ಪಶ್ಚಿಮ ಬಂಗಾಳದ ಎಲ್ಲ 42 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಟಿಎಂಸಿ: ಮತ್ತೆ ಕಣಕ್ಕಿಳಿಯಲಿರುವ ಮಹುವಾ ಮೊಯಿತ್ರಾ
ಕೋಲ್ಕತ್ತಾ: ರವಿವಾರ ಪಶ್ಚಿಮ ಬಂಗಾಳದ ಎಲ್ಲ 42 ಲೋಕಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಕೃಷ್ಣಾನಗರ ಕ್ಷೇತ್ರದಿಂದ ಮತ್ತೆ ಮಹುವಾ ಮೊಯಿತ್ರಾ ಅವರನ್ನೇ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.
ಅಲ್ಲದೆ ಅಚ್ಚರಿಯ ಆಯ್ಕೆಯಾಗಿ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರೂ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಅವರು ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಮೈತ್ರಿಕೂಟದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತ ಎಲ್ಲ ವದಂತಿಗಳಿಗೆ ತೆರೆ ಎಳೆದಿರುವ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಪಕ್ಷವು ಉತ್ತರ ಪ್ರದೇಶದ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದೂ ಹೇಳಿದ್ದಾರೆ.
ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ 'ಜನ ಗರ್ಜನ್ ಸಭಾ'ದಲ್ಲಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು. ಸಮಾವೇಶದಲ್ಲಿ ಲಕ್ಷಾಂತರ ಬೆಂಬಲಿಗರು ಹಾಗೂ ಅಸಂಖ್ಯಾತ ಬ್ಲಾಕ್ ಮಟ್ಟದ ನಾಯಕರು ಭಾಗವಹಿಸಿದ್ದರು.