ವಿನೇಶ್‌ ಫೋಗಟ್‌ ಅನರ್ಹತೆ ವಿಚಾರ ಚರ್ಚೆಗೆ ಅನುಮತಿ ನಿರಾಕರಣೆ: ರಾಜ್ಯಸಭೆಯಿಂದ ಹೊರನಡೆದ ಇಂಡಿಯಾ ಸಂಸದರು

Update: 2024-08-08 15:05 GMT

ಸಭಾಪತಿ ಜಗದೀಪ್‌ ಧನ್ಕರ್‌ / ಮಲ್ಲಿಕಾರ್ಜುನ ಖರ್ಗೆ (Photo: PTI)

ಹೊಸದಿಲ್ಲಿ: ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿರುವ ವಿಷಯದ ಬಗ್ಗೆ ಚರ್ಚಿಸಲು ಸಭಾಪತಿ ಜಗದೀಪ್ ಧನ್ಕರ್ ಅವಕಾಶ ನೀಡದಿರುವುದನ್ನು ಪ್ರತಿಭಟಿಸಿ ಗುರುವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದವು.

ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪೋಗಟ್ ಅನರ್ಹತೆ ವಿಷಯವನ್ನು ಪ್ರಸ್ತಾಪಿಸಿ, ‘‘ಈ ಘಟನೆಯ ಹಿಂದೆ ಯಾರಿದ್ದಾರೆ’’ ಎನ್ನುವುದನ್ನು ನಾನು ತಿಳಿಯ ಬಯಸುತ್ತೇನೆ ಎಂದು ಹೇಳಿದರು.

ಆದರೆ, ಈ ವಿಷಯವನ್ನು ಪ್ರಸ್ತಾಪಿಸಲು ಸಭಾಪತಿ ಧನ್ಕರ್, ಖರ್ಗೆಗೆ ಅವಕಾಶ ನೀಡಲಿಲ್ಲ. ಈ ನಡುವೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಲು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರಿಯಾನ್ ಎದ್ದುನಿಂತರು. ಅವರಿಗೂ ಸಭಾಪತಿ ಧನ್ಕರ್ ಅನುಮತಿ ನೀಡಲಿಲ್ಲ.

ಇದೇ ಸಂದರ್ಭದಲ್ಲಿ, ತೃಣಮೂಲ ಕಾಂಗ್ರೆಸ್ ಸಂಸದ ಒಬ್ರಿಯಾನ್‌ರ ‘‘ವರ್ತನೆ’’ಯನ್ನು ಧನ್ಕರ್ ಖಂಡಿಸಿದರು. ‘‘ನೀವು ಸಭಾಪತಿಯನ್ನು ಗದರಿಸುತ್ತಿದ್ದೀರಿ. ಈ ವರ್ತನೆಯನ್ನು ನಾನು ಖಂಡಿಸುತ್ತೇನೆ. ಇಂಥ ವರ್ತನೆಯನ್ನು ಯಾರಾದರೂ ಸಹಿಸಲು ಸಾಧ್ಯವೇ?’’ ಎಂದು ಅವರು ಹೇಳಿದರು.

ಆಗ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.

ಬಳಿಕ ಮಾತನಾಡಿದ ಧನ್ಕರ್, ‘‘ವಿನೇಶ್ ಫೋಗಟ್ ಘಟನೆ ಬಗ್ಗೆ ತಮ್ಮ ಹೃದಯಗಳು ಮಾತ್ರ ಮರುಗುತ್ತಿವೆ ಎಂಬುದಾಗಿ ಅವರು (ಪ್ರತಿಪಕ್ಷಗಳು) ಭಾವಿಸಿದ್ದಾರೆ. ಈ ಹುಡುಗಿಯಿಂದಾಗಿ ಇಡೀ ದೇಶವೇ ನೋವು ಅನುಭವಿಸುತ್ತಿದೆ. ಪ್ರತಿಯೊಬ್ಬರೂ ಈ ಘಟನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಹಣ ಗಳಿಸಲು, ರಾಜಕೀಯಗೊಳಿಸಲು ಆ ಘಟನೆಯನ್ನು ಉಪಯೋಗಿಸುವುದು ಆ ಹುಡುಗಿಗೆ ಮಾಡುವ ಅಗೌರವವಾಗುತ್ತದೆ. ಆ ಹುಡುಗಿ ಸಾಗಬೇಕಾದ ದಾರಿ ತುಂಬಾ ದೂರವಿದೆ’’ ಎಂದು ಹೇಳಿದರು.

ಸಭಾಪತಿಯಿಂದಲೂ ಸಭಾತ್ಯಾಗ!

ನನಗೆ ಪ್ರತಿಪಕ್ಷಗಳಿಂದ ಬೆಂಬಲ ಸಿಗುತ್ತಿಲ್ಲ, ಹಾಗಾಗಿ, ಈ ಹುದ್ದೆಯನ್ನು ನಿಭಾಯಿಸಲು ನಾನು ಯೋಗ್ಯನಲ್ಲ ಎಂಬ ಭಾವನೆ ಕಾಡುತ್ತಿದೆ ಎಂದು ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಕರ್ ಗುರುವಾರ ಹೇಳಿದರು. ಬಳಿಕ, ನಾನು ಭಾರವಾದ ಹೃದಯದೊಂದಿಗೆ ಹೋಗುತ್ತಿದ್ದೇನೆ ಎಂದು ಅವರು ಘೋಷಿಸಿದರು.

