ಎನ್‍ಸಿಸಿ ವಿದ್ಯಾರ್ಥಿಗಳಿಗೆ ದೊಣ್ಣೆಯಿಂದ ಹೊಡೆದ ಹಿರಿಯ ಕೆಡೆಟ್; ವೀಡಿಯೋ ವೈರಲ್
ಮುಂಬೈ: ಎನ್‍ಸಿಸಿ ವಿದ್ಯಾರ್ಥಿಗಳಿಗೆ ಥಾಣೆ ಮೂಲದ ಕೆ.ಜಿ.ಜೋಶಿ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಎನ್.ಜಿ.ಬೇಡೇಕರ್ ಕಾಲೇಜ್ ಆಫ್ ಕಾಮರ್ಸ್ ಆವರಣದಲ್ಲಿ ದೊಣ್ಣೆಯಿಂದ ನಿರ್ದಯವಾಗಿ ಹೊಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಅಸಮಾಧಾನಗೊಳಿಸಿದೆ.
18 ರಿಂದ 20 ವರ್ಷ ವಯಸ್ಸಿನ ಎಂಟರಿಂದ ಹತ್ತು ಮಂದಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಹಿರಿಯ ಕೆಡೆಟ್ ಬೋಧಿಸುತ್ತಿರುವುದು ವೀಡಿಯೊದಲ್ಲಿ ಕಾಣಿಸುತ್ತಿದೆ. ಹಿರಿಯ ಎನ್‍ಸಿಸಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಹಿರಿಯ ಕೆಡೆಟ್‍ಗೆ ಉಸ್ತುವಾರಿ ನೀಡಿರುವ ಸಾಧ್ಯತೆ ಇದೆ. ಈ ವ್ಯಾಯಾಮವನ್ನು ಸರಿಯಾಗಿ ಮಾಡಲು ಸಾಧ್ಯವಾಗದ ಕಿರಿಯ ಕೆಡೆಟ್‍ಗಳಿಗೆ ದೊಣ್ಣೆಯಿಂದ ಹೊಡೆಯುತ್ತಿರುವುದು ಕಂಡುಬರುತ್ತಿದೆ.
ದೊಣ್ಣೆಯಿಂದ ಹೊಡೆಯುತ್ತಿರುವ ಹಿರಿಯ ಕೆಡೆಟ್ ಬಂದೋಡ್ಕರ್ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಈತನ ವಿರುದ್ಧ ಶಿಸ್ತು ಹಾಗೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಾಚಾರ್ಯೆ ಸುಚಿತ್ರಾ ನಾಯಕ್ ಪ್ರತಿಕ್ರಿಯಿಸಿದ್ದಾರೆ.
"ನಾನು ಕೂಡಾ ಎನ್‍ಸಿಸಿಯಲ್ಲಿದ್ದೆ. ಆದರೆ ಎಂದೂ ಇಂಥ ಕ್ರೂರ ಶಿಕ್ಷೆ ಎದುರಿಸಿಲ್ಲ. ಹಿರಿಯ ಕೆಡೆಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಲೇಜು ಆಡಳಿತ ಮಂಡಳಿಯನ್ನು ಒತ್ತಾಯಿಸಲಾಗಿದೆ" ಎಂದು ಯುವಸೇನಾ ಮುಖಂಡ ಹಾಗೂ ಮುಂಬೈ ವಿವಿ ಹಿರಿಯ ಸೆನೆಟ್ ಸದಸ್ಯ ಪ್ರದೀಪ್ ಸಾವಂತ್ ಹೇಳಿದ್ದಾರೆ. ಈ ಬಗ್ಗೆ ಕುಲಪತಿಗಳಿಗೂ ಪತ್ರ ಬರೆದು ಹಿರಿಯ ಕೆಡೆಟ್ ಮತ್ತು ಪ್ರಾಧ್ಯಾಪಕರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.