ಮಹಿಳಾ ಪೊಲೀಸ್ ಹತ್ಯೆ ಆರೋಪ: ಎರಡು ವರ್ಷಗಳ ಬಳಿಕ ದೆಹಲಿ ಪೊಲೀಸ್ ಮುಖ್ಯಪೇದೆಯ ಬಂಧನ

Update: 2023-10-02 06:06 GMT

ಹೊಸದಿಲ್ಲಿ: ಹಲವು ತಿಂಗಳಿಂದ ತಾನು ಹಿಂಬಾಲಿಸುತ್ತಿದ್ದ ಸಹೋದ್ಯೋಗಿ ಮಹಿಳೆಯನ್ನು ಉಸಿರುಗಟ್ಟಿಸಿ ಕೊಂದು, ಜೌಗುಹೊಂಡದಲ್ಲಿ ಮೃತದೇಹವನ್ನು ಹೂತು ಹಾಕಿದ ಆರೋಪದಲ್ಲಿ ಎರಡು ವರ್ಷಗಳಗಳ ಬಳಿಕ ದೆಹಲಿ ಪೊಲೀಸ್ ಮುಖ್ಯಪೇದೆಯನ್ನು ಬಂಧಿಸಲಾಗಿದೆ.

2021ರಲ್ಲಿ ಈ ಘಟನೆ ನಡೆದಿದ್ದು, ಮುಂದಿನ 18 ತಿಂಗಳ ಕಾಲ ಮಹಿಳೆಯ ಧ್ವನಿ ಸಂದೇಶವನ್ನು ಬಳಸಿಕೊಂಡು, ಆಕೆ ಜೀವಂತ ಇದ್ದಾಳೆ ಎಂದು ಆಕೆಯ ಕುಟುಂಬದವರನ್ನು ನಂಬಿಸುತ್ತಾ ಬಂದಿದ್ದ ಎಂದು ಆಪಾದಿಸಲಾಗಿದೆ. ಕುಟುಂಬದವರನ್ನು ವಂಚಿಸಲು ಸುಳ್ಳಿನ ಜಾಲ ಹೆಣೆದಿರುವುದು ಇದೀಗ ಬೆಳಕಿಗೆ ಬಂದಿದೆ.

ಮೃತ ಮಹಿಳಾ ಪೊಲೀಸ್ನ ಸಹೋದರಿಯ ನಿರಂತರ ಪ್ರಯತ್ನದಿಂದಾಗಿ ಎರಡು ವರ್ಷಗಳಿಂದ ಕಟ್ಟುಕಥೆಗಳ ಮೂಲಕ ಎಲ್ಲರನ್ನೂ ನಂಬಿಸಿದ್ದ ಈತನ ಸುಳ್ಳಿನ ಕೋಟೆ ಸೆಪ್ಟೆಂಬರ್ನಲ್ಲಿ ಕುಸಿಯಲಾರಂಭಿಸಿದೆ. ಕೊಲೆ ಆರೋಪದಲ್ಲಿ 42 ವರ್ಷ ವಯಸ್ಸಿನ ಸುರೇಂಧ್ರ ಸಿಂಗ್ ರಾಣಾ ಎಂಬ ಸಹೋದ್ಯೋಗಿಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದಾಗ ಎರಡು ವರ್ಷಗಳ ಹಿಂದೆ ಮೋನಿಕಾ ಯಾದವ್ (27) ಎಂಬಾಕೆಯನ್ನು ಎರಡು ವರ್ಷಗಳ ಹಿಂದೆ ಕೊಲೆ ಮಾಡಿರುವುದು ದೃಢಪಟ್ಟಿದೆ.

