ಮಣಿಪುರ ಲೈಂಗಿಕ ದೌರ್ಜನ್ಯದ ಸಂತ್ರಸ್ತರ ಹೇಳಿಕೆ ಸದ್ಯಕ್ಕೆ ತೆಗೆದುಕೊಳ್ಳದಂತೆ ಸಿಬಿಐಗೆ ಸುಪ್ರೀಂಕೋರ್ಟ್ ನಿರ್ದೇಶನ
ಹೊಸದಿಲ್ಲಿ: ಮಣಿಪುರ ಹಿಂಸಾಚಾರದ ವೇಳೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳಾ ಸಂತ್ರಸ್ತರ ಹೇಳಿಕೆಯನ್ನು ಸದ್ಯಕ್ಕೆ ತೆಗೆದುಕೊಳ್ಳದಂತೆ ಸಿಬಿಐಗೆ ಸುಪ್ರೀಂಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಸಿಬಿಐ ತನಿಖೆಯನ್ನು ವಿರೋಧಿಸಿ ಹಾಗೂ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಎಸ್ಐಟಿ ತನಿಖೆಗೆ ಕೋರಿ ಸಂತ್ರಸ್ತರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ಇಂದು ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಡೆಸಲಿದೆ.
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿರುವ ವಿಡಿಯೋ ಕುರಿತು ಇಂದು ಹೇಳಿಕೆಗಳನ್ನು ದಾಖಲಿಸಿಕೊಳ್ಳದಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ..
ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನೇತೃತ್ವದ ಪೀಠ ಮುಂದೆ ಮಹಿಳೆಯರ ಪರ ವಾದ ಮಂಡಿಸಿದ ವಕೀಲ ನಿಝಾಮ್ ಪಾಷಾ ಅವರು ಇಂದು ತನ್ನ ಮುಂದೆ ಬಂದು ಹೇಳಿಕೆ ನೀಡುವಂತೆ ಸಿಬಿಐ ಸಂತ್ರಸ್ತ ಮಹಿಳೆಯರನ್ನು ಕೇಳಿದೆ ಎಂದು ಹೇಳಿದರು.
ಕೇಂದ್ರ ಮತ್ತು ಮಣಿಪುರ ಸರಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದರು.
“ಅವರನ್ನು (ಸಿಬಿಐ ಅಧಿಕಾರಿಗಳು) ಕಾಯಲು ಹೇಳಿ. ನಾವು ಇಂದು ಮಧ್ಯಾಹ್ನ 2 ಗಂಟೆಗೆ ಅರ್ಜಿಯನ್ನು ತೆಗೆದುಕೊಳ್ಳಲಿದ್ದೇವೆ, ”ಎಂದು ನ್ಯಾಯಮೂರ್ತಿಗಳಾದ .ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.