ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
► ಮಾರ್ಚ್ 13ರಂದು ಎಲ್ಲಾ ವಿವರಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ
ಹೊಸದಿಲ್ಲಿ : ಚುನಾವಣಾ ಬಾಂಡ್ ಅಸಾಂವಿಧಾನಿಕವಾಗಿದೆ ಎಂದು ಗುರುವಾರ ಬಣ್ಣಿಸಿರುವ ಸುಪ್ರೀಂ ಕೋರ್ಟ್, ಯೋಜನೆಯನ್ನು ರದ್ದುಗೊಳಿಸಿದೆ. ಈ ಯೋಜನೆಯು ಮಾಹಿತಿ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸರ್ವೋಚ್ಛ ನ್ಯಾಯಾಲಯವು, ಇದು ದೇಣಿಗೆದಾರರು ಮತ್ತು ರಾಜಕೀಯ ಪಕ್ಷಗಳ ನಡುವೆ ಒಳ ಒಪ್ಪಂದಕ್ಕೆ ಅವಕಾಶ ಮಾಡಿಕೊಡಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಹದಿನೈದು ದಿನಗಳ ವಾಯಿದೆ ಮುಕ್ತಾಯಗೊಳ್ಳದ ಮತ್ತು ರಾಜಕೀಯ ಪಕ್ಷಗಳಿಂದ ನಗದೀಕರಣಗೊಳ್ಳದ ಚುನಾವಣಾ ಬಾಂಡ್ ಗಳನ್ನು ಅವುಗಳನ್ನು ಖರೀದಿಸಿದವರಿಗೆ ಮರಳಿಸಬೇಕು ಎಂಬುದಾಗಿಯೂ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಚುನಾವಣಾ ಬಾಂಡ್ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವೊಂದು ಈ ಸರ್ವಾನುಮತದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಸದಸ್ಯರೂ ಆಗಿರುವ ನ್ಯಾಯಪೀಠವು ಎರಡು ಪ್ರತ್ಯೇಕ, ಆದರೆ ಸರ್ವಾನುಮತದ ತೀರ್ಪುಗಳನ್ನು ನೀಡಿದೆ.
ಅದೇ ವೇಳೆ, ಚುನಾವಣಾ ಬಾಂಡ್ ಗಳನ್ನು ನೀಡುವುದನ್ನು ತಕ್ಷಣ ನಿಲ್ಲಿಸುವಂತೆ ನ್ಯಾಯಾಲಯವು ಭಾರತೀಯ ಸ್ಟೇಟ್ ಬ್ಯಾಂಕ್ ಗೆ ನಿರ್ದೇಶನವನ್ನೂ ನೀಡಿದೆ. ಅಷ್ಟೇ ಅಲ್ಲದೆ, 2019 ಎಪ್ರಿಲ್ 12ರಿಂದ ಚುನಾವಣಾ ಬಾಂಡ್ ಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆಯೂ ಅದು ಬ್ಯಾಂಕ್ ಗೆ ಸೂಚಿಸಿದೆ.
ಈ ವಿವರಗಳನ್ನು ಮಾರ್ಚ್ 13ರಂದು ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯವು ನಿರ್ದೇಶನ ನೀಡಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ಗೆ ನೀಡುವ ವಿವರಗಳಲ್ಲಿ, ಪ್ರತಿ ಚುನಾವಣಾ ಬಾಂಡ್ ಖರೀದಿಯಾದ ದಿನಾಂಕ, ಖರೀದಿದಾರರ ಹೆಸರು ಮತ್ತು ಅವರು ಖರೀದಿಸಿದ ಬಾಂಡ್ ನ ಮುಖಬೆಲೆ ಹಾಗೂ ಅವುಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ಹೆಸರುಗಳು ಒಳಗೊಂಡಿರಬೇಕು ಎಂದು ನ್ಯಾಯಾಲಯ ಹೇಳಿದೆ.
