ರಾಮ್ ಪುರದಲ್ಲೇ ಬಿಜೆಪಿಗೆ ಸೋಲುಣಿಸಿದ ಮೌಲಾನಾ ಮುಹೀಬುಲ್ಲ ನದ್ವಿ
ಲಕ್ನೋ: ಹಿಂದುತ್ವದ ಭದ್ರಕೋಟೆಯೆಂದೇ ಪರಿಗಣಿಸಲಾದ ಉತ್ತರ ಪ್ರದೇಶದಲ್ಲೇ ಈ ಬಾರಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ನೂತನ ರಾಮಮಂದಿರ ಉದ್ಘಾಟನೆಯಾದ ಅಯೋಧ್ಯೆಯಿರುವ ಫೈಝಾಬಾದ್ ನಲ್ಲೂ ಬಿಜೆಪಿ ಸೋತಿರುವುದು ಆ ಪಕ್ಷಕ್ಕೆ ಬಹಳ ದೊಡ್ಡ ಮುಖಭಂಗವಾಗಿದೆ. ಆದರೆ ಹೆಚ್ಚು ಸುದ್ದಿಯಾಗದ ಇನ್ನೊಂದು ಸುದ್ದಿಯಿದೆ. ಅದೇನೆಂದರೆ, ಉತ್ತರ ಪ್ರದೇಶದಲ್ಲೇ ರಾಮನ ಹೆಸರಿರುವ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಸೋತಿದೆ.
ರಾಮ್ ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದು ಅದರ ಪಾಲಿಗೆ ಭಾರೀ ಹಿನ್ನಡೆ ಎಂಬುದು ಒಂದೆಡೆಯಾದರೆ ಬಿಜೆಪಿಯನ್ನು ಸೋಲಿಸಿದ ಸಮಾಜವಾದಿ ಪಕ್ಷದ ಅಭ್ಯರ್ಥಿ ಒಬ್ಬ ಇಸ್ಲಾಮಿಕ್ ವಿದ್ವಾಂಸ ಹಾಗು ಮಸೀದಿಯ ಧರ್ಮಗುರು ಎಂಬುದು ಇನ್ನೊಂದು ವಿಶೇಷ.
ರಾಮ್ ಪುರದಲ್ಲಿ ಮೌಲಾನಾ ಮುಹೀಬುಲ್ಲ ನದ್ವಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಎಸ್ಪಿ ಅಚ್ಚರಿ ಮೂಡಿಸಿತ್ತು. ಜೂನ್ ನಾಲ್ಕರಂದು ಚುನಾವಣಾ ಫಲಿತಾಂಶ ಬಂದಾಗ ಮೌಲಾನಾ ಮುಹೀಬಲ್ಲ ತಮ್ಮ ಪಕ್ಷ ಮಾತ್ರವಲ್ಲದೆ ಇಡೀ ಉತ್ತರ ಪ್ರದೇಶ ರಾಜಕೀಯ ವಲಯಕ್ಕೇ ಅಚ್ಚರಿ ತಂದಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿಯನ್ನು 87,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ರಾಮ್ ಪುರ್ ಅಂದ್ರೆ ಎಸ್ಪಿ ಹಿರಿಯ ನಾಯಕ ಅಝಮ್ ಖಾನ್ ಅವರ ಭದ್ರಕೋಟೆ. ಅಲ್ಲಿ ಎಸ್ಪಿ ಪಕ್ಷದಲ್ಲಿ ಏನೇ ಆಗಬೇಕಿದ್ದರೂ ಆಝಮ್ ಖಾನ್ ಬೆಂಬಲ ಬೇಕೇ ಬೇಕು. ಅಝಮ್ ಖಾನ್ ಈಗ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಅಲ್ಲಿ ರಾಜಕೀಯದ ಗಂಧಗಾಳಿ ಗೊತ್ತಿಲ್ಲದ ಈ ಮೌಲಾನಾಗೆ ಅಖಿಲೇಶ್ ಟಿಕೆಟ್ ಕೊಟ್ಟಿದ್ದು ಆಝಮ್ ಖಾನ್ ಕುಟುಂಬಕ್ಕೆ ಹಾಗು ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು.
