ಚಂದ್ರಯಾನ-3ಗೆ ಮುಸ್ಲಿಮರು ಕಲ್ಲೆಸೆಯುತ್ತಿರುವಂತೆ ತೋರಿಸುವ ಕಾರ್ಟೂನ್ ಹಂಚಿದ ಸುದರ್ಶನ್ ಟಿವಿ ಸಂಪಾದಕ
ಹೊಸದಿಲ್ಲಿ: ಕೋಮು ಧ್ರುವೀಕರಣ ಕಾರ್ಯಕ್ರಮಗಳಿಗೆ ಕುಖ್ಯಾತಿ ಪಡೆದಿರುವ ಮಾಧ್ಯಮ ಸಂಸ್ಥೆ ಸುದರ್ಶನ್ ನ್ಯೂಸ್‌ನ ಸಂಪಾದಕ ಸುರೇಶ್ ಚವ್ಹಾಂಕೆ ಟ್ವಿಟರ್ ನಲ್ಲಿ ಮಾಡಿರುವ ಪೋಸ್ಟ್ ಒಂದು ವಿವಾದಕ್ಕೆ ಕಾರಣವಾಗಿದೆ.
ಇಸ್ರೋ ಚಂದ್ರಯಾನ-3 ಮೇಲೆ ಮುಸ್ಲಿಮರು ಕಲ್ಲೆಸೆಯುತ್ತಿರುವಂತೆ ತೋರಿಸುವ ಪ್ರಚೋದನಕಾರಿಯಾದ ಕಾರ್ಟೂನ್ ಅನ್ನು ಹಂಚಿಕೊಂಡಿದ್ದಾರೆ.
ಕುರ್ತಾ ಪೈಜಾಮಗಳನ್ನು ಧರಿಸಿರುವ ಮತ್ತು ಮುಸ್ಲಿಮರ ಸಾಂಪ್ರದಾಯಿಕ ಟೋಪಿಗಳನ್ನು ಧರಿಸಿರುವ, ಗಡ್ಡಧಾರಿ ವ್ಯಕ್ತಿಗಳು ಚಂದ್ರಯಾನ-3ರ ಲ್ಯಾಂಡರ್ ಮೇಲೆ ಕಲ್ಲೆಸೆಯುವಂತೆ ಚಿತ್ರಿಸಲಾಗಿರುವ ಕಾರ್ಟೂನ್ ಇದಾಗಿದ್ದು, ಕಾರ್ಟೂನ್‌ನಲ್ಲಿ “ಚಾಂದ್ ಕಿ ಜಮೀನ್ ವಕ್ಫ್ ಕಿ ಮಿಲ್ಕಿಯಾತ್ ಹೈ," (ಚಂದ್ರನ ಭೂಮಿ ವಕ್ಫ್‌ಗೆ ಸೇರಿದ್ದು) ಎಂದು ಬರೆಯಲಾಗಿದೆ.
ಇದು ಮುಸ್ಲಿಮರನ್ನು ಅವಹೇಳನ ಮಾಡುವಂತಹ ಕಾರ್ಟೂನ್ ಎಂದು ಹಲವರು ನೆಟ್ಟಿಗರು ಅವರ ಟ್ವೀಟ್‌ಗೆ ಆಕ್ಷೇಪ ಎತ್ತಿದ್ದಾರೆ.
ಚವ್ಹಾಂಕೆ ಈ ಹಿಂದೆಯೂ ಕೂಡಾ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಂಚಿ ಕಾನೂನು ಕ್ರಮವನ್ನು ಎದುರಿಸಿದ್ದರು. ಪ್ರಚೋದನಕಾರಿ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಕ್ಕಾಗಿ ಗುರುಗ್ರಾಮ್ ಪೋಲೀಸ್‌ನ ಸೈಬರ್ ಕ್ರೈಮ್ ಘಟಕವು ಆಗಸ್ಟ್ 11 ರಂದು ಅವರನ್ನು ಬಂಧಿಸಿತ್ತು.