ರಾಜಕೀಯ ದೇಣಿಗೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರುವುದಕ್ಕಾಗಿ ಹಾಗೂ ಕಪ್ಪುಹಣ ಸೃಷ್ಟಿಯಾಗುವುದನ್ನು ತಪ್ಪಿಸುವುದಕ್ಕಾಗಿ ತಾನು ಚುನಾವಣಾ ಬಾಂಡ್ ಗಳನ್ನು ತರುತ್ತಿರುವುದಾಗಿ 2018ರಲ್ಲಿ ಅದನ್ನು ಪರಿಚಯಿಸಿದ ವೇಳೆ ಕೇಂದ್ರ ಸರಕಾರ ಹೇಳಿತ್ತು.
ಆದರೆ, ಚುನಾವಣಾ ಬಾಂಡ್ ಗಳ ಯೋಜನೆಯು ಕಪ್ಪುಹಣವನ್ನು ನಿಗ್ರಹಿಸಿವು ಏಕೈಕ ವಿಧಾನವಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.
‘‘ಕಪ್ಪುಹಣವನ್ನು ನಿಗ್ರಹಿಸುವ ಉದ್ದೇಶಕ್ಕಾಗಿ ಮಾಹಿತಿ ಹಕ್ಕಿನ ಮೇಲೆ ನಡೆಯುವ ಅತಿಕ್ರಮಣವನ್ನು ಸಮರ್ಥಿಸಲು ಸಾಧ್ಯವಿಲ್ಲ’’ ಎಂದು ಸುಪ್ರೀಂ ಕೋರ್ಟ್ ನ ಆದೇಶ ತಿಳಿಸಿದೆ.
‘‘ರಾಜಕೀಯ ಪಕ್ಷಗಳಿಗೆ ಆರ್ಥಿಕ ದೇಣಿಗೆಗಳನ್ನು ಎರಡು ಕಾರಣಗಳಿಗಾಗಿ ನೀಡಲಾಗುತ್ತದೆ. ತನ್ನ ನೆಚ್ಚಿನ ರಾಜಕೀಯ ಪಕ್ಷವನ್ನು ಬೆಂಬಲಿಸುವುದಕ್ಕಾಗಿ ಅಥವಾ ರಾಜಕೀಯ ಪಕ್ಷಗಳಿಂದ ನಿರ್ದಿಷ್ಟ ಪ್ರಯೋಜನವನ್ನು ಪಡೆದುಕೊಳ್ಳುವುದ್ಕಕ್ಕಾಗಿ’’ ಎಂದು ನ್ಯಾಯಾಲಯ ಹೇಳಿತು.
ಚುನಾವಣಾ ಬಾಂಡ್ ಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನಡೆಸಿತ್ತು.
ಚುನಾವಣಾ ಬಾಂಡ್ ಯೋಜನೆಯ ಮೂಲಕ ರಾಜಕೀಯ ಪಕ್ಷಗಳಿಗೆ ನೀಡುವ ಅನಾಮಧೇಯ ದೇಣಿಗೆಗಳು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತದೆ ಹಾಗೂ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಮಾನ ಸ್ಪರ್ಧೆ ನಡೆಯದಂತೆ ತಡೆಯುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ರಾಜಕೀಯ ಪಕ್ಷಗಳು ಸ್ವೀಕರಿಸುವ ನಿಧಿಗಳ ಮೂಲಗಳನ್ನು ತಿಳಿಯುವ ಹಕ್ಕು ನಾಗರಿಕರಿಗೆ ಇಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರಕಾರ ವಾದಿಸಿತ್ತು.
ಚುನಾವಣಾ ಬಾಂಡ್ ಗಳೆಂದರೇನು?
ಚುನಾವಣಾ ಬಾಂಡ್ ಗಳೆಂದರೆ ನಾಗರಿಕರು ಮತ್ತು ಕಾರ್ಪೊರೇಟ್ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಳಸಬಹುದಾದ ಬಾಂಡ್ ಗಳು. ಇವುಗಳನ್ನು ನಾಗರಿಕರು ಮತ್ತು ಕಂಪೆನಿಗಳು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ)ನ ಶಾಖೆಗಳಿಂದ ಖರೀದಿಸಿ ತಮಗೆ ಬೇಕಾದ ಪಕ್ಷಗಳಿಗೆ ನೀಡಬಹುದಾಗಿದೆ. ಹೀಗೆ ಸ್ವೀಕರಿಸುವ ಬಾಂಡ್ ಗಳನ್ನು ರಾಜಕೀಯ ಪಕ್ಷಗಳು ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಳಿಗೆ ನೀಡಿ ನಗದೀಕರಿಸಬಹುದಾಗಿದೆ.
