“ನಾಗರಿಕ ಸಮಾಜದಲ್ಲಿ ಇಂತಹ ಘಟನೆ ನಡೆಯಬಾರದು”: ವಿಧವೆಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್
ಚೆನ್ನೈ: ವಿಧವೆಯೊಬ್ಬರಿಗೆ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದ ಘಟನೆ ಬಗ್ಗೆ ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್ ಕಾನೂನು ಪಾಲಿಸಬೇಕಾದ ನಾಗರಿಕ ಸಮಾಜದಲ್ಲಿ ಇಂತಹ ಘಟನೆ ನಡೆಯಬಾರದು, ಮಹಿಳೆಯೊಬ್ಬಳಿಗೆ ತನ್ನದೇ ಆದ ಅಸ್ಮಿತೆಯಿದೆ ಎಂದು ಹೇಳಿದೆ.
ಆದರೂ ವಿಧವೆಯೊಬ್ಬರು ದೇವಸ್ಥಾನ ಪ್ರವೇಶಿಸಿದರೆ ಅದರ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ನಂಬಿಕೆಯು ದುರಾದೃಷ್ಟಕರ ಎಂದು ಹೈಕೋರ್ಟ್ ನ್ಯಾಯಾಧೀಶ ಎನ್ ಆನಂದ್ ವೆಂಕಟೇಶ್ ಹೇಳಿದರು.
ಇರೋಡ್ ಜಿಲ್ಲೆಯ ನಂಬಿಯೂರ್ ತಾಲೂಕಿನ ಪೆರಿಯಕರು ಪಾರಾಯಣ ದೇವಸ್ಥಾನಕ್ಕೆ ತನಗೆ ಮತ್ತು ತನ್ನ ಮಗನಿಗೆ ಪ್ರವೇಶಿಸಲು ರಕ್ಷಣೆಯೊದಗಿಸುವಂತೆ ಪೊಲೀಸರಿಗೆ ಸೂಚಿಸಬೇಕೆಂದು ಕೋರಿ ತಂಗಮಣಿ ಎಂಬ ಮಹಿಳೆ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರು ಮೇಲಿನಂತೆ ಹೇಳಿದರು.
ಆಗಸ್ಟ್ 9ರಂದು ದೇವಸ್ಥಾನದಲ್ಲಿ ನಡೆಯಲಿರುವ ಜಾತ್ರೆಯಲ್ಲಿ ಭಾಗವಹಿಸಬೇಕೆಂಬುದು ಮಹಿಳೆಯ ಇಚ್ಚೆಯಾದುದರಿಂದ ಆಕೆ ಕಳೆದ ತಿಂಗಳು ಅರ್ಜಿ ಸಲ್ಲಿಸಿದ್ದರು.
ಮಹಿಳೆಯ ಮೃತ ಪತಿ ಇದೇ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಮಹಿಳೆ ಮತ್ತಾಕೆಯ ಮಗ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯಲ್ಲಿ ಭಾಗವಹಿಸಬೇಕೆಂದಿದ್ದರೂ ಅಯ್ಯವು ಮತ್ತು ಮುರಳಿ ಎಂಬ ಹೆಸರಿನ ಇಬ್ಬರು ಆಕೆ ವಿಧವೆಯಾಗಿದ್ದರಿಂದ ದೇವಸ್ಥಾನ ಪ್ರವೇಶಿಸಬಾರದೆಂದು ಬೆದರಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ಕೋರಿ ಆಕೆ ಸ್ಥಳೀಯಾಡಳಿತವನ್ನು ಕೋರಿದ್ದರೂ ಯಾವುದೇ ಪ್ರತಿಕ್ರಿಯೆ ಇಲ್ಲದ ಹಿನ್ನೆಲೆಯಲ್ಲಿ ಹೈಕೋರ್ಟ್ ಕದ ತಟ್ಟಿದ್ದರು.
ಆಕೆ ದೇವಸ್ಥಾನ ಪ್ರವೇಶಿಸುವುದರಿಂದ ಯಾರಿಗೂ ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತಲ್ಲದೆ ಈ ಕುರಿತಂತೆ ಆರೋಪಿಗಳಿಬ್ಬರಿಗೆ ಪೊಲೀಸರು ತಿಳಿಸಬೇಕೆಂದು ಸಿರುವಲೂರ್ ಠಾಣೆಯ ಇನ್‌ಸ್ಪೆಕ್ಟರ್‌ಗೆ ಕೋರ್ಟ್ ನಿರ್ದೇಶನ ನೀಡಿದೆ.