ಈ ಬಜೆಟ್ ಆರ್ಥಿಕ ದಾಖಲೆ ಅಲ್ಲ, ಇದು ಎರಡು ರಾಜ್ಯಗಳಿಗೆ ಬರೆದ ಲವ್ ಲೆಟರ್ : ಸಂಸದ ಸಸಿಕಾಂತ್‌ ಸೆಂಥಿಲ್

Update: 2024-07-26 13:57 GMT

ಸಸಿಕಾಂತ್‌ ಸೆಂಥಿಲ್‌ | PTI  

ಹೊಸದಿಲ್ಲಿ : ಈ ಬಜೆಟ್ ಆರ್ಥಿಕ ದಾಖಲೆ ಅಲ್ಲ, ಇದು ಎರಡು ರಾಜ್ಯಗಳಿಗೆ ಬರೆದ ಲವ್ ಲೆಟರ್ ನಂತೆ ಇದೆ. ಬೇರೆ ರಾಜ್ಯಗಳನ್ನು ದತ್ತು ಮಕ್ಕಳಂತೆ ನೋಡುತ್ತದೆ ಎಂದು ಕಾಂಗ್ರೆಸ್‌ ಸಂಸದ ಸಸಿಕಾಂತ್‌ ಸೆಂಥಿಲ್‌ ಹೇಳಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ಬಜೆಟ್‌ ಚರ್ಚೆಯ ವೇಳೆ ಮಾತನಾಡಿದ ಅವರು, “ವಿತ್ತ ಸಚಿವೆ ಮಂಡಿಸಿರುವ ಬಜೆಟ್ ಅಬ್ಬರದ ಪ್ರಚಾರ ಪಡೆದ ಬಾಲಿವುಡ್ ಬ್ಲಾಕ್ ಬಸ್ಟರ್ ಚಿತ್ರದ ಹಾಗೆ. ಇದರೊಳಗೆ ಬರೀ ಇಫೆಕ್ಟ್‌ ಗಳು ತುಂಬಿವೆ. ನಿಜವಾದ ಕತೆ ಇಲ್ಲವೇ ಇಲ್ಲ. ಇದು ಬಾಲಿಶ ಬಾಲ ಬುದ್ಧಿಯ ಬಜೆಟ್. ನಿಮ್ಮ ಫ್ಯಾಶಿಸಂ ಅನ್ನು ನಾವು ತಮಿಳುನಾಡಿನವರು ಪ್ರತಿಯೊಂದು ರೀತಿಯಿಂದಲೂ ವಿರೋಧಿಸುತ್ತೇವೆ” ಎಂದು ತಿರುವಳ್ಳೂರು ಕ್ಷೇತ್ರದ ಸಂಸದ ಸಸಿಕಾಂತ್ ಸೆಂಥಿಲ್‌ ಕೇಂದ್ರ ಸರಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ಮೊದಲ ಬಾರಿಯ ಸಂಸದರಿಗೆ ಮಾತಾಡಲು ಹೆಚ್ಚು ಸಮಯ ಸಿಗುವುದಿಲ್ಲ. ಆದರೂ “ಇದು ನನ್ನ ಪ್ರಪ್ರಥಮ ಸಂಸತ್ ಭಾಷಣ, ಸ್ವಲ್ಪ ಸಮಯ ಕೊಡಿ " ಎಂದು ವಿನಂತಿಸಿದ ಸೆಂಥಿಲ್, ಮೋದಿ ಸರಕಾರದ ಬಜೆಟ್ ಅನ್ನು ತನಗೆ ಸಿಕ್ಕಿದ ಸ್ವಲ್ಪ ಸಮಯದಲ್ಲೇ ಹಿಗ್ಗಾಮುಗ್ಗಾ ಟೀಕಿಸಿದರು. “ಸರಕಾರಮಂಡಿಸಿರುವ ಬಜೆಟ್ ಆರ್ಥಿಕ ದಾಖಲೆ ಕಡಿಮೆಯಾಗಿದೆ ಮತ್ತು ಅಧಿಕಾರ ಉಳಿಸಿಕೊಳ್ಳುವ ಹತಾಶ ಪ್ರಯತ್ನ ಹೆಚ್ಚಾಗಿದೆ. ಈ ಬಜೆಟ್ ನೀತಿಗಳ ಮೇಲೆ ಹೆಚ್ಚು ಮಾತಾಡದೆ, ಮೈತ್ರಿ ಸರಕಾರವನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದೆ ಮತ್ತು ಫಲಿತಾಂಶಗಳಿಗಿಂತ ದೂರ ಇದೆ” ಎಂದು ಸೆಂಥಿಲ್ ಹೇಳಿದ್ದಾರೆ.

“2015ರಲ್ಲಿ ಬಿಹಾರಕ್ಕೆ ಘೋಷಿಸಲಾಗಿದ್ದ ಒಂದು ಲಕ್ಷ ಇಪ್ಪತ್ತ ಐದು ಸಾವಿರ ಕೋಟಿ ರೂಪಾಯಿ ಎಲ್ಲಿ ಹೋಗಿದೆ ಎಂಬುದರ ಕುರಿತಾಗಿ ಯಾರಿಗೂ ಗೊತ್ತಿಲ್ಲ. ಭಾರತದ ಆರ್ಥಿಕತೆಯು ಬಳಕೆಯ ಮೇಲೆ ಅವಲಿಂಬತವಾಗಿದೆ. ಹೀಗಿರುವಾಗ ಬೇಡಿಕೆ ಹೆಚ್ಚಿಸಲು ನಾವು ಬಜೆಟ್ ನಲ್ಲಿ ಪ್ರಯತ್ನಿಸ ಬೇಕಿತ್ತು. ಯುಪಿಎ ಅವಧಿಯಲ್ಲಿ ನೇರ ತೆರಿಗೆಯ 66.6% ಕಾರ್ಪೊರೇಟ್ ಗಳಿಂದ ಬರುತ್ತಿತ್ತು. ಆದರೆ ಈಗ ಅದು ಕೇವಲ 47%ಕ್ಕೆ ಬಂದು ನಿಂತಿದೆ. ಅಂದರೆ ನೇರ ತೆರಿಗೆಯ 53 ಶೇಕಡದಷ್ಟು ತೆರಿಗೆಯನ್ನು ಜನಸಾಮಾನ್ಯರು ಪಾವತಿಸುತ್ತಿದ್ದಾರೆ” ಎಂದು ಸೆಂಥಿಲ್ ಸಂಸತ್ತಿನ ಗಮನ ಸೆಳೆದರು.