ಈ ಯೋಜನೆಯನ್ನು ಕೇಂದ್ರದ ಭಾರತೀಯ ಜನತಾ ಪಕ್ಷ ಸರಕಾರವು 2018 ಜನವರಿಯಲ್ಲಿ ಪರಿಚಯಿಸಿತ್ತು.
ಚುನಾವಣಾ ಬಾಂಡ್ ಗಳ ಖರೀದಿ ಮತ್ತು ನಗದೀಕರಣಗಳ ಇಡೀ ಪ್ರಕ್ರಿಯೆಯು ಅನಾಮಧೇಯವಾಗಿ ನಡೆಯುತ್ತದೆ. ಈ ಬಡ್ಡಿರಹಿತ ಬಾಂಡ್ ಗಳನ್ನು ಖರೀದಿಸಿದ್ದೇವೆ ಎನ್ನುವುದನ್ನು ಖರೀದಿದಾರರು ಘೋಷಿಸಬೇಕಾಗಿಲ್ಲ ಮತ್ತು ರಾಜಕೀಯ ಪಕ್ಷಗಳು ತಮ್ಮ ಹಣದ ಮೂಲವನ್ನೂ ತೋರಿಸಬೇಕಾಗಿಲ್ಲ. ಚುನಾವಣಾ ಬಾಂಡ್ ಗಳ ಮೂಲಕ ಸ್ವೀಕರಿಸಲಾಗಿರುವ ಒಟ್ಟು ಮೊತ್ತವನ್ನಷ್ಟೇ ಲೆಕ್ಕ ಪರಿಶೋಧನೆಗೆ ಒಳಗಾದ ಬ್ಯಾಂಕ್ ಹೇಳಿಕೆಗಳ ಮೂಲಕ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಬಹಿರಂಗಪಡಿಸಿದರೆ ಸಾಕಾಗುತ್ತದೆ.
ಆದರೆ, ಚುನಾವಣಾ ಬಾಂಡ್ ಗಳ ದೇಣಿಗೆದಾರರ ವಿವರಗಳನ್ನು ಕೇಂದ್ರ ಸರಕಾರ ಪಡೆಯಬಹುದಾಗಿದೆ. ಯಾಕೆಂದರೆ, ಭಾರತೀಯ ಸ್ಟೇಟ್ ಬ್ಯಾಂಕ್ ಅದರ ಒಡೆತನಕ್ಕೆ ಒಳಪಟ್ಟಿದೆ.
ಸುಪ್ರೀಂ ಕೋರ್ಟ್ ನ 3 ಮುಖ್ಯ ನಿರ್ದೇಶನಗಳು
ಗುರುವಾರ ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಮೂರು ಮುಖ್ಯ ನಿರ್ದೇಶನಗಳನ್ನು ನೀಡಿದೆ.
► ಹದಿನೈದು ದಿನಗಳ ವಾಯಿದೆ ಮುಕ್ತಾಯಗೊಳ್ಳದ ಮತ್ತು ರಾಜಕೀಯ ಪಕ್ಷಗಳಿಂದ ನಗದೀಕರಣಗೊಳ್ಳದ ಚುನಾವಣಾ ಬಾಂಡ್ ಗಳನ್ನು ಅವುಗಳನ್ನು ಖರೀದಿಸಿದವರಿಗೆ ಮರಳಿಸಬೇಕು.
► ಚುನಾವಣಾ ಬಾಂಡ್ ಗಳ ವಿತರಣೆಯನ್ನು ತಕ್ಷಣ ನಿಲ್ಲಿಸುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಸೂಚನೆ.