ಒಲಿಂಪಿಕ್ಸ್‌ನಿಂದ ವಿನೇಶ್ ಫೋಗಟ್‌ರನ್ನು ಅನರ್ಹಗೊಳಿಸಿರುವ ವಿಷಯದ ಬಗ್ಗೆ ಚರ್ಚೆ ನಡೆಯಬೇಕು ಎಂಬುದಾಗಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸಂಸದರು ಆಗ್ರಹಿಸಿದ ಬಳಿಕ, ಸದನದಲ್ಲಿ ತಲೆದೋರಿದ ಗದ್ದಲದ ಹಿನ್ನೆಲೆಯಲ್ಲಿ ಧನ್ಕರ್ ಈ ಮಾತುಗಳನ್ನು ಆಡಿದ್ದಾರೆ.

ನಾನು ಸ್ವಲ್ಪ ಸಮಯ ಇಲ್ಲಿಂದ ಹೋಗಬೇಕಾಗಿದೆ ಎಂದು ಅವರು ಹೇಳಿದರು. ಆದಾಗ್ಯೂ, ನಾನು ನನ್ನ ಪ್ರತಿಜ್ಞೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.

ಸ್ವಲ್ಪ ಹೊತ್ತಿನ ಬಳಿಕ ಮರಳಿದ ಅವರು, ‘‘ಈ ಗದ್ದಲವನ್ನು ನೋಡಿದ ಬಳಿಕ, ಆತ್ಮಾವಲೋಕನ ಮಾಡಿಕೊಳ್ಳುವುದಕ್ಕಾಗಿ ನಾನು ಇಲ್ಲಿಂದ ಹೋದೆ. ಇಂಥ ಗದ್ದಲವು ಹಿಂದೆಂದೂ ನಡೆದಿಲ್ಲ ಹಾಗೂ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’’ ಎಂದು ಹೇಳಿದರು.

ಸಭಾಪತಿ-ಒಬ್ರಿಯಾನ್ ಜಟಾಪಟಿ

ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿರುವ ವಿಷಯದಲ್ಲಿ ರಾಜ್ಯಸಭೆಯಲ್ಲಿ ಚರ್ಚೆ ನಡೆಯಬೇಕು ಎನ್ನುವ ವಿಷಯದಲ್ಲಿ ಗುರುವಾರ ಸಭಾಪತಿ ಜಗದೀಪ್ ಧನ್ಕರ್ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಮ್‌ಸಿ) ಸಂಸದ ಡೆರೆಕ್ ಒಬ್ರಿಯಾನ್ ನಡುವೆ ಜಟಾಪಟಿ ನಡೆಯಿತು.

ಚರ್ಚೆಗೆ ಅನುಮತಿ ನೀಡಲು ಧನ್ಕರ್ ನಿರಾಕರಿಸಿದಾಗ ಅದನ್ನು ಒಬ್ರಿಯಾನ್ ತೀವ್ರವಾಗಿ ಪ್ರತಿಭಟಿಸಿದರು. ಅವರ ‘‘ವರ್ತನೆ’’ಯನ್ನು ಧನ್ಕರ್ ಖಂಡಿಸಿದರು. ಟಿಎಮ್‌ಸಿ ಸಂಸದ ಸಭಾಪತಿಯನ್ನು ನಿಂದಿಸುತ್ತಿದ್ದಾರೆ ಎಂದು ಧನ್ಕರ್ ಆರೋಪಿಸಿದರು.

‘‘ನೀವು ಸಭಾಪತಿಗೆ ಬೈಯುತ್ತಿದ್ದೀರಿ. ಈ ವರ್ತನೆಯನ್ನು ನಾನು ಖಂಡಿಸುತ್ತೇನೆ. ಸದನದಲ್ಲಿ ನಿಮ್ಮ ವರ್ತನೆ ಅತ್ಯಂತ ಕೆಟ್ಟದಾಗಿದೆ. ಮುಂದಿನ ಸಲ ನಾನು ನಿಮಗೆ ಬಾಗಿಲು ತೋರಿಸುತ್ತೇನೆ’’ ಎಂದು ಧನ್ಕರ್, ಒಬ್ರಿಯಾನ್‌ರನ್ನು ಉದ್ದೇಶಿಸಿ ಹೇಳಿದರು.

ಈ ವಿಷಯದಲ್ಲಿ ಅವರು ಪ್ರತಿಪಕ್ಷದ ಹಿರಿಯ ಸದಸ್ಯರನ್ನೂ ಟೀಕಿಸಿದರು. ಒಬ್ರಿಯಾನ್‌ರ ವರ್ತನೆಯನ್ನು ಅವರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದರು. ‘‘ಈ ವರ್ತನೆ ಅವರಿಗೆ ಉಚಿತವಲ್ಲ’’ ಎಂದು ಸಭಾಪತಿ ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News