ಸುಪ್ರೀಂಕೋರ್ಟ್ ನಲ್ಲಿ ಕೇಜ್ರಿವಾಲ್ ಜಾಮೀನು ಅರ್ಜಿ ಇಂದು ವಿಚಾರಣೆ

Update: 2024-03-22 03:03 GMT

Photo: PTI

ಹೊಸದಿಲ್ಲಿ: ಈಡಿಯಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ. ಗುರುವಾರ ಅವರ ಬಂಧನಕ್ಕೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು.

ಈ ಮಧ್ಯೆ ಇಂಡಿಯಾ ಮೈತ್ರಿಕೂಟದ ಎಲ್ಲ ಪ್ರಮುಖ ಪಕ್ಷಗಳ ಮುಖಂಡರು ಕೇಜ್ರಿವಾಲ್ ಅವರಿಗೆ ಬೆಂಬಲ ಸೂಚಿಸಿದ್ದು, ಪಕ್ಷದಲ್ಲೂ ಎಲ್ಲ ಸದಸ್ಯರು ಸಿಎಂಗೆ ನಿಷ್ಠೆ ವ್ಯಕ್ತಪಡಿಸಿದ್ದಾರೆ. ಕೇಜ್ರಿವಾಲ್ ಜೈಲಿನಿಂದಲೇ ಆಡಳಿತ ನಡೆಸಬೇಕು ಎಂದು ದೆಹಲಿ ವಿಧಾನಸಭೆ ಸ್ಪೀಕರ್ ರಾಮ ನಿವಾಸ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಕೇವಲ ಬಂಧಿಸಲ್ಪಟ್ಟ ಮಾತ್ರಕ್ಕೆ ರಾಜೀನಾಮೆ ನೀಡುವ ಅಥವಾ ಅಧಿಕಾರವನ್ನು ಬೇರೆಯವರಿಗೆ ಹಸ್ತಾಂತರಿಸುವ ಅಗತ್ಯವಿಲ್ಲ ಎಂದು ಸಂವಿಧಾನ ತಜ್ಞ ಎಸ್.ಕೆ.ಶರ್ಮಾ ದೃಢಪಡಿಸಿದ್ದಾರೆ. "ಬಿಹಾರದ ಮಾಜಿ ಸಿಎಂ ಲಾಲೂಪ್ರಸಾದ್ ಯಾದವ್ ಅವರ ಬಂಧನವಾದಾಗ ಅವರು ಪತ್ನಿ ರಾಬ್ಡಿದೇವಿಯರವನ್ನು ಸಿಎಂ ಮಾಡಿದ್ದರು. ಇತ್ತೀಚೆಗೆ ಹೇಮಂತ್ ಸೊರೇನ್ ರಾಜೀನಾಮೆ ನೀಡಿದ್ದರು. ಆದರೆ ಸಂಪುಟ ಸಭೆ ಅಥವಾ ಪ್ರಗತಿ ಪರಿಶೀಲನಾ ಸಭೆಯನ್ನು ಜೈಲಿನಲ್ಲಿ ನಡೆಸುವುದು ಸೂಕ್ತ ಎನಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಕೇಜ್ರಿವಾಲ್ ಕುಟುಂಬವನ್ನು ಸಂಪರ್ಕಿಸಿ, ಬಂಧಿತ ಸಿಎಂಗೆ ಅಗತ್ಯ ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಹಂತದಲ್ಲಿ ಮತ್ತು ಮುಂದಿನ ವರ್ಷ ನಡೆಯುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಸಜ್ಜಾಗುತ್ತಿರುವ ನಡುವೆಯೇ ಕೇಜ್ರಿವಾಲ್ ಬಂಧನವಾಗಿರುವುದು ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News