ತಮಿಳುನಾಡು: ಹೋರಿ ಪಳಗಿಸುವ ಸ್ಪರ್ಧೆಗಳಲ್ಲಿ 7 ಮಂದಿ ಮೃತ್ಯು; 400ಕ್ಕೂ ಅಧಿಕ ಮಂದಿಗೆ ಗಾಯ

Update: 2025-01-17 07:47 IST
ತಮಿಳುನಾಡು: ಹೋರಿ ಪಳಗಿಸುವ ಸ್ಪರ್ಧೆಗಳಲ್ಲಿ 7 ಮಂದಿ ಮೃತ್ಯು; 400ಕ್ಕೂ ಅಧಿಕ ಮಂದಿಗೆ ಗಾಯ

PC: x.com/otvkhabar

  • whatsapp icon

ತಿರುಚ್ಚಿ: ತಮಿಳುನಾಡಿನ ವಿವಿಧೆಡೆಗಳಲ್ಲಿ ಜಲ್ಲಿಕಟ್ಟು ಮತ್ತು ಸಂಬಂಧಿತ ಹೋರಿ ಪಳಗಿಸುವ ಸ್ಪರ್ಧೆಗಳಲ್ಲಿ ಗುರುವಾರ ಕನಿಷ್ಠ ಏಳು ಮಂದಿ ಜೀವ ಕಳೆದುಕೊಂಡಿದ್ದು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಆರು ಮಂದಿ ಪ್ರೇಕ್ಷಕರು. ಶಿವಗಂಗಾ ಜಿಲ್ಲೆಯ ಸಿರವಾಯಲ್ ಮಂಜುವಿರಟ್ಟು ಎಂಬಲ್ಲಿ ಹೋರಿ ತಿವಿದು ತೀವ್ರವಾಗಿ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಧುರೈನಲ್ಲಿ ನಡೆದ ಅಲಂಗನಲ್ಲೂರು ಜಲ್ಲಿಕಟ್ಟು ಸ್ಪರ್ಧೆ ವೀಕ್ಷಿಸಲು ಆಗಮಿಸಿದ್ದ ಪ್ರೇಕ್ಷಕನೊಬ್ಬ ಮೃತಪಟ್ಟಿದ್ದರೆ, ಕೇಂದ್ರ ಜಿಲ್ಲೆಗಳಲ್ಲಿ ಆಯೋಜಿಸಿದ್ದ ಇತರ ಜಲ್ಲಿಕಟ್ಟು ಸ್ಪರ್ಧೆಗಳಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ.

ಕೃಷ್ಣಗಿರ ಜಿಲ್ಲೆಯ ಬಸ್ತಲಪಲ್ಲಿ ಎಂಬಲ್ಲಿ ಆಯೋಜಿಸಿದ್ದ ಎರಥು ವಿಡಂ ವಿಳಾ ಎಂಬ ಹೋರಿ ಓಟದಲ್ಲಿ 30 ವರ್ಷದ ವ್ಯಕ್ತಿ ಅಸು ನೀಗಿದರೆ, ಸೇಲಂ ಜಿಲ್ಲೆಯ ಸೆಂಥರಪಟ್ಟಿ ಎಂಬಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 45 ವರ್ಷದ ವ್ಯಕ್ತಿ ಜೀವ ಕಳೆದುಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಸಿರವಾಯಲ್ ಸ್ಪರ್ಧಾ ಸ್ಥಳದಿಂದ ಓಡಿದ ಎತ್ತನ್ನು ಹಿಡಿಯಲು ಪ್ರಯತ್ನಿಸಿದ ಹೋರಿಯ ಮಾಲೀಕ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪದುಕೊಟ್ಟೈ, ಕರೂರು ಮತ್ತು ತಿರುಚ್ಚಿ ಜಿಲ್ಲೆಗಳಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆ ವೇಳೆ 156 ಮಂದಿ ಗಾಯಗೊಂಡಿದ್ದಾರೆ. ಸಿರವಾಯಲ್ ನಲ್ಲಿ ಮೃತಪಟ್ಟ ವ್ಯಕ್ತಿಯನ್ನು ದೇವಕೊಟ್ಟೈನ ಎಸ್.ಸುಬ್ಬಯ್ಯ ಎಂದು ಗುರುತಿಸಲಾಗಿದೆ. ಪ್ರಸಿದ್ಧ ಅಲಂಗನಲ್ಲೂರು ಜಲ್ಲಿಕಟ್ಟುವಿನಲ್ಲಿ 17 ಮಂದಿ ಹೋರಿ ಮಾಲೀಕರು ಮತ್ತು 33 ಮಂದಿ ಪ್ರೇಕ್ಷಕರು ಸೇರಿ 76 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೆಟ್ಟುಪಟ್ಟಿಯಿಂದ ಜಲ್ಲಿಕಟ್ಟು ವೀಕ್ಷಿಸಲು ಆಗಮಿಸಿದ್ದ ಪಿ.ಪೆರಿಸ್ವಾಮಿ (56) ಚಿಕಿತ್ಸೆಗೆ ಸ್ಪಂದಿಸದೇ ಅಸು ನೀಗಿದರು.

ಒದುರಂಪಟ್ಟಿಯ ಎಸ್.ಪೆರುಮಾಳ್ (70) ಎಂಬ ವ್ಯಕ್ತಿ ಮಂಗಲದೇವನಪಟ್ಟಿ ಎಂಬಲ್ಲಿ ಬಸ್ ಗೆ ಕಾಯುತ್ತಿದ್ದರು. ಆಗ ಸ್ಪರ್ಧಾಕಣದಿಂದ ಓಡಿಬಂದ ಎತ್ತು ಢಿಕ್ಕಿ ಹೊಡೆದು ಅವರು ಮೃತಪಟ್ಟರು. ಪುದುಕೊಟ್ಟೈ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಅವರನ್ನು ತಕ್ಷಣ ಸಾಗಿಸಲಾಯಿತಾದರೂ, ಅವರು ಆ ವೇಳೆಗಾಗಲೇ ಮೃತಪಟ್ಟಿದ್ದನ್ನು ವೈದ್ಯರು ಘೋಷಿಸಿದರು. 607 ಎತ್ತುಗಳು ಮತ್ತು 300 ಮಂದಿ ಪಳಗಿಸುವವರು ಇದ್ದ ಈ ಕಾರ್ಯಕ್ರಮದಲ್ಲಿ 10 ಮಂದಿ ಗಾಯಗೊಂಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News