ಪಕ್ಷದೊಳಗೇ ಆರಂಭಿಕ ಪ್ರತಿರೋಧವೂ ಇತ್ತು, ಆದರೆ ಅದನ್ನೆಲ್ಲ ನಾನು ನಿವಾರಿಸಿಕೊಂಡೆ. ಅವರೂ ಆ ಪ್ರತಿರೋಧವನ್ನು ಹೆಚ್ಚಿಸಲಿಲ್ಲ. ಜನರ ನಡುವೆ ನನಗೆ ಸಿಗುತ್ತಿದ್ದ ಪ್ರೀತಿ ನೋಡಿ ಅವರೂ ಅರ್ಥ ಮಾಡಿಕೊಂಡಿರಬಹುದು ಎಂದು ಮೌಲಾನಾ ಮುಹೀಬುಲ್ಲ ಹೇಳಿದ್ದಾರೆ.
ಇಲ್ಲಿ ಇನ್ನೂ ವಿಶೇಷ ಅಂದ್ರೆ, ದಿಲ್ಲಿಯ ಸಂಸತ್ ಭವನ ಇರುವ ಪಾರ್ಲಿಮೆಂಟ್ ಸ್ಟ್ರೀಟ್ ನಲ್ಲೇ ಇರುವ ಜಾಮಿಯಾ ಮಸೀದಿಯಲ್ಲಿ 2005 ರಿಂದ ಇಮಾಮ್ ಆಗಿದ್ದವರು ಮೌಲಾನಾ ಮುಹೀಬುಲ್ಲ ನದ್ವಿ.
ಈಗ ಹತ್ತೊಂಬತ್ತು ವರ್ಷಗಳ ನಂತರ ಪಾರ್ಲಿಮೆಂಟ್ ಪಕ್ಕದಲ್ಲೇ ಇರುವ ಮಸೀದಿಯಿಂದ ತನ್ನ ತವರು ರಾಮ್ ಪುರಕ್ಕೆ ಬಂದು ಅಲ್ಲಿ ಚುನಾವಣೆ ಎದುರಿಸಿ ಗೆದ್ದು ಮತ್ತೆ ಪಾರ್ಲಿಮೆಂಟ್ ಸ್ಟ್ರೀಟ್ ಗೆ ಮಾತ್ರವಲ್ಲ ಸೀದಾ ಪಾರ್ಲಿಮೆಂಟ್ ಒಳಗೆ ಮೌಲಾನಾ ಮುಹೀಬುಲ್ಲ ನದ್ವಿ ಹೋಗುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ಬಾರಿ ಗೆದ್ದಿರುವ ಐವರು ಮುಸ್ಲಿಂ ಸಂಸದರಲ್ಲಿ ಮೌಲಾನಾ ಮುಹೀಬುಲ್ಲ ನದ್ವಿ ಕೂಡ ಒಬ್ಬರು.
ಈ ಬಾರಿ ಜನರ ದಿನನಿತ್ಯದ ಸಮಸ್ಯೆಗಳನ್ನು ಮುಂದಿಟ್ಟು ವಿಪಕ್ಷಗಳು ಒಳ್ಳೆಯ ಹೋರಾಟ ನೀಡಿದವು ಎಂದು ಹೇಳುವ ಮೌಲಾನಾ ಮುಹೀಬುಲ್ಲ " ನಾವು ಎಷ್ಟು ಸಂಸದರಿದ್ದೀವಿ ಎಂಬುದು ಮುಖ್ಯವಲ್ಲ, ಇರುವ ಸಂಸದರು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡ್ತೀವಿ ಅನ್ನೋದು ಮುಖ್ಯ. ಒಬ್ಬೇ ಒಬ್ಬ ಸಂಸದನಿದ್ದರೂ ಆತ ಸಮುದಾಯಕ್ಕೆ 100% ನಿಷ್ಠನಾಗಿದ್ದರೆ ಇಸ್ಲಾಮಿನ ಬೋಧನೆಗಳನ್ನು, ಮುಸ್ಲಿಮರ ಭಾವನೆಗಳನ್ನು ತಿಳಿದುಕೊಂಡಿದ್ದರೆ ಅವರ ಪ್ರಶ್ನೆಗಳನ್ನು ಸರಿಯಾಗಿ ಸಂಸತ್ತಿನಲ್ಲಿ ಎತ್ತಿದರೆ ಸಾಕಾಗುತ್ತದೆ " ಎಂದಿದ್ದಾರೆ.
ದೇಶದ ಸಂವಿಧಾನ ಎಲ್ಲ ಪ್ರಜೆಗಳಿಗೆ ಕೊಟ್ಟಿರುವ ಹಕ್ಕುಗಳನ್ನು ಮಾತ್ರ ಈ ದೇಶದ ಮುಸಲ್ಮಾನರು ಕೇಳುತ್ತಾರೆ, ಅದಕ್ಕಿಂತ ಹೆಚ್ಚೇನಿಲ್ಲ ಎಂದು ಮೌಲಾನಾ ಮುಹೀಬುಲ್ಲ ನುಡಿದರು.
