ಸಂಜಯ್ ಗಾಂಧಿ ಸಾವಿನಲ್ಲಿ ರಷ್ಯಾ ಕೈವಾಡ : ಸುಬ್ರಮಣಿಯನ್ ಸ್ವಾಮಿ ಆರೋಪ

Update: 2024-09-06 13:05 GMT

ಸುಬ್ರಮಣಿಯನ್ ಸ್ವಾಮಿ | PC : PTI 

ಹೊಸದಿಲ್ಲಿ : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ ಸಹಜ ಅಪಘಾತದಲ್ಲಿ ಮೃತಪಡಲಿಲ್ಲ, ಬದಲಿಗೆ ರಷ್ಯಾ ಅವರನ್ನು ಹತ್ಯೆಗೈದಿತು ಎಂಬ ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೊಸ ವಿವಾದಕ್ಕೆ ಕಿಡಿ ಹಚ್ಚಿದ್ದಾರೆ. ಆಜ್ ತಕ್ ಮಾಜಿ ನಿರೂಪಕ ಶುಭಂಕರ್ ಮಿಶ್ರಾ ಅವರು ಅನ್‌ಪ್ಲಗ್ಡ್ ಶುಭಂಕರ್ ಪಾಡ್ ಕಾಸ್ಟ್‌ ಗಾಗಿ ನಡೆಸಿರುವ ಸಂದರ್ಶನದ ನೇರ ಪ್ರಸಾರದಲ್ಲಿ ಸುಬ್ರಮಣಿಯನ್ ಸ್ವಾಮಿ ಈ ಆರೋಪ ಮಾಡಿದ್ದಾರೆ.

ತಮ್ಮ ವಿವಾದಾತ್ಮಕ ಮಾತುಗಳಿಗೆ ಕುಖ್ಯಾತರಾಗಿರುವ ಸುಬ್ರಮಣಿಯನ್ ಸ್ವಾಮಿ ಅವರು ಸಂಜಯ್ ಸಿಂಗ್ ಅವರ ಸಹೋದರ ರಾಜೀವ್ ಗಾಂಧಿಯವರೊಂದಿಗಿನ ತಮ್ಮ ಸ್ನೇಹವನ್ನು ಮೆಲುಕು ಹಾಕುವಾಗ ಈ ಆರೋಪವನ್ನು ಮಾಡಿದ್ದಾರೆ. ಸಂಜಯ್ ಗಾಂಧಿಯವರ ಅಕಾಲಿಕ ನಿಧನದ ನಂತರ, 1980ರಲ್ಲಿ ರಾಜಕೀಯವನ್ನು ಪ್ರವೇಶಿಸಿದ್ದ ರಾಜೀವ್ ಗಾಂಧಿ, ತಮ್ಮ ತಾಯಿ ಇಂದಿರಾ ಗಾಂಧಿ ಹತ್ಯೆಯ ನಂತರ ದೇಶದ ಪ್ರಧಾನಿಯಾಗಿದ್ದರು.

ಜನರು ವ್ಯಾಪಕವಾಗಿ ನಂಬಿಕೊಂಡಿರುವಂತೆ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಮೃತಪಡಲಿಲ್ಲ, ಬದಲಿಗೆ ರಷ್ಯಾ ಉದ್ದೇಶಪೂರ್ವಕವಾಗಿ ನಡೆಸಿದ್ದ ಕೃತ್ಯವಾಗಿತ್ತು ಎಂದು ಪಾಡ್ ಕಾಸ್ಟ್ ಸಂದರ್ಭದಲ್ಲಿ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. ಸಂಜಯ್ ಗಾಂಧಿ ಭಾರತವನ್ನು ಅಮೆರಿಕಾಗೆ ಹತ್ತಿರವಾಗಿಸುವ ಒಲವು ಹೊಂದಿದ್ದರಿಂದ, ರಷ್ಯಾ ಅವರನ್ನು ತನ್ನ ಪಾಲಿಗೆ ಬೆದರಿಕೆ ಎಂದು ಭಾವಿಸಿತ್ತು. ಹೀಗಾಗಿ ರಷ್ಯಾ ಅವರನ್ನು ಹತ್ಯೆಗೈದಿತು. ಅವರು ಭಾರತವನ್ನು ಅಮೆರಿಕಾಗೆ ನಿಕಟವಾಗಿಸಬಹುದು ಎಂದು ಭಯಗೊಂಡಿದ್ದರು. ಈ ಮಾತಿಗೆ ಸಾಕಷ್ಟು ಪುರಾವೆಗಳಿವೆ" ಎಂದು ಅವರು ಪ್ರತಿಪಾದಿಸಿದ್ದಾರೆ.

ನಾನು ನನ್ನ ಸಂಶಯದ ಕುರಿತು ಇಂದಿರಾಗಾಂಧಿ ಅವರಲ್ಲೂ ಮಾತನಾಡಿದ್ದೆ. ಆದರೆ, ಅದಕ್ಕೆ ನಿರುತ್ಸಾಹದ ಉತ್ತರ ನೀಡಿದ್ದ ಅವರು, ಅದರಿಂದ ಪ್ರಯೋಜನವೇನು? ಆತ ಮರಳಿ ಬರಲಾರ ಎಂದು ಹೇಳಿದ್ದರು ಎಂದೂ ಸ್ವಾಮಿ ಹೇಳಿದ್ದಾರೆ. ಸಂಜಯ್ ಗಾಂಧಿ ಸಾವಿನಲ್ಲಿ ಯಾರದೋ ಕೈವಾಡವಿದೆ ಎಂದು ಇಂದಿರಾ ಗಾಂಧಿ ಕೂಡಾ ಶಂಕಿಸಿದರೂ, ಈ ವಿಷಯವನ್ನು ಮತ್ತಷ್ಟು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ನಿಲುವಿಗೆ ತಲುಪಿದ್ದರು ಎಂದು ಅವರು ಹೇಳಿದ್ದಾರೆ.

ಸಂಜಯ್ ಗಾಂಧಿ ಅಪಘಾತವನ್ನು ಸುದೀರ್ಘ ಕಾಲದಿಂದ ದುರಂತಮಯ ಘಟನೆ ಎಂದೇ ಭಾವಿಸಲಾಗಿದ್ದು, ಅವರ ಮೃತ್ಯುವಿನ ಕುರಿತು ಇಂದಿಗೂ ನಾನಾ ಊಹಾಪೋಹಗಳು ಹರಿದಾಡುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News