“ಜನರ ಕೈಯಲ್ಲಿ ಹಣ ಕೊಡದೆ ಇದ್ದರೆ ಬೇಡಿಕೆ ಹೇಗೆ ಹೆಚ್ಚಾಗುವುದು. ಬೇಡಿಕೆ ಹೆಚ್ಚಾಗದಿದ್ದರೆ ಆರ್ಥಿಕ ವ್ಯವಸ್ಥೆ ಹೇಗೆ ಸುಧಾರಿಸಿಕೊಳ್ಳುವುದು” ಎಂದು ಸೆಂಥಿಲ್ ಪ್ರಶ್ನಿಸಿದರು.

“ಈ ಬಾರಿ ಬಜೆಟ್ ಕೇವಲ ಮಾತಿನ ಪರ್ವತವಾಗಿದೆ. ಸ್ಟ್ಯಾಂಡಪ್ ಇಂಡಿಯಾ ಸ್ಲೀಪ್ ಇಂಡಿಯಾ ಸಿಟ್ ಇಂಡಿಯಾ ಈ ರೀತಿ ಪದಗಳಿಂದ ನಮ್ಮನ್ನು ಬಚಾವ್ ಮಾಡಿದ್ದಕ್ಕೆ ನಾನು ವಿತ್ತ ಸಚಿವರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದು ಸೆಂಥಿಲ್ ವ್ಯಂಗ್ಯವಾಡಿದ್ದಾರೆ.

ಕೃಷಿ ವ್ಯವಸ್ಥೆಯನ್ನು ಕೇವಲ ಹೊಸ ಬೀಜಗಳಿಂದ ಪರಿಹರಿಸಿಕೊಳ್ಳಬಹುದು ಎಂಬ ಸರಕಾರದ ಚಿಂತನೆಯನ್ನು ಪ್ರಶ್ನಿಸಿದ ಸೆಂಥಿಲ್, ಕಡಿಮೆ ಕನಿಷ್ಠ ಬೆಲೆ ಅಂತಹ ಹಲವಾರು ಸಮಸ್ಯೆಗಳಿಂದ ರೈತರು ಬಳಲುತ್ತಿದ್ದಾರೆ ಎಂದು ಸಂಸತ್ತಿಗೆ ನೆನಪಿಸಿದರು.ಎನ್‌ ಸಿ ಆರ್‌ ಬಿ ಡೇಟಾ ಪ್ರಕಾರ ಒಂದು ಗಂಟೆಗೆ ಒಂದು ರೈತ ಮತ್ತು ಒಂದು ಕಾರ್ಮಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬ ದುಃಖಕರ ಅಂಕಿ ಅಂಶವನ್ನು ಸೆಂಥಿಲ್ ಸಂಸತ್ತಿನ ಮುಂದಿಟ್ಟರು.

ನಿರುದ್ಯೋಗ ಸಮಸ್ಯೆ ಕುರಿತು ಮಾತನಾಡುತ್ತಾ ಹೊಸ ಇನ್ಸೆಂಟಿವ್ ಸ್ಕೀಮ್ ಮದುವೆ ಸಮಾರಂಭದಲ್ಲಿ ಊಟದ ಬದಲಿಗೆ ಕೇವಲ ಒಂದು ಸಮೋಸ ಕೊಟ್ಟ ಹಾಗೆ ಎಂದು ಸೆಂಥಿಲ್ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

Full View

ಹೆಚ್ಚುತ್ತಿರುವ ನಿರುದ್ಯೋಗ ಕುರಿತು ನೀವು ಏನು ಮಾಡುತ್ತೀರಿ? ನಮ್ಮ ದೇಶದಲ್ಲಿ ಬೆಳೆಯುತ್ತಿದ್ದ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳನ್ನು ನೀವು ನಾಶ ಮಾಡಿದ್ದೀರಿ ಎಂದು ಸೆಂಥಿಲ್ ಹೇಳಿದ್ದಾರೆ.

ದೇಶದಲ್ಲಿ ಮೂಲಸೌಕರ್ಯದ ಯೋಜನೆ ಗಳೆಲ್ಲವೂ ಹಣವಿಲ್ಲದ ಕಾರಣದಿಂದಾಗಿ ತಡವಾಗಿ, ಬಳಿಕ ನಿಂತುಹೋಗಿದೆ. ಬಿಹಾರ ಮತ್ತು ಆಂಧ್ರಪ್ರದೇಶದಲ್ಲಿ ಮೂಲಸೌಕರ್ಯದ ಯೋಜನೆಗಳ ಭರವಸೆ ನೀಡುತ್ತಿರುವಾಗ ಅಲ್ಲೂ ಇದೇ ಆಗಲಿರುವುದು ಎಂದು ಅವರಿಗೆ ತಿಳಿದಿರಲಿ ಎಂದು ಸೆಂಥಿಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News