ರಾಹುಲ್ ಗಾಂಧಿಯ ಹೇಳಿಕೆಗೆ ಆಕ್ರೋಶ: ಅಹಮದಾಬಾದ್‌ನ ಕಾಂಗ್ರೆಸ್ ಕಚೇರಿಯನ್ನು ಧ್ವಂಸಗೊಳಿಸಿದ ಬಜರಂಗದಳ ಕಾರ್ಯಕರ್ತರು

Update: 2024-07-02 07:43 GMT

Screengrab:X/@IndiaToday

ಅಹಮದಾಬಾದ್: ಹಿಂದೂಗಳ ಕುರಿತು ರಾಹುಲ್ ಗಾಂಧಿ ಸಂಸತ್ತಿನಲ್ಲಿ ನೀಡಿದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಜರಂಗದಳದ ಕಾರ್ಯಕರರು, ಅಹಮದಾಬಾದ್‌ನಲ್ಲಿರುವ ಕಾಂಗ್ರೆಸ್ ಪಕ್ಷದ ಅನಧಿಕೃತ ರಾಜ್ಯ ಕಚೇರಿ ರಾಜೀವ್ ಗಾಂಧಿ ಭವನವನ್ನು ಧ್ವಂಸಗೊಳಿಸಿದ್ದಾರೆ ಎಂದು timesnow.com ವರದಿ ಮಾಡಿದೆ.

ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅನಧಿಕೃತ ರಾಜ್ಯ ಕಚೇರಿಯಾದ ರಾಜೀವ್ ಗಾಂಧಿ ಭವನದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ ಬಜರಂಗದಳ ಕಾರ್ಯಕರ್ತರು, ಕಚೇರಿ ಎದುರು ರಸ್ತೆ ತಡೆಯನ್ನೂ ನಡೆಸಿದರು. ಇದರೊಂದಿಗೆ ಕಚೇರಿಯ ಬಳಿಯಿದ್ದ ಕಾಂಗ್ರೆಸ್ ಪಕ್ಷದ ಕೆಲ ಭಿತ್ತಿಚಿತ್ರಗಳನ್ನೂ ವಿರೂಪಗೊಳಿಸಿದರು ಎನ್ನಲಾಗಿದೆ.

ಸೋಮವಾರ ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿ ತಮ್ಮ ಚೊಚ್ಚಲ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಸದನದಲ್ಲಿ ಶಿವನ ಭಾವಚಿತ್ರ ಪ್ರದರ್ಶಿಸಿದ್ದ ರಾಹುಲ್ ಗಾಂಧಿ, "ನೀವು ಶಿವನತ್ತ ನೋಡಿದರೆ, ಹಿಂದೂಗಳು ಎಂದಿಗೂ ಭೀತಿ, ದ್ವೇಷವನ್ನು ಹರಡುವುದಿಲ್ಲ ಎಂಬುದು ಅರ್ಥವಾಗುತ್ತದೆ. ಆದರೆ ಬಿಜೆಪಿಯು ದಿನದ 24 ಗಂಟೆಯೂ ಭೀತಿ, ದ್ವೇಷವನ್ನು ಹರಡುತ್ತಿದೆ" ಎಂದು ಆರೋಪಿಸಿದ್ದರು.

ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪಿಸಿದ್ದರು. ಅವರೊಂದಿಗೆ ಸಚಿವರೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News