾರ್ಚ್ 2024ರ ಅವಧಿಯಲ್ಲಿ ಶುದ್ಧ ನೀರಿಗಾಗಿ ಅಂತಾರಾಷ್ಟ್ರೀಯ ಕೇಂದ್ರದ (International Centre for Clean Water) ಸಹಯೋಗದೊಂದಿಗೆ ಈ ಅಧ್ಯಯನವನ್ನು Paani.Earth ನಡೆಸಿದೆ. ಪರೀಕ್ಷಾ ಫಲಿತಾಂಶಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ಶುದ್ಧನೀರು ಮತ್ತು ಕೆಸರು ಮಾಲಿನ್ಯದ ಮಾರ್ಗಸೂಚಿಗಳೊಂದಿಗೆ ಹೋಲಿಕೆ ಮಾಡಲಾಗಿದೆ. ಈ ವೇಳೆ ಅರ್ಕಾವತಿ ನದಿಯಲ್ಲಿ ರಾಸಾಯನಿಕಗಳು, ಕೀಟನಾಶಕಗಳು, ಭಾರ ಲೋಹಗಳು ಮತ್ತು ಅಪಾಯಕಾರಿ ಸಾವಯವ ಸಂಯುಕ್ತಗಳು ಅಪಾಯಕಾರಿ ಮಟ್ಟವನ್ನು ಮೀರಿದೆ ಎಂಬುವುದು ಬಹಿರಂಗವಾಗಿದೆ. ಪ್ರತಿಯೊಂದು ಮಾದರಿಯಲ್ಲೂ ರಾಸಾಯನಿಕಗಳು ಪತ್ತೆಯಾಗಿದ್ದು, ಪರಿಸರ ವ್ಯವಸ್ಥೆ ಮತ್ತು ಮಾನವ ಆರೋಗ್ಯ ಅಪಾಯಗಳನ್ನುಂಟುಮಾಡುತ್ತದೆ ಎಂದು ವರದಿ ಹೇಳಿದೆ.

ಕೀಟನಾಶಕಗಳಿಗೆ ಸಂಬಂಧಿಸಿದಂತೆ, ಹೆಪ್ಟಾಕ್ಲೋರ್ ಮತ್ತು ಡಿಡಿಟಿಯಂತಹ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಾನಿಕಾರಕ ವಸ್ತುಗಳು ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆಯ ಮಾರ್ಗಸೂಚಿಗಳಿಗಿಂತ 25,022 ಪಟ್ಟು ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿವೆ ಎಂದು ವರದಿಯು ಪತ್ತೆ ಹಚ್ಚಿದೆ.

ಭಾರ ಲೋಹಗಳು: ಪಾದರಸದಂತಹ ವಿಷಕಾರಿ ವಸ್ತುಗಳು ಕೆನಡಾದ ಕೆಸರಿನ ಗುಣಮಟ್ಟದ ಮಾರ್ಗಸೂಚಿಗಳಿಗಿಂತ 26 ಪಟ್ಟು ಹೆಚ್ಚಿನ ಮಟ್ಟದಲ್ಲಿ ಅರ್ಕಾವತಿಯಲ್ಲಿನ ಕೆಸರಿನಲ್ಲಿ ಕಂಡುಬಂದಿದೆ.

ಕೈಗಾರಿಕಾ ಮಾಲಿನ್ಯಕಾರಕಗಳು: ಡೈಬೆನ್ಜ್, Dibenz[a,h], ಆಂಥ್ರಾಸೀನ್ (anthracene) ನಂತಹ ಕೈಗಾರಿಕಾ ದಹನದಿಂದ ಉಂಟಾಗುವ ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆಯ ಮಾರ್ಗಸೂಚಿಗಳಿಗಿಂತ 3,076 ಪಟ್ಟು ಹೆಚ್ಚಾಗಿ ಕಂಡುಬಂದಿದೆ.

ರಂಜಕದ ಮಟ್ಟಗಳು ಎಲ್ಲಾ ಸ್ಥಳಗಳಲ್ಲಿ ಹೆಚ್ಚಳವಾಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳನ್ನು ಮೀರಿದ ಈ ಸ್ಥಿತಿಯು ಕ್ಯಾನ್ಸರ್ ಮತ್ತು ಹಾರ್ಮೋನ್ ವ್ಯತ್ಯಾಸಗಳು ಸೇರಿದಂತೆ ಮಾನವ ಮತ್ತು ಜಲಚರಗಳ ಆರೋಗ್ಯಕ್ಕೆ ತೀವ್ರ ಅಪಾಯಗಳನ್ನು ಉಂಟುಮಾಡಬಹುದು ಇದಲ್ಲದೆ ಭಾರ ಲೋಹಗಳು ಜನರ ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ ಎಂದು ವರದಿಯು ತಿಳಿಸಿದೆ.

ಮಾಲಿನ್ಯವು ಅಪಾಯಕಾರಿ ಮಟ್ಟವನ್ನು ಮೀರಲು ಅಸಮರ್ಪಕ ಮೇಲ್ವಿಚಾರಣೆ ಕಾರಣ ಎಂದು ವರದಿಯಲ್ಲಿ ದೂಷಿಸಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನೀರಿನ ಗುಣಮಟ್ಟದ ಮೇಲ್ವಿಚಾರಣಾ ಮಾರ್ಗಸೂಚಿಗಳ ಉಲ್ಲಂಘನೆ, ಮಾಲಿನ್ಯಕಾರಕ ಮೂಲಗಳನ್ನು ಗುರುತಿಸಿ ಪರಿಹಾರ ಕಂಡು ಕೊಳ್ಳುವಲ್ಲಿ ವಿಫಲವಾಗಿರುವುದನ್ನು ವರದಿಯು ಬಹಿರಂಗಪಡಿಸಿದೆ.

ಆದಲ್ಲದೆ ರಾಷ್ಟ್ರೀಯ ನೀರಿನ ಗುಣಮಟ್ಟ ಮೇಲ್ವಿಚಾರಣಾ ಕಾರ್ಯಕ್ರಮದ(NWMP) ಅಡಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೇಲ್ವಿಚಾರಣಾ ಕಾರ್ಯಕ್ರಮವು ವಿಫಲವಾಗಿದೆ, ನದಿಯಿಂದ ಹೊರಹೊಮ್ಮುವ ಮಾಲಿನ್ಯಕಾರಕಗಳ ಮಟ್ಟವನ್ನು ಪತ್ತೆ ಹಚ್ಚುವಲ್ಲಿ ವೈಫಲ್ಯತೆ ಕಂಡು ಬಂದಿದೆ ಎಂದು ವರದಿಯು ಹೇಳಿದೆ.

ಕೃಪೆ: thehindu.com

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News