ರಾಮ್ ಪುರದಿಂದ ಮೌಲಾನಾ ಮುಹೀಬುಲ್ಲ ಎಸ್ಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು ಹಾಗು ತೀರಾ ಕೊನೆ ಗಳಿಗೆಯಲ್ಲಿ ಅವರು ನಾಮಪತ್ರ ಸಲ್ಲಿಸಿದ್ದೇ ಒಂದು ರೋಚಕ ಕತೆ.
ಎಸ್ಪಿ ಹಿರಿಯ ನಾಯಕ ಜೈಲಿನಲ್ಲಿರುವ ಆಝಮ್ ಖಾನ್ ಗೆ ಅವರ ಕುಟುಂಬ ಸದಸ್ಯರಿಗೇ ಟಿಕೆಟ್ ಸಿಗಬೇಕು ಎಂದಿತ್ತು. ಆದರೆ ಪಕ್ಷಕ್ಕೆ ಅದು ಸರಿ ಕಾಣಲಿಲ್ಲ. ಇನ್ನು ರಾಮ್ ಪುರ ಕೂಡ ಈಗ ಕೋಮು ಸೂಕ್ಷ್ಮ ಕ್ಷೇತ್ರವಾಗಿ ಮಾರ್ಪಟ್ಟಿದೆ. ಹಾಗಾಗಿ ಅಳೆದೂ ತೂಗಿ ಅಭ್ಯರ್ಥಿ ಆಯ್ಕೆ ಮಾಡಬೇಕಿತ್ತು.
ತಾವು ಹೇಳಿದವರಿಗೆ ಪಕ್ಷ ಟಿಕೆಟ್ ಕೊಡೋದಿಲ್ಲ ಎಂದು ಗೊತ್ತಾಗಿ ಆಝಮ್ ಖಾನ್ ಬೆಂಬಲಿಗರೊಬ್ಬರು ತಾವೇ ಪಕ್ಷದ ಅಭ್ಯರ್ಥಿ ಎಂದು ಬಿ ಫಾರ್ಮ್ ಬರೋ ಮೊದಲೇ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸೋ ಕೊನೇ ದಿನದವರೆಗೂ ರಾಮ್ ಪುರಕ್ಕೆ ಎಸ್ಪಿ ಅಧಿಕೃತ ಅಭ್ಯರ್ಥಿಯೇ ಅಂತಿಮ ಆಗಿರಲಿಲ್ಲ. ಆದರೆ ಕೊನೆ ಗಳಿಗೆಯಲ್ಲಿ ಮೌಲಾನಾ ಮುಹೀಬುಲ್ಲಗೆ ಅಖಿಲೇಶ್ ಅವರ ಕರೆ ಬಂದಿದೆ. ಚಾರ್ಟರ್ಡ್ ವಿಮಾನದಲ್ಲಿ ಬಿ ಫಾರ್ಮ್ ಬಂದು ತಲುಪಿತು. ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಕೆಯಾಯಿತು.
ಅದೇ ಕೊನೇ ಕ್ಷಣದ ಅಚ್ಚರಿ ಅಭ್ಯರ್ಥಿ ಈಗ ಎಸ್ಪಿ ಸಂಸದರಾಗಿದ್ದಾರೆ. ಜೈಲಿನಲ್ಲಿರುವ ಪಕ್ಷದ ಹಿರಿಯ ಮುಖಂಡ ಆಝಮ್ ಖಾನ್ ರನ್ನು ಭೇಟಿಯಾಗುತ್ತೀರಾ ಎಂದು ಕೇಳಿದ್ದಕ್ಕೆ " ಜೈಲಿನಲ್ಲಿ ವ್ಯಕ್ತಿ ಸುಧಾರಣೆಯಾಗಲು ಹೋಗುತ್ತಾರೆ, ನಾನು ಅವರಿಗಾಗಿ ಪ್ರಾರ್ಥಿಸುತ್ತೇನೆ " ಎಂದು ಅವರು ಹೇಳಿದ್ದಾರೆ.
