ಕೇಂದ್ರ ಬಜೆಟ್ 2024 | ಸಾಂಪ್ರದಾಯಿಕ ಹಲ್ವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Update: 2024-07-16 16:53 GMT

ನಿರ್ಮಲಾ ಸೀತಾರಾಮನ್ | PC : NDTV

ಹೊಸದಿಲ್ಲಿ : ಮಂಗಳವಾರದಂದು ಸಾಂಪ್ರದಾಯಿಕ ಹಲ್ವಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಜುಲೈ 23ರಂದು ಲೋಕಸಭೆಯಲ್ಲಿ ಮಂಡನೆಯಾಗಲಿರುವ 2024-25ನೇ ಸಾಲಿನ ಬಜೆಟ್‌ ಸಿದ್ಧತೆಯ ಅಂತಿಮ ಹಂತಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾಕ್ಷಿಯಾದರು.

ಈ ಸಮಾರಂಭವು ರೂಢಿಗತ ಆಚರಣೆಯಾಗಿದ್ದು, ಈ ಸಂದರ್ಭದಲ್ಲಿ ಬಜೆಟ್ ಸಿದ್ಧತೆಯಲ್ಲಿ ಭಾಗಿಯಾಗಿರುವ ವಿತ್ತ ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಸಾಂಪ್ರದಾಯಿಕ ತಿನಿಸಾದ ಹಲ್ವಾವನ್ನು ತಯಾರಿಸಿ, ನೀಡಲಾಗುತ್ತದೆ.

ಬಜೆಟ್ ತಯಾರಿಕೆಯ ಲಾಕ್ ಇನ್ ಪ್ರಕ್ರಿಯೆಯು ಪ್ರಾರಂಭವಾಗುವ ಮೊದಲು ಸಾಂಪ್ರದಾಯಿಕ ಹಲ್ವಾ ಸಮಾರಂಭವನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಬಜೆಟ್‌ನ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ಅಂತಿಮವಾಗಿ ಸಂಸತ್ತಿನಲ್ಲಿ ಮಂಡಿಸುವ ಮೊದಲು ಯಾವುದೇ ಸೋರಿಕೆಯನ್ನು ತಡೆಯಲು ಲಾಕ್-ಇನ್ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.

ಅದರಂತೆ ಬಜೆಟ್ ತಯಾರಿಕೆಯ ಪ್ರಕ್ರಿಯೆಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಎಲ್ಲರಿಗೂ ಸಿಹಿಭಕ್ಷ್ಯವನ್ನು ನೀಡಲಾಗುತ್ತದೆ. ಸಮಾರಂಭದ ನಂತರ, ವಿತ್ತ ಸಚಿವರು ಅಂತಿಮವಾಗಿ ಬಜೆಟ್ ಮಂಡಿಸುವವರೆಗೆ ಅಧಿಕಾರಿಗಳು ವಿತ್ತ ಸಚಿವಾಲಯದಲ್ಲಿಯೇ ಇರಬೇಕಾಗುತ್ತದೆ.

ಈ ಸಮಾರಂಭವನ್ನು ರಾಷ್ಟ್ರ ರಾಜಧಾನಿಯ ಉತ್ತರ ಬ್ಲಾಕಿನ ನೆಲಮಹಡಿಯಲ್ಲಿರುವ ಸಚಿವಾಲಯದಲ್ಲಿ ಆಯೋಜಿಸಲಾಗಿತ್ತು ಹಾಗೂ ಈ ಸಮಾರಂಭದಲ್ಲಿ ವಿತ್ತ ಸಚಿವರು ಹಾಗೂ ಉನ್ನತ ದರ್ಜೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಮಾರಂಭದ ಭಾಗವಾಗಿ ಬಜೆಟ್ ಪ್ರತಿಯನ್ನು ಅವಲೋಕಿಸಿದ ವಿತ್ತ ಸಚಿವೆ ಸೀತಾರಾಮನ್, ಬಜೆಟ್ ಸಿದ್ಧತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಶುಭ ಕೋರಿದರಲ್ಲದೆ, ಬಜೆಟ್ ಸಿದ್ಧತೆಯ ಪರಾಮರ್ಶೆಯನ್ನೂ ನಡೆಸಿದರು.

ಈ ಹಿಂದಿನ ಮೂರು ಸಂಪೂರ್ಣ ಅವಧಿಯಲ್ಲಿ ಮಂಡಿಸಿದಂತೆ ಈ ಬಾರಿ ಕೂಡಾ ಕಾಗದ ರಹಿತ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News