ಅಕ್ರಮ ಕಟ್ಟಡಗಳ ಹಾವಳಿ: ತಾಜ್ ಮಹಲ್ ಸೌಂದರ್ಯಕ್ಕೆ ಧಕ್ಕೆ
ಆಗ್ರಾ: ನಿರ್ಬಂಧಿತ ಪ್ರದೇಶದಲ್ಲಿ 470 ಅಕ್ರಮ ಕಟ್ಟಡಗಳ ನಿರ್ಮಾಣದಿಂದಾಗಿ ವಿಶ್ವವಿಖ್ಯಾತ ತಾಜ್ ಮಹಲ್ ನ ಸೌಂದರ್ಯಕ್ಕೆ ಧಕ್ಕೆ ಉಂಟಾಗಿದೆ. ಪ್ರಪಂಚದ ಏಳು ಅದ್ಭುತಗಳ ಪೈಕಿ ಒಂದಾಗಿರುವ ಈ ಸುಂದರ ಸ್ಮಾರಕದ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡಗಳನ್ನು ನಿಮಿಸುವಂತಿಲ್ಲ. ಆದರೆ ಕೆಲ ಒತ್ತುವರಿಗಳು ದಶಕದಷ್ಟು ಹಳೆಯದು. ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಬಹುತೇಕ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಿದೆ. ಆದರೆ ಸ್ಥಳೀಯ ಅಧಿಕಾರಿಗಳು ಇದನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.
ಎಎಸ್ಐ ಮಹಾನಿರ್ದೇಶಕರು ಉತ್ತರ ಪ್ರದೇಶ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಈ ಕಟ್ಟಡಗಳ ತೆರವಿಗೆ ಮನವಿ ಸಲ್ಲಿಸಿದ್ದರು. ಸ್ಥಳೀಯ ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ಇವನ್ನು ತೆರವುಗೊಳಿಸಿಲ್ಲ ಎಂದು ಎಎಸ್ಐ ಅಧಿಕಾರಿಗಳು ಹೇಳಿದ್ದಾರೆ. ಸುರಕ್ಷಿತ ಸ್ಮಾರಕಗಳ ಸುತ್ತಮುತ್ತಲೂ ಅಕ್ರಮ ನಿರ್ಮಾಣಗಳು ಆದಲ್ಲಿ ಆ ಬಗ್ಗೆ ದೂರು ನೀಡುವುದಕ್ಕಷ್ಟೇ ಎಎಸ್ಐ ಅಧಿಕಾರ ಸೀಮಿತ ಎನ್ನುವುದು ಅಧೀಕ್ಷಕ ಪ್ರಾಚ್ಯವಸ್ತು ಸರ್ವೇಕ್ಷಣಾಧಿಕಾರಿ ರಾಜ್ಕುಮಾರ್ ಪಟೇಲ್ ಅವರ ಅಭಿಪ್ರಾಯ. ಆದರೆ ಅಕ್ರಮ ನಿರ್ಮಾಣಗಳ ತೆರವಿನ ನೋಟಿಸ್ ನೀಡುವ ಅಧಿಕಾರ ಎಎಸ್ಐ ಮಹಾನಿರ್ದೇಶಕರ ಕಚೇರಿಗೆ ಇಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ. ಇದು ಆಗ್ರಾ ಅಭಿವೃದ್ಧಿ ಪ್ರಾಧಿಕಾರ ಮತ್ತು ಸ್ಥಳೀಯ ಆಡಳಿತದ ಜವಾಬ್ದಾರಿ ಎಂದು ಸ್ಪಷ್ಟಪಡಿಸುತ್ತಾರೆ.
ಎಎಸ್ಐ ವರದಿ ಪ್ರಕಾರ, ಸಂರಕ್ಷಿತ ಸ್ಮಾರಕದ 100 ರಿಂದ 300 ಮೀಟರ್ ವ್ಯಾಪ್ತಿಯಲ್ಲಿ 2015-22ರ ಅವಧಿಯಲ್ಲಿ 248 ಹೊಸ ಅಕ್ರಮ ಕಟ್ಟಡಗಳು ತಲೆ ಎತ್ತಿವೆ ಎಂದು ಎಎಸ್ಐ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.