ಬಿಜೆಪಿ ತೀವ್ರ ಕೋಮುವಾದಿ ಪ್ರಚಾರದ ಮೂಲಕ ಹಿಂದೂ ಮುಸ್ಲಿಂ ಎಂದು ಮತ ವಿಭಜನೆಗೆ ರಾಮ್ ಪುರದಲ್ಲೂ ಪ್ರಯತ್ನಿಸಿತ್ತು. ಜೊತೆಗೆ ಅಲ್ಲಿ ಬಿಎಸ್ಪಿ ಅಭ್ಯರ್ಥಿ 79,000 ಮತ ಗಳಿಸಿದ್ದಾರೆ. ಇನ್ನು ಆದಿತ್ಯ ನಾಥ್ ಸರಕಾರದ ಆಡಳಿತ ಕೂಡ ಇವರಿಗೆ ಸಾಕಷ್ಟು ಅಡೆತಡೆಗಳನ್ನು ಒಡ್ಡಿತ್ತು. ಆದರೆ ಇವೆಲ್ಲ ಸವಾಲುಗಳನ್ನು ಮೆಟ್ಟಿ ನಿಂತು, ಪಕ್ಷದೊಳಗಿನ ಗೊಂದಲಗಳನ್ನೂ ನಿವಾರಿಸಿಕೊಂಡು ಮೌಲಾನಾ ಮುಹೀಬುಲ್ಲ ನದ್ವಿ ಗೆಲುವಿನ ನಗೆ ಬೀರಿದ್ದಾರೆ.
"ನಾನು ಜನರ ಬಳಿ ಧನಾತ್ಮಕ ಸಂದೇಶ ತೆಗೆದುಕೊಂಡು ಹೋದೆ. ಅವರಲ್ಲಿ ಶಿಕ್ಷಣ, ಅರೋಗ್ಯ , ಉದ್ಯೋಗದ ಬಗ್ಗೆ ಮಾತಾಡಿದೆ. ಹಾಗಾಗಿ ಬಿಜೆಪಿಯ ಕೋಮುವಾದಿ ರಾಜಕೀಯ ಸೋತಿತು. ಜನ ಬೇರೆಯವರನ್ನು ದೂರುವವರನ್ನು ತಿರಸ್ಕರಿಸಿ ತಮ್ಮ ಸಮಸ್ಯೆಗಳ ಬಗ್ಗೆ ಮಾತಾಡುವ, ಅದರ ನಿವಾರಣೆಗಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡಿದರು. ಕ್ಷೇತ್ರದ ಹಿಂದೂಗಳೂ ನನಗೆ ಮತ ಹಾಕಿದ್ದಾರೆ. ಕೆಲವೆಡೆ ಮತದಾನಕ್ಕೆ ತಡೆಯೊಡ್ಡಲಾಗಿತ್ತು. ಇಲ್ಲದಿದ್ದರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ನಾನು ಗೆಲ್ಲುತ್ತಿದ್ದೆ ಎಂದು ಮೌಲಾನಾ ಮುಹೀಬುಲ್ಲ ಹೇಳಿದರು.
ರಾಮ್ ಪುರದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಅವರು ಕುರ್ ಆನ್ ಕಂಠಪಾಠ ಮಾಡಿ ಬಳಿಕ ವಿಶ್ವ ವಿಖ್ಯಾತ ದಾರುಲ್ ಉಲೂಮ್ ನದ್ವತುಲ್ ಉಲಮಾದಲ್ಲಿ ನದ್ವಿ ಪದವಿ ಪಡೆದರು. ಬಳಿಕ ಜಾಮಿಯಾ ಮಿಲ್ಲಿಯ ಇಸ್ಲಾಮಿಯಾದಲ್ಲಿ ಉನ್ನತ ಅಧ್ಯಯನಕ್ಕೆ ಸೇರಿದರು. ನಂತರ ಇಸ್ಲಾಮಿಕ್ ಸ್ಟಡೀಸ್ ನಲ್ಲಿ ಎಂ ಎ ಹಾಗು ಬಿ ಎಡ್ ಪದವಿಗಳನ್ನು ಪಡೆದಿದ್ದಾರೆ.
ಪಾರ್ಲಿಮೆಂಟ್ ಸ್ಟ್ರೀಟ್ ಮಸೀದಿಯಲ್ಲಿ ಇಮಾಮ್ ಆಗಿದ್ದಾಗ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸಹಿತ ಘಟಾನುಘಟಿ ಮುಸ್ಲಿಂ ನಾಯಕರು, ಸಂಸದರು, ಸಚಿವರು ಮೌಲಾನಾ ಮುಹೀಬುಲ್ಲ ಅವರ ನೇತೃತ್ವದಲ್ಲಿ ನಮಾಝ್ ಮಾಡಿದ್ದಾರೆ. ಈಗ ಅದೇ ಮೌಲಾನಾ ಪಾರ್ಲಿಮೆಂಟ್ ಗೆ ಅದರ ಸದಸ್ಯರಾಗಿ ಹೋಗುತ್ತಿದ್ದಾರೆ.
ಕೃಪೆ: thewire.in