ಚಂದ್ರಯಾನ-3 ಯಶಸ್ಸಿನಲ್ಲಿ ಜಾಮಿಯಾ ಮಿಲ್ಲಿಯಾದ ಮೂವರು ಹಳೆಯ ವಿದ್ಯಾರ್ಥಿಗಳ ಪಾತ್ರ
ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹಮ್ಮಿಕೊಂಡಿದ್ದ ಭಾರತದ ಐತಿಹಾಸಿಕ ಚಂದ್ರಯಾನ-3 ಯೋಜನೆಯ ಯಶಸ್ಸಿನಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಮೂವರು ಹಳೆಯ ವಿದ್ಯಾರ್ಥಿಗಳು ಗಮನಾರ್ಹ ಪಾತ್ರ ನಿರ್ವಹಿಸಿದ್ದಾರೆ.
ಈ ಸ್ಮರಣೀಯ ಸಾಧನೆಯಲ್ಲಿ ಭಾಗಿಯಾಗಿದ್ದ ತಂಡದಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಅಮಿತ್ ಕುಮಾರ್ ಭಾರದ್ವಾಜ್, ಮುಹಮ್ಮದ್ ಕಾಶಿಫ್ ಹಾಗೂ ಅರೀಬ್ ಅಹ್ಮದ್ ಕೂಡಾ ಸದಸ್ಯರಾಗಿದ್ದರು.
ತಮ್ಮ ವಿಶ‍್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಕೊಡುಗೆಯಿಂದ ಸಂತಸಗೊಂಡಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು, ಈ ಸಾಧನೆಯು ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ ಹೆಮ್ಮೆ ಮೂಡಿಸಿದೆ ಎಂದು ಹೇಳಿದೆ. “ಈ ಐತಿಹಾಸಿಕ ಯಶಸ್ಸಿನೊಂದಿಗೆ ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಗಗನ ನೌಕೆಯನ್ನು ಇಳಿಸಿದ ಪ್ರಥಮ ದೇಶವಾಗಿ ಹೊರಹೊಮ್ಮಿದೆ” ಎಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಶ್ಲಾಘಿಸಿದೆ.
ಅಮಿತ್ ಕುಮಾರ್ ಭಾರದ್ವಾಜ್, ಮುಹಮ್ಮದ್ ಕಾಶಿಫ್ ಹಾಗೂ ಅರೀಬ್ ಅಹ್ಮದ್ ಎಲ್ಲರೂ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಶಾಖೆಯ ವಿದ್ಯಾರ್ಥಿಗಳಾಗಿದ್ದರು. ಅವರೆಲ್ಲ 2019ರ ಶೈಕ್ಷಣಿಕ ವರ್ಷದಲ್ಲಿ ತಮ್ಮ ಬಿ.ಟೆಕ್ ಪದವಿಯನ್ನು ಪೂರೈಸಿದ್ದರು.
ಅಮಿತ್, ಕಾಶಿಫ್ ಹಾಗೂ ಅರೀಬ್ ಅವರು ವಿಜ್ಞಾನಿ/ಇಂಜಿನಿಯರ್ ಹುದ್ದೆಗೆ ನಡೆದಿದ್ದ 2019ರ ಇಸ್ರೊ ಕೇಂದ್ರೀಕೃತ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದರು. ಈ ಪರೀಕ್ಷೆಯ ಫಲಿತಾಂಶವನ್ನು 2021ರಲ್ಲಿ ಇಸ್ರೊ ಪ್ರಕಟಿಸಿತ್ತು. ಈ ಫಲಿತಾಂಶದಲ್ಲಿ ಕಾಶಿಫ್ ಮೊದಲ ಶ‍್ರೇಯಾಂಕದಲ್ಲಿ ತೇರ್ಗಡೆಯಾಗಿದ್ದರು. ಈ ಎಲ್ಲ ಮೂವರೂ ‘ಎಸ್‍ಸಿ'-ಮೆಕಾನಿಕಲ್ ವಿಭಾಗದ ವಿಜ್ಞಾನಿ/ಎಂಜಿನಿಯರ್ ಹುದ್ದೆಗೆ ಆಯ್ಕೆಯಾಗಿದ್ದರು. (ಹುದ್ದೆ ಸಂಖ್ಯೆ: BE002) ಎಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಬಹಿರಂಗಪಡಿಸಿದೆ.