ಲೋಕಸಭೆಯಿಂದ ಅಮಾನತು: ಸುಪ್ರೀಂ ಕೋರ್ಟ್ ಮೊರೆ ಹೋಗಲಿರುವ ಅಧೀರ್ ರಂಜನ್ ಚೌಧರಿ

Update: 2023-08-12 16:27 GMT

ಅಧೀರ್ ರಂಜನ್ ಚೌಧರಿ | Photo : ANI

ಹೊಸದಿಲ್ಲಿ: ವಿವಿಧ ಆಕ್ಷೇಪಾರ್ಹ ವಿಧಾನಗಳ ಮೂಲಕ ಪ್ರತಿಪಕ್ಷದ ಧ್ವನಿಯನ್ನು ಅಡಗಿಸಲು ಬಿಜೆಪಿಯು ಪಿತೂರಿಯೊಂದನ್ನು ರೂಪಿಸಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಶನಿವಾರ ಆರೋಪಿಸಿದ್ದಾರೆ.

ಲೋಕಸಭೆಯಿಂದ ಅಮಾನತುಗೊಂಡ ಒಂದು ದಿನದ ಬಳಿಕ ಅವರು ಈ ಆರೋಪವನ್ನು ಮಾಡಿದ್ದಾರೆ.

ಅಮಾನತನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಹೋಗುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಸಮಾಲೋಚನೆ ನಡೆಯುತ್ತಿದೆ ಎಂದರು.

ನನ್ನ ಅಮಾನತು ಆಡಳಿತಾರೂಢ ಪಕ್ಷದ ‘‘ಪ್ರತಿಗಾಮಿ ನಡೆ’’ ಎಂದು ಬಣ್ಣಿಸಿದ ಅವರು, ‘‘ನನ್ನನ್ನು ಒಂದು ವಿಚಿತ್ರ ಪರಿಸ್ಥಿತಿಯಲ್ಲಿ ಇರಿಸಲಾಗಿದೆ. ಅಂದರೆ, ಇದು, ಮೊದಲು ಗಲ್ಲಿಗೇರಿಸಿ ಬಳಿಕ ವಿಚಾರಣೆ ನಡೆಸಿದಂತೆ’’ ಎಂದರು.

ನಾನು ಸೇರಿದಂತೆ ನಾಲ್ವರು ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಿರುವುದು ಹೊಸ ವಿದ್ಯಮಾನವಾಗಿದೆ ಎಂದು ಚೌಧರಿ ಹೇಳಿದರು.

‘‘ವಿವಿಧ ಆಕ್ಷೇಪಾರ್ಹ ವಿಧಾನಗಳ ಮೂಲಕ ಸಂಸತ್ನಲ್ಲಿ ಪ್ರತಿಪಕ್ಷದ ಧ್ವನಿಯನ್ನು ಹತ್ತಿಕ್ಕಲು ಆಡಳಿತಾರೂಢ ಪಕ್ಷವು ಪಿತೂರಿಯೊಂದನ್ನು ರೂಪಿಸಿದೆ. ಇದನ್ನು ಅವರು ನನಗೆ ಅನ್ವಯಿಸಬಾರದು’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

‘‘ಆದರೆ, ಸ್ಪೀಕರ್ಗೆ ಗೌರವವನ್ನು ನೀಡುತ್ತೇನೆ. ಸ್ಪೀಕರ್ ಅವರ ಸೂಚನೆಯನ್ನು ನಾನು ಮೀರಲಾರೆ ಎಂದು ನಾನು ಹೇಳುತ್ತೇನೆ. ಆದರೆ, ಇಂಥ ಪರಿಸ್ಥಿತಿಯೊಂದನ್ನು ನ್ಯಾಯಾಲಯಕ್ಕೆ ತಿಳಿಗೊಳಿಸಲು ಸಾಧ್ಯವಾದರೆ, ನಾನು ಅದನ್ನೂ ಪ್ರಯತ್ನಿಸಬಹುದಾಗಿದೆ’’ ಎಂದು ಪಶ್ಚಿಮ ಬಂಗಾಳದ ಬಹರಾಮ್ಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಹೇಳಿದರು.

ಸುಪ್ರೀಂ ಕೋರ್ಟ್ಗೆ ಹೋಗುವುದೇ ಬೇಡವೇ ಎಂಬ ಬಗ್ಗೆ ಸಮಾಲೋಚನೆಗಳು ನಡೆಯುತ್ತಿವೆ. ‘‘ನಾನು ಶೀಘ್ರವೇ ನ್ಯಾಯಾಲಯಕ್ಕೆ ಹೋಗಬಹುದಾಗಿದೆ’’ ಎಂದು ಚೌಧರಿ ಹೇಳಿದರು.

‘‘ಇದು ಹೊಸ ವಿದ್ಯಮಾನ. ಸಂಸತ್ನಲ್ಲಿ ಇಷ್ಟರವರೆಗೆ ನಾವು ಇದನ್ನು ಎದುರಿಸಿರಲಿಲ್ಲ. ಸಂಸತ್ನಲ್ಲಿ ವಾದ ಮಾಡುವುದು ಅಮಾನತಿಗೆ ಕಾರಣವಾಗುತ್ತದೆಯೇ’’ ಎಂದು ಪ್ರಶ್ನಿಸಿದರು. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ನಾನಾಡಿದ ಮಾತುಗಳು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದರು.

‘‘ಮೋದೀಜಿ ಮಣಿಪುರವನ್ನು ಹೊರತುಪಡಿಸಿ ಬೇರೆಲ್ಲಾ ವಿಷಯದ ಬಗ್ಗೆ ಮಾತನಾಡುತ್ತಾರೆ. ಅವರು ‘ನೀರವ’ವಾಗಿ ಕುಳಿತುಕೊಳ್ಳುತ್ತಾರೆ. ‘ನೀರವ’ ಎಂದರೆ ಮೌನ. ನನ್ನ ಉದ್ದೇಶ ಪ್ರಧಾನಿ ಮೋದಿಯನ್ನು ಅವಮಾನಿಸುವುದಾಗಿರಲಿಲ್ಲ’’ ಎಂದು ಅವರು ಹೇಳಿದರು.

‘‘ಪದೇ ಪದೇ ದುರ್ವರ್ತನೆ ತೋರಿಸಿರುವುದಕ್ಕಾಗಿ’’ ಚೌಧರಿಯನ್ನು ಗುರುವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿತ್ತು. ಅವರ ವಿರುದ್ಧದ ವಿಚಾರಣೆಯನ್ನು ಸಂಸತ್ ಹಕ್ಕು ಬಾಧ್ಯತಾ ಸಮಿತಿ ನಡೆಸಲಿದೆ.

ಚೌಧರಿಯನ್ನು ಅಮಾನತುಗೊಳಿಸುವ ನಿರ್ಣಯವನ್ನು ಸಂಸದೀಯ ವ್ಯವಹಾರಗಳ ಸಚಿವ ಪಹ್ಲಾದ್ ಜೋಶಿ ಮಂಡಿಸಿದ್ದರು. ಪ್ರಧಾನಿ ಅಥವಾ ಇತರ ಸಚಿವರು ಮಾತನಾಡುವಾಗ ಅಥವಾ ಚರ್ಚೆ ನಡೆಯುತ್ತಿರುವಾಗ ಅವರು ಸದನದಲ್ಲಿ ಗದ್ದಲ ಎಬ್ಬಿಸುತ್ತಾರೆ ಎಂದು ನಿರ್ಣಯದಲ್ಲಿ ಹೇಳಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News