ಕೇರಳದಲ್ಲಿ ಉಷ್ಣಮಾರುತ ಸಾಧ್ಯತೆ | ಮೂರು ಜಿಲ್ಲೆಗಳಲ್ಲಿ ಯಲ್ಲೋ ಆಲರ್ಟ್ ಘೋಷಣೆ
ತಿರುವನಂತಪುರ : ಉಷ್ಣಮಾರುತ ಸಾಧ್ಯತೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಬುಧವಾರ ತಿರುವನಂತಪುರ, ಅಲಪ್ಪುಳ ಹಾಗೂ ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಮೇ 9ರವರೆಗೆ ಯಲ್ಲೋ ಅಲರ್ಟ್ ಘೋಷಿಸಿದೆ.
ಕೊಲ್ಲಂ, ಪಾಲಕ್ಕಾಡ್ ಹಾಗೂ ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಂಟಿಗ್ರೇಡ್‌ಗಳಾಗಿದ್ದರೆ, ತಿರುವನಂತಪುರ, ಅಲಪ್ಪುಳ, ಎರ್ನಾಕುಲಂ ಹಾಗೂ ತ್ರಿಶೂರುಗಳಲ್ಲಿ 38 ಡಿಗ್ರಿ ಸೆಲ್ಸಿಯಸ್, ಕೊಟ್ಟಾಯಂ, ಪತ್ತನಂತಿಟ್ಟ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿನಲ್ಲಿ 37 ಡಿಗ್ರಿ ಸೆಲ್ಸಿಯಸ್, ಮಲಪ್ಪುರಂ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದಾಗಿ ಐಎಂಡಿ ತಿಳಿಸಿದೆ.
ಈ ತಾಪಮಾನವು ವರ್ಷದ ಇದೇ ಸಮಯದಲ್ಲಿ ವಾಡಿಕೆಯಲ್ಲಿರುವುದಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಅಧಿಕವೆಂದು ಅದು ಹೇಳಿದೆ.
ಬೆಟ್ಟ ಪ್ರದೇಶಗಳನ್ನು ಹೊರತುಪಡಿಸಿ ಈ ಎಲ್ಲಾ ಜಿಲ್ಲೆಗಳಲ್ಲಿ ಬಿಸಿ ಹಾಗೂ ತೇವಾಂಶದ ವಾತಾವರಣವಿರುವ ಸಾಧ್ಯತೆಯಿದೆಯೆಂದು ಐಎಂಡಿ ಪ್ರಕಟಣೆ ತಿಳಿಸಿದೆ.