ರಾಮೇಶ್ವರಂ ಕೆಫೆ ಬಾಂಬರ್‌ ತಮಿಳುನಾಡಿನವನು ಎಂದು ಹೇಳಿ ವಿವಾದ ಸೃಷ್ಟಿಸಿದ ಶೋಭಾ ಕರಂದ್ಲಾಜೆ

Update: 2024-03-20 05:50 GMT

Screengrab:X/@arvindgunasekar

ಹೊಸದಿಲ್ಲಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ತಮಿಳುನಾಡಿನ ವ್ಯಕ್ತಿ ಬಾಂಬ್‌ ಇರಿಸಿದ್ದ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿರುವ ವೀಡಿಯೋ ವೈರಲ್‌ ಆಗುವ ಜೊತೆಗೆ ವಿವಾದಕ್ಕೂ ಈಡಾಗಿದ್ದು ಸಚಿವೆ ಕೊನೆಗೂ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

ಸಚಿವೆಯ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಈ ವಿಚಾರದಲ್ಲಿ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್‌ ಮತ್ತು ಅವರ ನಡುವೆ ವ್ಯಾಗ್ಯುದ್ಧವೇ ನಡೆದು ಹೋಯಿತು.

ಶೋಭಾ ಹೇಳಿಕೆಯನ್ನು ಖಂಡಿಸಿ ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ಸ್ಟಾಲಿನ್‌ ಆಗ್ರಹಿಸಿದರೆ ಇದಕ್ಕೆ ತಿರುಗೇಟು ನೀಡಿದ ಸಚಿವೆ, ಸ್ಟಾಲಿನ್‌ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿದ್ದರು. ನಂತರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ ಶೋಭಾ, “ಅದು ಬೆಳಕು ಚೆಲ್ಲುವ ಉದ್ದೇಶ ಹೊಂದಿತ್ತು, ದುರುದ್ದೇಶವಿರಲಿಲ್ಲ,” ಎಂದಿದ್ದಾರೆ.

“ರಾಮೇಶ್ವರಂ ಕೆಫೆ ಸ್ಫೋಟದ ಹಿಂದಿನ ಬಾಂಬರ್‌ನನ್ನು ತಮಿಳುನಾಡಿನ ಕೃಷ್ಣಗಿರಿ ಅರಣ್ಯದಲ್ಲಿ ನಿಮ್ಮ (ಸ್ಟಾಲಿನ್)‌ ಮೂಗಿನ ನೇರಕ್ಕೇ ತರಬೇತಿ ನೀಡಲಾಗಿತ್ತು,” ಎಂದು ಶೋಭಾ ಹೇಳಿದ್ದರು.

“ತಮಿಳುನಾಡಿನ ಜನರು ಇಲ್ಲಿಗೆ ಬರುತ್ತಾರೆ, ಅಲ್ಲಿ ತರಬೇತಿ ಪಡೆಯುತ್ತಾರೆ ಮತ್ತು ಇಲ್ಲಿ ಬಾಂಬ್‌ಗಳನ್ನು ಇರಿಸುತ್ತಾರೆ. ಅವರು ಕೆಫೆಯಲ್ಲಿ ಬಾಂಬ್‌ ಇರಿಸಿದ್ದರು,” ಎಂದು ಮಾರ್ಚ್‌ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಉಲ್ಲೇಖಿಸಿ ಶೋಭಾ ಹೇಳಿದ್ದರು.

ಈ ವೈರಲ್‌ ವೀಡಿಯೋವನ್ನು ರಿಟ್ವೀಟ್‌ ಮಾಡಿದ ಸ್ಟಾಲಿನ್‌ ಆಕೆಯ ಹೇಳಿಕೆಯನ್ನು “ಬೇಜವಾಬ್ದಾರಿಯುತ” ಎಂದು ಬಣ್ಣಿಸಿದರಲ್ಲದೆ ಇಂತಹ ಹೇಳಿಕೆ ನೀಡುವ ಅಧಿಕಾರವನ್ನು ಎನ್‌ಐಎ ಅಧಿಕಾರಿಗಳು ಅಥವಾ ಪ್ರಕರಣದ ತನಿಖೆ ನಡೆಸುವವರು ಮಾತ್ರ ನೀಡಬಹುದು ಎಂದರು.