ಮೃತ ಮಹಿಳೆಯ ದೇಹದ ಅವಶೇಷಗಳನ್ನು ವಶಪಡಿಸಿಕೊಂಡು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿದೆ. ಕುಟುಂಬ ಹಾಗೂ ನಮ್ಮನ್ನು ನಂಬಿಸುವ ಎಲ್ಲ ಕುಟಿಲ ಪ್ರಯತ್ನವನ್ನೂ ರಾಣಾ ಮಾಡುತ್ತಾ ಬಂದಿದ್ದ. ಆದರೆ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಲಾಗಿದೆ ಎಂದು ವಿಶೇಷ ಆಯುಕ್ತ ರವೀಂದ್ರ ಯಾದವ್ ಹೇಳಿದ್ದಾರೆ. ಕಳೆದ ವಾರ ರಾಣಾ, ತಾನು ಮೃತದೇಹವನ್ನು ಹೂತಿದ್ದ ಅಲೀಪುರ ಪ್ರದೇಶದ ಗಿಡಗಂಟಿಗಳಿಂದ ತುಂಬಿದ್ದ ಜಾಗಕ್ಕೆ ಪೊಲೀಸರನ್ನು ಕರೆದೊಯ್ದಿದ್ದಾನೆ. ಪೊಲೀಸರು ಮೃತಮಹಿಳೆಯ ಎಲುಬುಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದರು.

ಮುಖರ್ಜಿ ನಗರದ ಪೊಲೀಸರು ಕುಟುಂಬದ ದೂರನ್ನು ಸ್ವೀಕರಿಸಲು ನಿರಾಕರಿಸಿದ್ದು, ಸತತ 18 ತಿಂಗಳ ಪ್ರಯತ್ನದ ಬಳಿಕ ಏಪ್ರಿಲ್ನಲ್ಲಿ ದೂರು ದಾಖಲಿಸಿಕೊಂಡಿದ್ದಾಗಿ ಕುಟುಂಬ ಆಪಾದಿಸಿದೆ.

ದೆಹಲಿ ಪೊಲೀಸ್ ಪಿಸಿಆರ್ ಘಟಕದಲ್ಲಿ ನೇಮಕಗೊಂಡ ಬಳಿಕ ಯಾದವ್ ಹಾಗೂ ರಾಣಾ 2018ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ರಾಣಾ ಈ ವಿಭಾಗದಲ್ಲಿ 2012ರಿಂದ ಉದ್ಯೋಗದಲ್ಲಿದ್ದ. ಇಬ್ಬರೂ ಸ್ನೇಹಿತರಾಗಿದ್ದರು ಹಾಗೂ ಕೆಲ ವರ್ಷಗಳ ಕಾಲ ಕರೆ ಮತ್ತು ಸಂದೇಶ, ಧ್ವನಿ ಸಂದೇಶಗಳನ್ನು ವಿನಿಯಮ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಯಾದವ್, ರಾಣಾನನ್ನು ತಂದೆಯ ಸ್ಥಾನದಲ್ಲಿ ಕಂಡಿದ್ದಳು ಹಾಗೂ ಆತ ಕೂಡಾ ಈಕೆಯನ್ನು ಬೇಟಾ ಎಂದು ಸಂಬೋಧಿಸುತ್ತಿದ್ದ. ಯಾದವ್ ಮೂಲತಃ ಉತ್ತರ ಪ್ರದೇಶದ ಬುಲಂದರ್ಶಹರ್ನವರಾಗಿದ್ದು, 2020ರಲ್ಲಿ ತವರು ರಾಜ್ಯದಲ್ಲಿ ಪೊಲೀಸ್ ಸೇವೆಗೆ ಆಯ್ಕೆಯಾದ ಬಳಿಕ ದೆಹಲಿ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. 2021ರಲ್ಲಿ ಆಡಳಿತಾತ್ಮಕ ಸೇವೆ ಪರೀಕ್ಷೆಗೆ ಸಜ್ಜಾಗುವ ಸಲುವಾಗಿ ಮುಖರ್ಜಿನಗರದಲ್ಲಿ ಪಿಜಿ ಸೇರಿದ್ದರು. ಆಗಲೇ ವಿವಾಹಿತನಾಗಿದ್ದ ರಾಣಾ ಈಕೆಯನ್ನು ಹಿಂಬಾಲಿಸುತ್ತಿದ್ದ ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News