► 2019 ಎಪ್ರಿಲ್ 12ರಿಂದ ಚುನಾವಣಾ ಬಾಂಡ್ ಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳು, ದೇಣಿಗೆಗಳನ್ನು ನೀಡಿದವರು ಮತ್ತು ದೇಣಿಯ ಮೊತ್ತವನ್ನೊಳಗೊಂಡ ವಿವರಗಳನ್ನು ಮಾರ್ಚ್ 13ರಂದು ವೆಬ್ ಸೈಟ್ ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ.
ಬಾಂಡ್ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿದ್ದ ಎಡಿಆರ್, ಜಯಾ ಠಾಕೂರ್, ಸಿಪಿಎಮ್, ಕಾಮನ್ ಕಾಸ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಜಾರಿಗೆ ತಂದಿರುವ ಚುನಾವಣಾ ಬಾಂಡ್ ಗಳ ಯೋಜನೆಯನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಅರ್ಜಿದಾರರ ಪೈಕಿ ಒಂದಾಗಿರುವ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಗುರುವಾರ ಹರ್ಷ ವ್ಯಕ್ತಪಡಿಸಿದೆ.
ಚುನಾವಣಾ ಬಾಂಡ್ ಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಎಡಿಆರ್, ಕಾಂಗ್ರೆಸ್ ನಾಯಕಿ ಜಯಾ ಠಾಕೂರ್, ಸಿಪಿಎಮ್ ಮತ್ತು ಕಾಮನ್ ಕಾಸ್ ಸುಪ್ರೀಂ ಕೋರ್ಟ್ ಗೆ ಹೋಗಿದ್ದರು.
‘‘ಚುನಾವಣಾ ಬಾಂಡ್ ಗಳನ್ನು ಪರಿಚಯಿಸುವ ಮೊದಲು ಇದ್ದ ಚುನಾವಣಾ ವ್ಯವಸ್ಥೆಯೇನೂ ಉತ್ತಮವಾಗಿರಲಿಲ್ಲ. ಆದರೆ, ಚುನಾವಣಾ ಬಾಂಡ್ ಗಳ ಮೂಲಕ ಅದನ್ನು ಹದಗೆಡಿಸಲಾಗಿದೆ. ಚುನಾವಣಾ ವ್ಯವಸ್ಥೆಯಲ್ಲಿ ಹಲವಾರು ಲೋಪಗಳಿವೆ. ಅವುಗಳು ಇನ್ನೂ ಪರಿಹಾರಗೊಂಡಿಲ್ಲ’’ ಎಂದು ಎಡಿಆರ್ ಸಹ ಸಂಸ್ಥಾಪಕ ಜಗದೀಪ್ ಎಸ್. ಛೋಕರ್ ಹೇಳಿದರು.
‘‘ಚುನಾವಣಾ ಬಾಂಡ್ ಗಳು ಚುನಾವಣಾ ನಿಧಿ ವ್ಯವಸ್ಥೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಅಪಾರದರ್ಶಕಗೊಳಿಸಿವೆ. ನಷ್ಟದಲ್ಲಿರುವ ಕಂಪೆನಿಗಳು ಸೇರಿದಂತೆ ಕಂಪೆನಿಗಳು ಅನಾಮಧೇಯವಾಗಿ ದೇಣಿಗೆಗಳನ್ನು ನೀಡಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ಹಣದ ಪ್ರವಾಹವು ಚುನಾವಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ’’ ಎಂದು ಅವರು ಹೇಳಿದ್ದಾರೆ.
ಬಾಂಡ್ ಗಳ ಮೂಲಕ 6,565 ಕೋಟಿ ರೂ. ಪಡೆದ ಬಿಜೆಪಿ
► ಕಾಂಗ್ರೆಸ್ ಪಡೆದದ್ದು ಕೇವಲ 1,123 ಕೋಟಿ ರೂ.
ಚುನಾವಣಾ ಬಾಂಡ್ ಗಳ ಯೋಜನೆ ಜಾರಿಗೆ ಬಂದ ನಂತರದ ಆರು ವರ್ಷಗಳಲ್ಲಿ, ಬಾಂಡ್ ಗಳ ಮೂಲಕ ನೀಡಲಾದ ದೇಣಿಗೆಗಳ ಅರ್ಧಕ್ಕೂ ಹೆಚ್ಚಿನ ಹಣವನ್ನು ಬಿಜೆಪಿ ಪಡೆದಿದೆ.