“ಆಕೆಗೆ ಇಂತಹ ಹೇಳಿಕೆ ನೀಡಲಾಗದು. ತಮಿಳು ಜನರು ಮತ್ತು ಕನ್ನಡಿಗರು ಬಿಜೆಪಿಯ ಈ ವಿಭಜನಾತ್ಮಕ ಹೇಳಿಕೆಯನ್ನು ತಿರಸ್ಕರಿಸುತ್ತಾರೆ. ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕತೆಗೆ ಭಂಗ ತಂದಿದ್ದಕ್ಕಾಗಿ ಶೋಭಾ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸುತ್ತೇನೆ. ಪ್ರಧಾನಿಯಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೆ ಬಿಜೆಪಿಯ ಎಲ್ಲರೂ ಇಂತಹ ಕೊಳಕು ವಿಭಜನಾತ್ಮಕ ರಾಜಕಾರಣ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕು, ಚುನಾವಣಾ ಆಯೋಗ ಈ ದ್ವೇಷದ ಭಾಷಣವನ್ನು ಗಣನೆಗೆ ತೆಗೆದುಕೊಂಡು ತಕ್ಷಣ ಕ್ರಮಕೈಗೊಳ್ಳಬೇಕು,” ಎಂದು ಸ್ಟಾಲಿನ್‌ ಹೇಳಿದ್ದಾರೆ.

ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ಶೋಭಾ ಈ ರೀತಿ ಟ್ವೀಟ್‌ ಮಾಡಿದರು – “ಮಿಸ್ಟರ್‌ ಸ್ಟಾಲಿನ್‌, ನಿಮ್ಮ ಆಡಳಿತದಲ್ಲಿ ತಮಿಳುನಾಡು ಏನಾಗಿದೆ. ನಿಮ್ಮ ಓಲೈಕೆ ರಾಜಕಾರಣವು ತೀವ್ರಗಾಮಿ ಶಕ್ತಿಗಳ ಬಲವೃದ್ಧಿಸಿ ರಾತ್ರಿ ಹಗಲೆನ್ನದೆ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದುಗಳ ಮೇಲಿನ ದಾಳಿಗೆ ಧೈರ್ಯ ನೀಡಿದೆ. ಐಸಿಸ್‌ನಂತಹ ಉಗ್ರ ಸಂಘಟನೆಗಳ ಗುರುತು ಹೊಂದಿರುವ ಬಾಂಬ್‌ ಸ್ಫೋಟಗಳು ನಡೆಯುತ್ತಿವೆ ಮತ್ತು ನೀವು ಕಣ್ಣು ಮುಚ್ಚಿ ಕುಳಿತಿದ್ದೀರಿ, ರಾಮೇಶ್ವರಂ ಬಾಂಬರ್‌ ನಿಮ್ಮ ಮೂಗಿನ ನೇರಕ್ಕೇ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದಿದ್ದ” ಎಂದು ಶೋಭಾ ಹೇಳಿದರಲ್ಲದೆ ತಮಿಳ್‌ ಮಕ್ಕಳ್‌ ಕರ್ನಾಟಕದೊಂದಿಗೆ ದೀರ್ಘಕಾಲದಿಂದ ಸೌಹಾರ್ದಯುತ ಸಂಬಂಧ ಹೊಂದಿದ್ದಾರೆ ಎಂದೂ ಹೇಳಿದರು.

ನಂತರ ಶೋಭಾ ತಮ್ಮ ತಮಿಳು ಸೋದರ ಸೋದರಿಯರಿಂದ ಕ್ಷಮೆ ಯಾಚಿಸಿದರು,

“ನನ್ನ ಮಾತುಗಳು ಬೆಳಕು ಚೆಲ್ಲುವ ಉದ್ದೇಶ ಹೊಂದಿತ್ತು, ಕೆಟ್ಟ ಉದ್ದೇಶವಿರಲಿಲ್ಲ. ಆದರೂ ಅವು ಕೆಲವರಿಗೆ ನೋವು ತಂದಿದೆ ಎಂದು ತಿಳಿದು ಬಂತು. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೆ ನಂಟು ಹೊಂದಿರುವ ಕೃಷ್ಣಗಿರಿ ಕಾಡಿನಲ್ಲಿ ತರಬೇತಿ ಪಡೆದವರತ್ತ ನನ್ನ ಹೇಳಿಕೆ ಗುರಿಯಾಗಿಸಲಾಗಿತ್ತು. ಆದರೆ ತಮಿಳುನಾಡಿನ ಯಾರಿಗಾದರೂ ನೋವಾಗಿದ್ದರೆ ಕ್ಷಮೆಕೋರುತ್ತೇನೆ. ನನ್ನ ಹೇಳಿಕೆ ವಾಪಸ್‌ ಪಡೆಯುತ್ತೇನೆ,” ಎಂದು ಶೋಭಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News