ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಜಾತಿ ಸಮೀಕ್ಷೆ ಬೆಂಬಲಿಸಿದ ಬಿಹಾರದ ಜೆಡಿಯು-ಬಿಜೆಪಿ ಸರಕಾರ
ಹೊಸದಿಲ್ಲಿ: ಬಿಹಾರದ ಜೆಡಿಯು-ಬಿಜೆಪಿ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಪ್ರಥಮ ಅಫಿಡವಿಟ್ ನಲ್ಲಿ ಕಳೆದ ವರ್ಷ ನಡೆಸಲಾದ ಜಾತಿ ಸಮೀಕ್ಷೆಯನ್ನು ತಾನು ಬೆಂಬಲಿಸಿದ್ದೇನೆ ಎಂದು ತಿಳಿಸಿದೆ. ಸಾಮಾಜಿಕ ಸಮಾನತೆಯನ್ನು ಸಾಧಿಸಲು ಎಲ್ಲ ಸಾಂವಿಧಾನಿಕ ಆದೇಶಗಳನ್ನು ತಾನು ಪಾಲಿಸಿರುವುದಾಗಿ ಅದು ಒತ್ತಿ ಹೇಳಿದೆ.
ಜಾತಿ ಸಮೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯ ಮುನ್ನಾದಿನ ಬಿಹಾರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಮಂಗಳವಾರ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ರಾಷ್ಟ್ರೀಯ ಜಾತಿ ಗಣತಿಯು ಲೋಕಸಭಾ ಚುನಾವಣೆಗಳಿಗೆ ಮುನ್ನ ನಿರ್ಣಾಯಕ ಪ್ರಚಾರ ವಿಷಯವಾಗಿ ಹೊರಹೊಮ್ಮಿದೆ. ಬಿಹಾರ ಸರಕಾರದ ಇತ್ತೀಚಿನ ಅಫಿಡವಿಟ್ ರಾಜಕೀಯ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದರೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು RJDಯ ಮೈತ್ರಿಯೊಂದಿಗೆ ಅಧಿಕಾರದಲ್ಲಿದ್ದಾಗ ಕಾರ್ಯರೂಪಕ್ಕಿಳಿದಿದ್ದ ಪರಿಕಲ್ಪನೆಯ ಮುಂದುವರಿಕೆಯನ್ನು ಸೂಚಿಸಿದೆ.
ಆ ಸಮಯದಲ್ಲಿ ಜಾತಿ ಗಣತಿಯನ್ನು ಬೆಂಬಲಿಸಿದ್ದ ಜೆಡಿಯು ಮತ್ತು RJD, ಅದು ಸಾಮಾಜಿಕ ಅಸಮಾನತೆಗಳನ್ನು ನಿವಾರಿಸಲು ಮತ್ತು ಸಮಾನ ಅಭಿವೃದ್ಧಿಯನ್ನು ಖಚಿತಪಡಿಸಲು ಸಾಧನವಾಗಿದೆ ಎಂದು ಹೇಳಿದ್ದವು. ಆದರೆ ಜೆಡಿಯು-ಆರ್ಜೆಡಿ ಸರಕಾರದ ವಿಸರ್ಜನೆ ಮತ್ತು ನಂತರ ಬಿಜೆಪಿಯೊಂದಿಗೆ ನಿತೀಶ್ ಮೈತ್ರಿಯ ಹಿನ್ನೆಲೆಯಲ್ಲಿ ಸಮೀಕ್ಷೆ ಮತ್ತು ಅದರ ಅನುಷ್ಠಾನಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನೂತನ ಸರಕಾರದ ನಿಲುವು ಅನಿರ್ದಿಷ್ಟವಾಗಿರುವಂತೆ ಕಂಡು ಬಂದಿತ್ತು. ಆ ಸಮಯದಲ್ಲಿ ಬಿಜೆಪಿ ರಾಜ್ಯ ಘಟಕವೂ ಸಮೀಕ್ಷೆಯನ್ನು ಬೆಂಬಲಿಸಿತ್ತು.