ಚುನಾವಣಾ ಆಯೋಗದ ಘೋಷಣೆಗಳ ಪ್ರಕಾರ, 2018 ರಿಂದ 2023ರವರೆಗೆ ಬಿಜೆಪಿಯು ಒಟ್ಟು 6,565 ಕೋಟಿ ರೂಪಾಯಿ ಹಣವನ್ನು ಸ್ವೀಕರಿಸಿದೆ. ಭಾರೀ ಅಂತರದಿಂದ ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಈ ಅವಧಿಯಲ್ಲಿ ಒಟ್ಟು 1,123 ಕೋಟಿ ರೂ. ಹಣ ಸ್ವೀಕರಿಸಿದೆ.
2023-24ರ ಹಣಕಾಸು ವರ್ಷದ ರಾಜಕೀಯ ಪಕ್ಷಗಳ ನಿಧಿ ಸ್ವೀಕಾರ ಘೋಷಣೆಗಳನ್ನು ಚುನಾವಣಾ ಆಯೋಗ ಇನ್ನಷ್ಟೇ ಪ್ರಕಟಿಸಬೇಕಾಗಿದೆ. ಆದರೆ, 2018 ಮಾರ್ಚ್ ಮತ್ತು 2024 ಜನವರಿ ನಡುವಿನ ಅವಧಿಯಲ್ಲಿ ಒಟ್ಟು 16,518 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ ಗಳ ಖರೀದಿಯಾಗಿದೆ.
ಮೂರನೇ ಸ್ಥಾನದಲ್ಲಿರುವ ತೃಣಮೂಲ ಕಾಂಗ್ರೆಸ್ ಆರು ವರ್ಷಗಳ ಅವಧಿಯಲ್ಲಿ 1,093 ಕೋಟಿ ರೂ. ಮೊತ್ತದ ನಿಧಿಯನ್ನು ಚುನಾವಣಾ ಬಾಂಡ್ ಗಳ ಮೂಲಕ ಸ್ವೀಕರಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಪಶ್ಚಿಮ ಬಂಗಾಳದಲ್ಲಿ 2011ರಿಂದ ಅಧಿಕಾರದಲ್ಲಿದೆ.
ಒಡಿಶಾದಲ್ಲಿ ಆಡಳಿತದಲಿರುವ ಬಿಜು ಜನತಾ ದಳ ಇದೇ ಅವಧಿಯಲ್ಲಿ 774 ಕೋಟಿ ರೂ.ಗಳ ದೇಣಿಗೆ ಪಡೆದಿದೆ.
ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಮ್ಕೆ 2019-20 ರಿಂದ 2022-2023ರವರೆಗಿನ ಅವಧಿಯಲ್ಲಿ 617 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ.
ಭಾರತ ರಾಷ್ಟ್ರ ಸಮಿತಿಯು 384 ಕೋಟಿ ರೂ. ಪಡೆದರೆ, ತೆಲುಗು ದೇಶಮ್ ಪಕ್ಷವು 147 ಕೋಟಿ ರೂ.ಗಳ ನಿಧಿಯನ್ನು ಸ್ವೀಕರಿಸಿದೆ.
ದಿಲ್ಲಿ ಮತ್ತು ಪಂಜಾಬಿನಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷವು ಆರು ವರ್ಷಗಳ ಅವಧಿಯಲ್ಲಿ 94 ಕೋಟಿ ರೂ. ಮೊತ್ತದ ನಿಧಿಯನ್ನು ಚುನಾವಣಾ ಬಾಂಡ್ ಗಳ ಮೂಲಕ ಪಡೆದಿದೆ.
ತಾನು 24 ಕೋಟಿ ರೂ. ದೇಣಿಗೆ ಪಡೆದಿರುವುದಾಗಿ ಬಿಹಾರದಲ್ಲಿ ಹಲವು ವರ್ಷಗಳಿಂದ ಅಧಿಕಾರದಲ್ಲಿರುವ ಜೆಡಿಯು ಘೋಷಿಸಿದೆ.