ರಾಜಭವನ ಊಟದ ಮೆನುವಿನಿಂದ ದುಬಾರಿ ಟೊಮೆಟೊವನ್ನು ಹೊರಗಿಟ್ಟ ಪಂಜಾಬ್ ರಾಜ್ಯಪಾಲ!

Update: 2023-08-04 18:18 GMT

Photo: ಬನ್ವರಿಲಾಲ್ ಪುರೋಹಿತ್ | PTI 

ಚಂಡೀಗಢ: ಚಂಡೀಗಢ ಭಾಗದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿರುವುದರಿಂದ, ಪಂಜಾಬ್ ರಾಜ್ಯಪಾಲ ಹಾಗೂ ಕೇಂದ್ರಾಡಳಿತ ಪ್ರದೇಶದ ಆಡಳಿತಗಾರರಾದ ಬನ್ವರಿಲಾಲ್ ಪುರೋಹಿತ್ ಅವರು ರಾಜಭವನದ ಊಟದ ಮೆನುವಿನಿಂದ ಈ ದೈನಂದಿನ ಅವಶ್ಯಕತೆಯ ಟೊಮೆಟೊವನ್ನು ಕೈಬಿಟ್ಟಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಪಾಲರು, ಟೊಮೆಟೊ ಬಳಕೆಯನ್ನು ತಗ್ಗಿಸುವುದರಿಂದ ಅದರ ಏರುಮುಖ ಬೆಲೆಯನ್ನು ನಿಯಂತ್ರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಸದ್ಯದ ಮಟ್ಟಿಗೆ ಪರ್ಯಾಯಗಳನ್ನು ಬಳಸಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ. ಚಂಡೀಗಢದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೊವು ರೂ. 250ರವರೆಗೆ ಮಾರಾಟವಾಗುತ್ತಿದ್ದರೆ, ಅಪ್ನಿ ಮಂಡಿಗಳಲ್ಲಿ ಈ ದರವು ರೂ. 180-200ರವರೆಗೆ ಇದೆ.

ಆಹಾರ ಪದಾರ್ಥಗಳ ಬೆಲೆಯೇರಿಕೆಯ ಪರಿಣಾಮವನ್ನು ಎದುರಿಸುತ್ತಿರುವ ಪಂಜಾಬ್ ರಾಜ್ಯದ ನಾಗರಿಕರಿಗೆ ಬೆಂಬಲ ಸೂಚಿಸುವ ಸಂಕೇತವಾಗಿ ಟೊಮೆಟೊ ಬಳಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರವನ್ನು ರಾಜ್ಯಪಾಲರು ಕೈಗೊಂಡಿದ್ದಾರೆ ಎಂದು ರಾಜಭವನ ಬಿಡುಗಡೆ ಮಾಡಿರುವ ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ. “ಯಾವುದೇ ಪದಾರ್ಥದ ಬಳಕೆಯನ್ನು ಸ್ಥಗಿತಗೊಳಿಸುವುದರಿಂದ ಅಥವಾ ಕಡಿತಗೊಳಿಸುವುದರಿಂದ ಅದರ ದರದ ಮೇಲೆ ಪರಿಣಾಮವುಂಟಾಗುತ್ತದೆ.

ಬೇಡಿಕೆಯನ್ನು ತಗ್ಗಿಸುವುದರಿಂದ ಸ್ವಯಂಚಾಲಿತವಾಗಿ ಬೆಲೆ ಇಳಿಕೆಯಾಗುತ್ತದೆ. ಸದ್ಯದ ಮಟ್ಟಿಗೆ ಜನರು ತಮ್ಮ ಮನೆಗಳಲ್ಲಿ ಪರ್ಯಾಯಗಳನ್ನು ಬಳಸಲಿ ಹಾಗೂ ಟೊಮೆಟೊ ಬೆಲೆ ಏರಿಕೆಯನ್ನು ತಡೆಟ್ಟಲು ನೆರವು ನೀಡಲಿ ಎಂದು ಮನವಿ ಮಾಡುತ್ತೇನೆ” ಎಂದು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಹೇಳಿದ್ದಾರೆ. ದೇಶಾದ್ಯಂತ ಗೃಹಬಳಕೆಯ ಆಹಾರ ಪದಾರ್ಥವಾಗಿರುವ ಟೊಮೆಟೊದ ಅಕಾಲಿಕ ದರ ಏರಿಕೆಯಿಂದಾಗಿ ಕಳೆದ ಕೆಲವು ವಾರಗಳಿಂದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಜನರು ಹೈರಾಣಾಗಿದ್ದಾರೆ ಎಂದು ರಾಜ್ಯಪಾಲರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಈ ನಡುವೆ ಪ್ರತಿಕೂಲ ಹವಾಮಾನವು ಕಳೆದ ಕೆಲವು ವಾರಗಳಿಂದ ಕೇವಲ ಟೊಮೆಟೊ ಉತ್ಪಾದನೆ ಮೇಲೆ ಮಾತ್ರ ದುಷ್ಪರಿಣಾಮವನ್ನುಂಟು ಮಾಡಿಲ್ಲ; ಬದಲಿಗೆ ಪೂರೈಕೆ ಸರಪಣಿಯ ಮೇಲೂ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿದೆ. ಟೊಮೆಟೊ ದರವು ಸಾರ್ವಕಾಲಿಕ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜುಲೈ 11ರಂದು ಅಪ್ನಿ ಮಂಡಿಗಳಲ್ಲಿ ರೂ. 250ರವರೆಗೆ ಇದ್ದರೆ, ಚಿಲ್ಲರೆ ಅಂಗಡಿಗಳಲ್ಲಿ ಈ ದರವು ರೂ. 300ರವರೆಗೆ ಇತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News