100ಕ್ಕೂ ಅಧಿಕ ಸಿಬ್ಬಂದಿಗಳನ್ನು ವಜಾಗೊಳಿಸಿದ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್

Update: 2024-06-30 06:22 GMT

Photo: Facebook/TISS

ಹೊಸದಿಲ್ಲಿ: ಪ್ರತಿಷ್ಠಿತ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಸಂಸ್ಥೆಯು (TISS) ತನ್ನ ಎಲ್ಲ ನಾಲ್ಕು ಕ್ಯಾಂಪಸ್‌ಗಳಲ್ಲಿನ ಸುಮಾರು 55 ಮಂದಿ ಬೋಧಕ ಸಿಬ್ಬಂದಿಗಳು ಹಾಗೂ 60 ಮಂದಿ ಬೋಧಕೇತರ ಸಿಬ್ಬಂದಿಗಳನ್ನು ವಜಾಗೊಳಿಸಿದೆ ಎಂದು ರವಿವಾರ The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹೀಗೆ ವಜಾಗೊಂಡಿರುವ ಸಿಬ್ಬಂದಿಗಳ ಪೈಕಿ ಗುವಾಹಟಿ ಕ್ಯಾಂಪಸ್‌ನ ಶೇ. 50ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.

ವಜಾಗೊಂಡಿರುವ ಬೋಧಕ ಸಿಬ್ಬಂದಿಗಳ ಪೈಕಿ ಸುಮಾರು 20 ಮಂದಿ ಮುಂಬೈ ಕ್ಯಾಂಪಸ್, 15 ಮಂದಿ ಹೈದರಾಬಾದ್ ಕ್ಯಾಂಪಸ್, 14 ಮಂದಿ ಗುವಾಹಟಿ ಕ್ಯಾಂಪಸ್ ಹಾಗೂ ಆರು ಮಂದಿ ಮಹಾರಾಷ್ಟ್ರದ ತುಳಜಾಪುರ ಕ್ಯಾಂಪಸ್‌ಗೆ ಸೇರಿದ್ದಾರೆ ಎನ್ನಲಾಗಿದೆ.

ವಜಾಗೊಂಡಿರುವ ಬಹುತೇಕ ಸಿಬ್ಬಂದಿಗಳು ಅಲ್ಲಿ ಒಂದು ದಶಕಕ್ಕಿಂತ ಹೆಚ್ಚು ಅವಧಿಯಿಂದ ಸೇವೆ ಸಲ್ಲಿಸುತ್ತಿದ್ದರು ಎಂದು ವರದಿಯಾಗಿದೆ.

ಉದ್ಯೋಗಿಗಳಿಗೆ ಮುಂಚಿತವಾಗಿಯೇ ನೋಟಿಸ್ ನೀಡದೆ ಅವರನ್ನು ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ. ಅವರೆಲ್ಲರೂ ಶುಕ್ರವಾರದಂದು ತಮ್ಮ ವಜಾ ನೋಟಿಸ್ ಸ್ವೀಕರಿಸಿದ್ದು, "ರವಿವಾರದಂದು ನಿಮ್ಮ ಗುತ್ತಿಗೆ ಅವಧಿ ಮುಕ್ತಾಯಗೊಳ್ಳಲಿದ್ದು, ಟಾಟಾ ಎಜುಕೇಷನ್ ಟ್ರಸ್ಟ್ ವತಿಯಿಂದ ನಿಮ್ಮ ಗುತ್ತಿಗೆಯನ್ನು ನವೀಕರಿಸಲು ಅನುಮೋದನೆ/ಅನುದಾನ ಮಂಜೂರಾಗದೆ ಇರುವುದರಿಂದ, ನಿಮ್ಮ ಗುತ್ತಿಗೆ ಕರಾರನ್ನು ನವೀಕರಿಸಲು ಸಾಧ್ಯವಿಲ್ಲ" ಎಂದು ಅದರಲ್ಲಿ ತಿಳಿಸಲಾಗಿದೆ ಎಂದು The Hindu ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಜಾಗೊಂಡಿರುವ ಸಿಬ್ಬಂದಿಗಳಿಗೆ ಪಾವತಿಸಬೇಕಿರುವ ವೇತನವನ್ನು ಟಾಟಾ ಎಜುಕೇಷನ್ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿಲ್ಲ ಎಂದು ಶುಕ್ರವಾರ ಅವರಿಗೆ ನೀಡಲಾಗಿರುವ ವಜಾ ನೋಟಿಸ್‌ನಲ್ಲಿ ನಮೂದಿಸಲಾಗಿದೆ.

ಕಳೆದ ಜೂನ್ ತಿಂಗಳಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಾವಳಿಗಳಲ್ಲಿ ಆಗಿರುವ ತಿದ್ದುಪಡಿಗಳ ಅನ್ವಯ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಸಂಸ್ಥೆಯು ಕೇಂದ್ರದ ನಿಗಾ ಅಡಿ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಂಗಾಮಿ ಉಪ ಕುಲಪತಿ ಮನೋಜ್ ತಿವಾರಿ, ಈ ವಿಷಯವನ್ನು ಟಾಟಾ ಎಜುಕೇಷನ್ ಟ್ರಸ್ಟ್‌ನೊಂದಿಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸಲಾಗಿದೆ. " ಒಂದು ವೇಳೆ ನಾವೇನಾದರೂ ಅನುದಾನವನ್ನು ಸ್ವೀಕರಿಸಿದರೆ, ಈ ನಿರ್ಧಾರವನ್ನು ಹಿಂಪಡೆಯಲಾಗುವುದು. ಒಂದು ವೇಳೆ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ಯಾವುದೇ ಪರ್ಯಾಯ ಮಾರ್ಗಗಳಿಲ್ಲ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News