ಚುನಾವಣಾ ಕಾವಿನ ನಡುವೆ ಕೆಂಡವಾದ ರಾಷ್ಟ್ರ ರಾಜಧಾನಿ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಚುನಾವಣಾ ಕಾವು ಏರುತ್ತಿರುವ ನಡುವೆಯೇ ಸುಡು ಬಿಸಿಲಿನಿಂದ ಜನತೆ ಕಂಗಾಲಾಗಿದ್ದಾರೆ. ರಾಜಧಾನಿ ಪ್ರದೇಶದ ಒಂಬತ್ತು ಮಾಪನಾ ಕೇಂದ್ರಗಳಲ್ಲಿ ದಾಖಲಾದ ತಾಪಮಾನ ಸರಾಸರಿ 45 ಡಿಗ್ರಿ ಸೆಲ್ಷಿಯಸ್ ಆಗಿದ್ದು, ನೈರುತ್ಯ ದೆಹಲಿಯ ನಜಾಫ್ ಗಢದಲ್ಲಿ ಅತ್ಯಧಿಕ ಅಂದರೆ 47.4 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಇದು ದೇಶದಲ್ಲೇ ಪ್ರಸಕ್ತ ಋತುವಿನಲ್ಲಿ ದಾಖಲಾದ ಅತ್ಯಧಿಕ ಉಷ್ಣಾಂಶ ಎಂದು ಹವಾಮಾನ ಇಲಾಖೆ ಹೇಳಿದೆ. ದೆಹಲಿ ಎನ್ ಸಿಆರ್ ಪ್ರದೇಶದಲ್ಲಿ ಉಷ್ಣ ಮಾರುತದ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ಈ ಪ್ರದೇಶದ ಜನತೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ವಾರಾಂತ್ಯದಲ್ಲಿ ತಾಪಮಾನ ಇನ್ನೂ ಒಂದು ಡಿಗ್ರಿಯಷ್ಟು ಹೆಚ್ಚಲಿದೆ ಎಂದು ಮುನ್ಸೂಚನೆ ನೀಡಿದೆ. ಈ ದಿನಗಳಲ್ಲಿ ಸುಡುಬಿಸಿಲಿಗೆ ತೀರಾ ಅಗತ್ಯವಿದ್ದಲ್ಲಿ ಮಾತ್ರ ಮನೆಗಳಿಂದ ಹೊರಬರುವಂತೆ ಸೂಚನೆ ನೀಡಿದೆ.
ಬಿರು ಬೇಸಿಗೆಯ ಜತೆಗೆ ಒಣ ಪೂರ್ವಾಭಿಮುಖ ಮಾರುತ ಗಂಟೆಗೆ 10 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದ್ದು, ಶುಭ್ರ ಆಕಾಶ ಮತ್ತು ನೇರ ಸೂರ್ಯಕಿರಣಗಳು ಪಾದರಸ ಮಟ್ಟ ಕ್ಷಿಪ್ರವಾಗಿ ಮೇಲೇರಲು ಕಾರಣವಾಗಿದೆ.
ದೆಹಲಿ ಹವಾಮಾನದ ಪ್ರಾತಿನಿಧಿಕ ಕೇಂದ್ರ ಎನಿಸಿದ ಸಫ್ದರ್ ಜಂಗ್ ನಲ್ಲಿ 43.6 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಇದು ವಾಡಿಕೆಗಿಂತ 3 ಡಿಗ್ರಿಯಷ್ಟು ಅಧಿಕ ಹಾಗೂ ಈ ವರ್ಷದ ಅತ್ಯಧಿಕ ತಾಪಮಾನವಾಗಿದೆ. ಇದಕ್ಕೂ ಮುನ್ನ ಒಂದು ದಿನ ಮೊದಲು 42.5 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿತ್ತು.
ದೆಹಲಿಯ ಎಂಟು ಹಾಗೂ ಎನ್ ಸಿಆರ್ ಪ್ರದೇಶದ ಒಂದು ಹವಾಮಾನ ಕೇಂದ್ರಗಳ ಪೈಕಿ ನೋಯ್ಡಾದಲ್ಲಿ ಅತ್ಯಧಿಕ ಅಂದರೆ 45.2 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ನಜಾಫ್ ಗಢ ಬಳಿಕ ಎನ್ ಸಿಆರ್ ಪ್ರದೇಶದಲ್ಲಿ ಗರಿಷ್ಠ ಅಂದರೆ 46.5 ಡಿಗ್ರಿ ಸೆಲ್ಷಿಯಸ್ ನೈರುತ್ಯ ದೆಹಲಿಯ ಮಂಗೇಶ್ ಪುರದಲ್ಲಿ ದಾಖಲಾಗಿದ್ದು, ಐಯ್ಯಾನಗರದಲ್ಲಿ 46.2 ಡಿಗ್ರಿ, ಗುರುಗ್ರಾಮದಲ್ಲಿ 44.6 ಡಿಗ್ರಿ ತಾಪಮಾನ ಇತ್ತು.