ಬೀಜಿಂಗ್ ನಗರವನ್ನು ಹಿಂದಿಕ್ಕಿದ ಮುಂಬೈ ಈಗ ಏಷ್ಯಾದ ಕುಬೇರರ ರಾಜಧಾನಿ

Update: 2024-03-26 06:19 GMT

Photo: PTI

ಮುಂಬೈ: ಭಾರತದ ವಾಣಿಜ್ಯ ರಾಜಧಾನಿ ಎನಿಸಿದ ಮುಂಬೈ ಇದೀಗ ಏಷ್ಯಾದಲ್ಲೇ ಅತಿಹೆಚ್ಚು ಶತಕೋಟ್ಯಧಿಪತಿ ಉದ್ಯಮಿಗಳನ್ನು ಹೊಂದಿದ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 16 ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣದ ಬೀಜಿಂಗ್ ಮಹಾನಗರವನ್ನು ಹಿಂದಿಕ್ಕಿದ 603 ಚದರ ಕಿಲೋಮೀಟರ್ ವಿಸ್ತೀರ್ಣದ ಮುಂಬೈ, ವಿಶ್ವದಲ್ಲೇ ಅತಿಹೆಚ್ಚು ಶತಕೋಟ್ಯಧಿಪತಿಗಳನ್ನು ಹೊಂದಿದ ನಗರವಾಗಿ ಹೊರಹೊಮ್ಮಿದೆ.

ಚೀನಾದಲ್ಲಿ ಒಟ್ಟು 814 ಮಂದಿ ಶತಕೋಟ್ಯಧಿಪತಿಗಳಿದ್ದರೆ, ಭಾರತದಲ್ಲಿ ಈ ಸಂಖ್ಯೆ 271. ಆದರೆ ಬೀಜಿಂಗ್ ನಗರದಲ್ಲಿ 91 ಮಂದಿ ಕುಬೇರರು ಇದ್ದರೆ, ಮುಂಬೈನಲ್ಲಿ 92 ಮಂದಿ ಇದ್ದಾರೆ. ಹರೂನ್ ರಿಸರ್ಚ್ ಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ಶ್ರೀಮಂತರ ಪಟ್ಟಿ-2024ರಲ್ಲಿ ಈ ಅಂಕಿ ಅಂಶಗಳಿವೆ. ಜಾಗತಿಕವಾಗಿ ನ್ಯೂಯಾರ್ಕ್ (119) ಮತ್ತು ಲಂಡನ್ (97) ಹೊರತುಪಡಿಸಿದರೆ ವಿಶ್ವದಲ್ಲೇ ಅತಿಹೆಚ್ಚು ಶ್ರೀಮಂತರನ್ನು ಹೊಂದಿದ ನಗರವಾಗಿ ಮುಂಬೈ ಮಾರ್ಪಟ್ಟಿದೆ.

ಚೀನಾದ ರಾಜಕೀಯ ಮತ್ತು ಸಾಂಸ್ಕೃತಿಕ ರಾಜಧಾನಿಯನ್ನು ಹಿಂದಿಕ್ಕುವ ನಿಟ್ಟಿನಲ್ಲಿ ಮುಂಬೈ ಮಹಾನಗರದಲ್ಲಿ ಈ ವರ್ಷ 26 ಮಂದಿ ಹೊಸ ಶ್ರೀಮಂತರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಆದರೆ ನಿವ್ವಳ ಸಂಪತ್ತಿನ ಆಧಾರದಲ್ಲಿ ಬೀಜಿಂಗ್ ನ 18 ಮಂದಿ ಶತಕೋಟ್ಯಧಿಪತಿಗಳ ಪಟ್ಟಿಯಿಂದ ಸ್ಥಾನ ಕಳೆದುಕೊಂಡಿದ್ದಾರೆ. ಶಾಂಘೈ (87), ಶೆನ್ಝೆನ್ (84) ಮತ್ತು ಹಾಂಕಾಂಗ್ (65) ಮುಂದಿನ ಸ್ಥಾನಗಳಲ್ಲಿವೆ.

ಮುಂಬೈನ ಶತಕೋಟ್ಯಧಿಪತಿಗಳ ಪಟ್ಟು ಸಂಪತ್ತು 445 ಶತಕೋಟಿ ಡಾಲರ್ ಆಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 47ರಷ್ಟು ಅಧಿಕ. ಬೀಜಿಂಗ್ ನ ಒಟ್ಟು ಶತಕೋಟ್ಯಧಿಪತಿಗಳ ಸಂಪತ್ತು 265 ಶತಕೋಟಿ ಡಾಲರ್ ಇದೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News